ಭಾರತದ 100 ಕೋಟಿ ಲಸಿಕೆ ಸಾಧನೆಗೆ ಇಡೀ ವಿಶ್ವವೇ ಬಹುಪರಾಕ್!​

masthmagaa.com:

ನಾವೆಲ್ಲರೂ ಒಂದಷ್ಟು ಮಟ್ಟಿಗೆ ಆರಾಮಾಗಿದ್ದೀವಿ ಅಂದ್ರೆ ಅದಕ್ಕೆ ಕಾರಣ ಕೊರೋನಾ ಹಾವಳಿ ಕಮ್ಮಿಯಾಗಿರೋದು. ಕೊರೋನಾ ಕಮ್ಮಿಯಾಗಿರೋದ್ರ ಹಿಂದೆ ಲಸಿಕೆಯ ಪಾತ್ರ ತುಂಬಾ ಮುಖ್ಯ. ಇಂಥಾ ಲಸಿಕೆ ಅಭಿಯಾನದಲ್ಲಿ ಭಾರತ ಇವತ್ತು ಹೊಸ ಮೈಲಿಗಲ್ಲು ಸಾಧಿಸಿದೆ. ದೇಶದಲ್ಲಿ ಇದುವರೆಗೆ ಚುಚ್ಚಿದ ಕೊರೋನಾ ಲಸಿಕೆಯ ಡೋಸ್ ಬರೋಬ್ಬರಿ 100 ಕೋಟಿ ದಾಟಿದೆ. ಕೇವಲ 9 ತಿಂಗಳ ಅವಧಿಯಲ್ಲಿ ಭಾರತ ಈ ಸಾಧನೆ ಮಾಡಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ, ‘ಭಾರತ ಇತಿಹಾಸ ಬರೆದಿದೆ’ ಎಂದಿದ್ದಾರೆ. ಅಲ್ಲದೆ ಇದು ಎಲ್ಲಾ ಭಾರತೀಯರ ಸಾಧನೆ. ಈ ಸಾಧನೆಗೆ ಸಹಕರಿಸಿದ ಲಸಿಕೆ ಉತ್ಪಾದಕರು, ಆರೋಗ್ಯ ಕಾರ್ಯಕರ್ತರು ಮತ್ತು ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅಭಿನಂದನೆ ಎಂದಿದ್ದಾರೆ. ಜೊತೆಗೆ ಇವತ್ತು ದೆಹಲಿಯ ಆರ್​ಎಂಎಲ್​ ಆಸ್ಪತ್ರೆಯ ವ್ಯಾಕ್ಸಿನೇಷನ್​ ಕೇಂದ್ರಕ್ಕೆ ಭೇಟಿ ನೀಡಿದ್ರು. ಈ ವೇಳೆ ಆರೋಗ್ಯ ಕಾರ್ಯಕರ್ತರಿಗೆ ಥಮ್ಸ್ ಅಪ್​ ತೋರಿಸಿದ್ರು. ಲಸಿಕೆ ಅಭಿಯಾನದಲ್ಲಿ 100 ಕೋಟಿ ಡೋಸ್​ ಸಾಧನೆ ಮಾಡಿದ ವಿಚಾರವನ್ನ ದೇಶದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಇವತ್ತು ಅನೌನ್ಸ್ ಮಾಡಲಾಯ್ತು. ಸ್ಪೈಸ್​​ಜೆಟ್​​ ವಿಮಾನದಲ್ಲಿ ಒಂದು ಪೋಸ್ಟರ್​ ಕೂಡ ಕಾಣ್ತು. ಅದರಲ್ಲಿ ‘100 ಕೋಟಿ, ಜೀತ್ ​ಕೆ ಟೀಕೆ’ ‘ಕೊರೋನಾ ಹಾರೇಗಾ, ದೇಶ್​ ಜೀತೇಗಾ’ ಅನ್ನೋ ಪದಗಳಿದ್ವು. ಜೊತೆಗೆ ಆರೋಗ್ಯ ಕಾರ್ಯಕರ್ತರು ಮತ್ತು ಪ್ರಧಾನಿ ಮೋದಿಯ ಫೋಟೋ ಇತ್ತು.

ಐಸಿಎಂರ್ ನಿರ್ದೇಶಕ ಬಲರಾಮ್​ ಭಾರ್ಗವ ಮಾತನಾಡಿ, ಇಡೀ ವಿಶ್ವದಲ್ಲಿ ಇದುವರೆಗೆ 700 ಕೋಟಿ ಡೋಸ್​ ಲಸಿಕೆ ಚುಚ್ಚಲಾಗಿದೆ. ಇದರಲ್ಲಿ 100 ಕೋಟಿ ಪಾಲು ಭಾರತದ್ದೇ ಇದೆ ಅನ್ನೋದು ಖುಷಿಯ ವಿಚಾರ ಎಂದಿದ್ದಾರೆ.
ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೋಸ್ ಅಧನಾಮ್, ಈ ಸಾಧನೆಗೆ ಭಾರತಕ್ಕೆ ಅಭಿನಂದನೆ ಅಂತ ಹೇಳಿದ್ದಾರೆ.

ಅಂದ್ಹಾಗೆ ಸುಮಾರು 135 ಕೋಟಿ ಜನಸಂಖ್ಯೆಯ ಭಾರತದಲ್ಲಿ 71 ಕೋಟಿ ಜನರಿಗೆ ಒಂದು ಡೋಸ್​ ಲಸಿಕೆ ಹಾಕಲಾಗಿದೆ. 29 ಕೋಟಿ ಜನರಿಗೆ ಎರಡು ಡೋಸ್​ ಲಸಿಕೆ ಹಾಕಲಾಗಿದೆ. ಅತಿಹೆಚ್ಚು ಲಸಿಕೆ ಹಾಕಿರೋ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯ ಪ್ರದೇಶ ಮೊದಲ ಐದು ಸ್ಥಾನದಲ್ಲಿವೆ. ಕರ್ನಾಟಕ ಏಳನೇ ಸ್ಥಾನದಲ್ಲಿದೆ. ಈ ವರ್ಷ ಅಂತ್ಯದೊಳಗೆ ಎಲ್ಲರಿಗೂ ಕನಿಷ್ಠ 1 ಡೋಸ್ ಲಸಿಕೆ ಹಾಕೋ ಗುರಿಯನ್ನ ಹೊಂದಿದೆ ಕೇಂದ್ರ ಸರ್ಕಾರ. ಶೀಘ್ರದಲ್ಲೇ ಮಕ್ಕಳ ಲಸಿಕೆ ಕೂಡ ಬರುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply