ಪ್ರಧಾನಿ ಮೋದಿಗೆ ‘ವಾಸ್ತವ’ ಪರಿಸ್ಥಿತಿ ವಿವರಿಸಿದ ಸೇನಾ ಅಧಿಕಾರಿಗಳು

masthmagaa.com:

ಲಡಾಖ್ ಪೂರ್ವ ಭಾಗದ ವಾಸ್ತವ ಗಡಿ ರೇಖೆಯಲ್ಲಿ ಭಾರತ-ಚೀನಾ ನಡುವೆ ಜೂನ್ 15ರಂದು ಸಂಘರ್ಷ ನಡೆದ ಬೆನ್ನಲ್ಲೇ ಪ್ರಧಾನಿ ಮೋದಿ ಇವತ್ತು ದಿಢೀರ್ ಅಂತ ಲಡಾಖ್​ಗೆ ಭೇಟಿ ನೀಡಿದ್ದಾರೆ. ಸದ್ಯ ನಿಮು ಫಾರ್ವರ್ಡ್​ ಪೋಸ್ಟ್​ನಲ್ಲಿರೋ ಪ್ರಧಾನಿ ಮೋದಿಗೆ ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವೇಳೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಬಿಪಿನ್ ರಾವತ್ ಮತ್ತು ಭೂಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಕೂಡ ಇದ್ದರು.

 

ಇಂದು ಬೆಳಗ್ಗೆ ನಿಮುಗೆ ಭೇಟಿ ನೀಡಿದ ಪ್ರಧಾನಿ ಮೋದಿ ಭೂಸೇನೆ, ವಾಯುಸೇನೆ ಮತ್ತು ಐಟಿಬಿಪಿ ಯೋಧರ ಜೊತೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ವಿಶಾಲ ಪ್ರದೇಶದಲ್ಲಿ ಸೇರಿದ ಯೋಧರು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲರಿಗೂ ಮಾದರಿಯಾದರು.

ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿರುವ ನಿಮು ಪ್ರದೇಶವು ಝನ್ಸ್​ಕಾರ್ ಪರ್ವತ ಶ್ರೇಣಿಗಳಿಂದ ಸುತ್ತುವರಿದಿದ್ದು, ಸಿಂಧೂ ನದಿ ತಟದಲ್ಲಿ ಹರಡಿಕೊಂಡಿದೆ. ಇಂದು ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಮತ್ತು ಭೂಸೇನಾ ಮುಖ್ಯಸ್ಥರು ಲೇಹ್​ಗೆ ಭೇಟಿ ನೀಡಲಿದ್ದರು. ಆದ್ರೆ ರಾಜ್​ನಾಥ್​ ಸಿಂಗ್ ಭೇಟಿ ದಿನಾಂಕ ಬದಲಾಯಿಸಲಾಗಿದೆ.

ಜೂನ್ 15-16ರಂದು ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದು ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಬದಿಯಲ್ಲೂ ಸಾವು ನೋವು ಸಂಭವಿಸಿದೆ ಎನ್ನಲಾಗಿತ್ತು. ಆದ್ರೆ ಚೀನಾ ಇದುವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ಈ ಸಂಘರ್ಷದ ಬಳಿಕ ವಾಸ್ತವ ಗಡಿ ರೇಖೆ (LAC) ಬಳಿ ಕಳೆದ ಹಲವು ದಿನಗಳಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

-masthmagaa.com

Contact Us for Advertisement

Leave a Reply