ಜೆಡಿಎಸ್‌ನಿಂದ ಪ್ರಜ್ವಲ್‌ ಸಸ್ಪೆಂಡ್:‌ ಶಿಸ್ತು ಕ್ರಮ ಅಂದ ಅಮಿತ್ ಶಾ!

masthmagaa.com:

ಹಾಸನದಿಂದ ದಿಲ್ಲಿವರೆಗೆ ಸದ್ಯ ತೀವ್ರ ಚರ್ಚೆಗೆ ಕಾರಣವಾಗಿರೊ ಸಂಸದ ಪ್ರಜ್ವಲ್‌ ರೇವ‍ಣ್ಣನ ಪೆನ್‌ಡ್ರೈವ್‌ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೀತಿದೆ. ಈ ವಿಚಾರವಾಗಿ SIT ತನಿಖೆ ಪೂರ್ಣಗೊಳ್ಳೋವರೆಗೆ ಪ್ರಜ್ವಲ್‌ ರೇವಣ್ಣ ಅವ್ರನ್ನ ಜೆಡಿಎಸ್‌ ಪಕ್ಷದಿಂದಲೇ ಅಮಾನತು (ಮಾಡಲು ರಾಷ್ಟ್ರೀಯ ಅಧ್ಯಕ್ಷರಿಗೆ ಶಿಫಾರಸ್ಸು) ಮಾಡಲಾಗಿದೆ ಅಂತ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅಧಿಕೃತ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ HD ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನು ಈ ಸಭೆ ನಂತ್ರ ಮಾತಾಡಿರೋ ಕುಮಾರಸ್ವಾಮಿ, ಪ್ರಕರಣದ ತನಿಖೆ ನಡೆಸುವುದರ ಜತೆಗೆ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಹಂಚಿದ ಮಹಾನ್ ನಾಯಕ ಯಾರು ಎಂಬುದರ ಬಗ್ಗೆಯೂ ತನಿಖೆ ಆಗಬೇಕು. ಕಾಂಗ್ರೆಸ್‌ಗೆ ನಾಡಿನ ಮಹಿಳೆಯರು, ಬಡ ಕುಟುಂಬದ ಮೇಲೆ ಗೌರವ ಇದ್ದರೆ, ವೀಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಕ್ರಮ ಆಗಲಿ. ಪ್ರಜ್ವಲ್ ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ. ಎರಡು ಸಾವಿರ ವೀಡಿಯೋ ಯಾವ ಫ್ಯಾಕ್ಟರಿಯಲ್ಲಿ ತಯಾರು ಮಾಡಿದ್ರಿ? ಎರಡು ಸಾವಿರ ಅಂದ್ರೆ ಎಷ್ಟು ವರ್ಷ ಬೇಕು. ಹಾಗಿದ್ದರೆ ಎಂಪಿ ಆಗಿ ಅವರೇನು ಕೆಲಸ ಮಾಡಿಲ್ಲವಾ? ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪೆನ್ ಡ್ರೈವ್ ಹಂಚಿ ನೂರಾರು ಮಹಿಳೆಯರ ಮಾನವನ್ನು ಬೀದಿಗೆ ತಂದಿದ್ದಾರೆ. ಮಹಿಳೆಯರ ಮಾನ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಅಲ್ಲವೇ ಅಂದಿದ್ದಾರೆ. ಅಲ್ಲದೇ ಡಿ.ಕೆ.ಶಿವಕುಮಾರ್ ನೀನು ನೀಚ. ಹೆತ್ತ ತಾಯಿ ಯೌವ್ವನದ ಬಗ್ಗೆ ಮಾತಾಡೋ ನೀನು. ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಿದ್ದೀಯ. ಹೆಣ್ಣುಮಗಳ ಮುಖ ಬ್ಲರ್ ಮಾಡಬಹುದಿತ್ತು. ಆದರೆ ಇಷ್ಟು ಕೀಳುಮಟ್ಟದಲ್ಲಿ ಹೆಣ್ಣುಮಕ್ಕಳು ಪೋಟೋ ತೋರಿಸಿದ್ದೀರಿ. ಎಷ್ಟರಮಟ್ಟಿಗೆ ಕಾಂಗ್ರೆಸ್ ನಾಯಕರು ಮರ್ಯಾದೆ ಕೊಟ್ಟಿದ್ದೀರಿ? ಚಕ್ರ ಯಾವ ಕಡೆ ತಿರುಗುತ್ತೆ ಎನ್ನುವುದು ಮಹಾನ್ ನಾಯಕರಿಗೆ ಈಗ ಅರ್ಥ ಆಗಿದೆ. ಸಿಎಂಗೂ ಈಗ ಅರ್ಥವಾಗ್ತಾ ಇದು? ಯಾವ ಕಡೆ ತಿರುಗುತ್ತಿದೆ ಅಂತ. ಇಲ್ಲಿಂದ ರಾಜಕೀಯದ ಹೊಸ ಅಧ್ಯಾಯ ಶುರುವಾಗುತ್ತದೆ ಅಂದಿದ್ದಾರೆ. ಅಲ್ಲದೇ ಸಿದ್ದರಾಮಯ್ಯನವರು ಈ ಹಿಂದೆ ತಮ್ಮ ಕುಟುಂಬದಲ್ಲಿ ನಡೆದ ದುರ್ಘಟನೆಯನ್ನು ಮರೆತಿದ್ದಾರೆ. ಆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಕೆಲಸವನ್ನು ನಾನ್ಯಾವತ್ತೂ ಮಾಡಲಿಲ್ಲ. ಆದರೆ, ಸಮಯ ಬಂದಾಗ ಅದರ ಪ್ರಸ್ತಾಪ ಮಾಡುತ್ತೇವೆ ಅಂದಿದ್ದಾರೆ.


ಇದಕ್ಕೆ ರಿಯಾಕ್ಟ್‌ ಮಾಡಿರೋ ಡಿಸಿಎಂ ಡಿ.ಕೆ ಶಿವಕುಮಾರ್‌, ಅವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ; ಪೆನ್ ಡ್ರೈವ್ ಇಟ್ಟುಕೊಂಡು ಹೆದರಿಸುವ ಚಿಲ್ಲರೆ ಕೆಲಸ ಮಾಡಲ್ಲ ಅಂದಿದ್ದಾರೆ. ಅಲ್ಲದೇ ಹಾಗೆಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಅವರ ಜತೆಗೆ ಇದ್ದವರು ಯಾರು? ಯಾರು ಯಾರಿಗೆ ಕರೆ ಮಾಡಿದ್ರು ಅನ್ನೋದನ್ನ ಅವರನ್ನೇ ಕೇಳಬೇಕು ಅಂದಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯ, ವಿಡಿಯೋಗಳು ಹಾಗೂ ಪೆನ್ ಡ್ರೈವ್ ಬಗ್ಗೆ ತನಿಖೆ ನಡೆಸಲು ಎಸ್ಐಟಿಯಿಂದ ಮೂರು ತಂಡಗಳನ್ನು ರಚನೆ ಮಾಡಲಾಗಿದ್ದು, ಮೈಸೂರು ಎಸ್ ಪಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಒಂದು ತಂಡ, ಎಸ್‌ಪಿ ಸುಮನ್ ಡಿ ಪನ್ನೇಕರ್ ನೇತೃತ್ವದಲ್ಲಿ ಇನ್ನೊಂದು ತಂಡ ಹಾಗೆ ಮತ್ತೊಂದು ತಾಂತ್ರಿಕ ತಂಡ ರಚನೆಯಾಗಿದೆ. ಅತ್ತ ಈ ಘಟನೆ ಕುರಿತು ಮೂರು ದಿನದೊಳಗೆ ವರದಿ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಕೇಳಿದೆ.


ಇನ್ನೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಮಾತನಾಡಿದ್ದಾರೆ. ಪ್ರಜ್ವಲ್‌ ಕೇಸ್‌ನಲ್ಲಿ ಕಠಿಣ ಕ್ರಮ ಕೈಗೊ‍ಳ್ಳಲಾಗುವುದು. ಜೆಡಿಎಸ್‌ ಕೂಡ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮಹಿಳೆಯರನ್ನು ಅವಮಾನಿಸಬಾರದು. ಇದನ್ನು ನಾವು ಬಲವಾಗಿ ಖಂಡಿಸ್ತೇವೆ. ಇದು ಬಿಜೆಪಿಯ ಸ್ಪಷ್ಟ ನಿಲುವಾಗಿದೆ ಅಂತ ಹೇಳಿದ್ದಾರೆ. ಅಲ್ದೇ ನಮ್ಮ ಮೇಲೆ ಆರೋಪ ಮಾಡ್ತಿರೊ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ. ಈ ವಿಚಾರವಾಗಿ ಇನ್ನು ಏಕೆ ಕ್ರಮ ಕೈಗೊಂಡಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಅಂದ್ಹಾಗೆ ಕಾಂಗ್ರೆಸ್‌ ನಾಯಕಿ ಪ್ರಿಯಂಕಾ ಗಾಂಧಿ, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ವಿದೇಶಕ್ಕೆ ಓಡಿ ಹೋದವನ ಬಗ್ಗೆ ಪ್ರಧಾನಿ ಮೋದಿಗೆ ಮಾಹಿತಿ ಇರಲಿಲ್ಲವೇ ಅಂತ ಪ್ರಶ್ನೆ ಮಾಡಿದ್ರು.

ಇನ್ನೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ಅವ್ರ ಮಾಜಿ ಕಾರು ಚಾಲಕ ಕಾರ್ತಿಕ್‌ ಸ್ಪೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ಹೊಳೆ ನರಸಿಪುರದ ಬಿಜೆಪಿ ನಾಯಕ, ವಕೀಲ ದೇವರಾಜೇ ಗೌಡ ಅವ್ರು ನಾನು ಈ ಹಿಂದೆ ಬಿಜೆಪಿಗೆ ಎಚ್ಚರಿಕೆ ಕೊಟ್ಟಿದೆ. ಡಿ.ಕೆ ಶಿವಕುಮಾರ್‌ ಬಳಿ ಈ ವಿಡಿಯೋ ಇದೆ ಅಂತ ಹೇಳಿದ್ದೆ ಅಂದಿದ್ರು… ಆದ್ರೆ ಕಾರ್ತಿಕ್‌ ಅದನ್ನೀಗ ಅಲ್ಲಗಳೆದಿದ್ದಾರೆ. ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಮಾತನಾಡಿ, ನಾನು 15 ವರ್ಷದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಅವ್ರ ಫ್ಯಾಮಿಲಿಗೆ ಕಾರು ಡ್ರೈವರ್‌ ಆಗಿ ಕೆಲಸ ಮಾಡಿದ್ದೇನೆ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಿಂಸೆ ಕೊಟ್ಟು ಹಲ್ಲೆ ಮಾಡಿದ್ರು. ಹಾಗಾಗಿ ಕೆಲಸ ಬಿಟ್ಟು ಅವರ ಮನೆಯಿಂದ ಹೊರಬಂದೆ ಅಂತೇಳಿದ್ದಾರೆ. ಅಲ್ದೇ ಬಿಜೆಪಿ ಮುಖಂಡ, ದೇವರಾಜೇಗೌಡ ಅವ್ರು ದೇವೇಗೌಡರ ಫ್ಯಾಮಿಲಿ ವಿರುದ್ದ ಹೋರಾಟ ಮಾಡ್ತಿದ್ರು. ಇನ್ನು ಪ್ರಜ್ವಲ್‌ ಯಾವುದೇ ವಿಡಿಯೋ ರಿಲೀಸ್‌ ಮಾಡ್ಬಾರ್ದು ಅಂತ ನನ್ನ ವಿರುದ್ದ ಸ್ಟೇ ತಂದ್ರು. ಈ ವೇಳೆ ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ ಹಾಗೂ ನಿನ್ನ ಬಳಿ ವಿಡಿಯೋ ನನಗೆ ಕೊಡು ನಾನು ಯಾರಿಗೂ ತೋರಿಸೊಲ್ಲ ಅಂತ ದೇವರಾಜ್‌ ಹೇಳಿದ್ರು. ಆಗ ಅವರನ್ನ ನಂಬಿ ನಾನು ಆ ವಿಡಯೋದ ಒಂದು ಕಾಪಿಯನ್ನ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಗೊತ್ತಿಲ್ಲ. ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಕೊಟ್ಟಿಲ್ಲ. ಅದ್ರಲ್ಲೂ ಕಾಂಗ್ರೆಸ್‌ನವರ ಮೇಲೆ ನಂಬಿಕೆ ಇಲ್ಲದ್ದಕ್ಕೆ ನಾನು ಅವ್ರಿಗೆ ಈ ವಿಡಿಯೋ ಕೊಟ್ಟಿಲ್ಲ ಅಂತೇಳಿದ್ದಾರೆ. ರೇವಣ್ಣ ಅವ್ರ , ಮನೆಯಲ್ಲಿ ಏನೆಲ್ಲಾ ನಡೆದಿದೆ ನಾನು ಅದನ್ನ ನೋಡಿದ್ದೇನೆ. ಎಲ್ಲವನ್ನೂ ಎಸ್‌ಐಟಿ ಮುಂದೆ ಹೇಳ್ತೇನೆ. ಯಾರಿಗೆ ಅನ್ಯಾಯ ಆಗಿದೆಯೋ ಧೈರ್ಯವಾಗಿ ಮುಂದೆ ಬನ್ನಿ ಅಂತ ಕಾರ್ತಿಕ್ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ NSUI ಸೇರಿದಂತೆ ರಾಜ್ಯದ ಹಲವೆಡೆ ಪ್ರಜ್ವಲ್‌ ವಿರುದ್ದ ಪ್ರತಿಭಟನೆ ಶುರುವಾಗಿವೆ.

-masthmagaa.com

Contact Us for Advertisement

Leave a Reply