ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ! ಗೌಡ್ರ ಕುಟುಂಬದಲ್ಲಿ ವ್ಯಾಪಕ ಹೊಗೆ!

masthmagaa.com:

ಹಾಸನ ಸಂಸದ, NDA ಮೈತ್ರಿಕೂಟದ ಅಭ್ಯರ್ಥಿ, ದಳಪತಿಗಳ ಕುಡಿ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಪ್ರಕರಣ ಈಗ, ಕೇವಲ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಜ್ವಲ್‌ ರೇವಣ್ಣ ವಿರುದ್ಧ ಸ್ವಪಕ್ಷದಲ್ಲೇ ಭಾರೀ ವಿರೋಧ ವ್ಯಕ್ತವಾಗಿದೆ. ಹಾಸನದ ಲೀಲೆಗಳು’ ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯದಲ್ಲೆಡೆ ಮುಜುಗರಕ್ಕೆ ಒಳಗಾಗಿರುವುದಲ್ಲದೆ, ಪಕ್ಷದ ಹೆಸರು ಹೇಳಲು ಸಹ ಹೇಸಿಗೆ ಅನಿಸುವಂತ ಸ್ಥಿತಿಗೆ ತಲುಪಿದ್ದೇವೆ ಅಂತ ಜೆಡಿಎಸ್‌ ಶಾಸಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಅವ್ರನ್ನ ಜೆಡಿಎಸ್​ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಅಲ್ಲದೇ ಯಾರು ಎಲ್ಲಿ ಹೋಗುತ್ತಾರೆ ಎಂದು ಕಾಯಲು ಆಗುತ್ತಾ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ನಾವೇ ಹೇಳುತ್ತಿದ್ದೇವಲ್ಲಾ, ಸಮಗ್ರ ತನಿಖೆ ಆಗಬೇಕೆಂದು. ಬಿಜೆಪಿಗೂ ಇದಕ್ಕೂ ಯಾವುದೇ ರೀತಿ ಸಂಬಂಧ ಇಲ್ಲ. ನನಗೂ ಈ ಘಟನೆಗೂ ಯಾವುದೇ ಸಂಬಂಧ ಇಲ್ಲ. ನನ್ನ, ನನ್ನ ತಂದೆ ಬಗ್ಗೆ ಸಂಶಯ ಪಡಬೇಡಿ. ʻರೇವಣ್ಣನವ್ರ ಕುಟುಂಬ ಅಂದ್ರೆ… ರೇವಣ್ಣನವ್ರು, ಅವ್ರ ಪತ್ನಿ ಮತ್ತವ್ರ ಇಬ್ರು ಮಕ್ಕಳು. ಸೋ ಇಲ್ಲಿ ದೇವೇಗೌಡರ ಕುಟುಂಬ ಅನ್ನೋ ಪ್ರಶ್ನೆ ಬರಲ್ಲ. ಆಲ್ರೆಡಿ ನಾವು ಡಿವೈಡ್‌ ಆಗಿರೋರು…ಬೇರೆ ಬೇರೆ ವಾಸವಾಗಿದ್ದೇವೆ. ಬೇರೆ ಬೇರೆ ವ್ಯವಹಾರಗಳಿವೆ..ರಾಜಕೀಯವಾಗಿ ಸಭೆಗಳಲ್ಲಿ ಭಾಗವಹಿಸ್ತೀವಿ ಅಷ್ಟೇ ಅಂತ ಹೇಳಿದ್ದಾರೆ. ಜೊತೆಗೆ ಚುನಾವಣೆಗೂ ಮುಂಚೆ ಈ ರೀತಿ ಹಾಸನದ ಬೀದಿ ಬೀದಿಗಳಲ್ಲಿ ಪೆನ್‌ಡ್ರೈವ್‌ ಎಸೆದಿರೋದು ಯಾರು. ಯಾರಿಂದ ಇದನ್ನ ಮಾಡಲಾಗಿದೆ ಅನ್ನೋ ಬಗ್ಗೆನೂ ತನಿಖೆ ಆಗ್ಬೇಕು. ತಪ್ಪಿತಸ್ಥರಿಗೂ ಶಿಕ್ಷೆಯಾಗ್ಬೇಕು… ಪೆನ್‌ಡ್ರೈವ್‌ಗಳನ್ನ ಸರ್ಕ್ಯುಲೇಟ್‌ ಮಾಡಿರೋರಿಗೂ ಶಿಕ್ಷೆಯಾಗ್ಬೇಕು. ಯಾಕಂದ್ರೆ ದೊಡ್ಡ ತಪ್ಪು ಮಾಡಿರೋರೇ ಅವ್ರುʼ ಅಂದಿದ್ದಾರೆ.

ಇನ್ನು ಅತ್ತ ಪ್ರಜ್ವಲ್‌ ರೇವಣ್ಣ ಅಷ್ಟೇ ಅಲ್ಲದೇ ಅವ್ರ ತಂದೆ ಹೊಳೆನರಸೀಪುರದ ಶಾಸಕ HD ರೇವಣ್ಣ ವಿರುದ್ದ ಕೂಡ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದೆ. ಖುದ್ದು ಅವ್ರ ಮನೆ ಕೆಲಸದಾಕೆ ತನಗೆ ಮತ್ತು ತಮ್ಮ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಅಂತ ದೂರು ದಾಖಲಿಸಿದ್ದಾರೆ. ಇದ್ರಲ್ಲಿ ರೇವಣ್ಣ ಅವ್ರನ್ನೇ ಮೊದಲ ಆರೋಪಿಯಾಗಿ ಉಲ್ಲೇಖಿಸಲಾಗಿದೆ. ಇನ್ನು ಈ ದೂರಿನಲ್ಲಿ ಪ್ರಜ್ವಲ್‌ ರೇವಣ್ಣನವ್ರು ಹಾಸನ ಜಿಲ್ಲೆಯಲ್ಲಿ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರು ಅಂತಾನೂ ಉಲ್ಲೇಖಿಸಲಾಗಿದೆ. ಈ ಬೆನ್ನಲ್ಲೇ ಇದೀಗ ಎಚ್‌ಡಿ ರೇವಣ್ಣನವ್ರೇ ರಿಯಾಕ್ಟ್‌ ಮಾಡಿದ್ದಾರೆ. ನಾನೆಲ್ಲೂ ಓಡ್‌ ಹೋಗಿಲ್ಲ, ಕಾನೂನು ಪ್ರಕಾರ ಎದುರಿಸ್ತೀವಿ ʻSIT ಕರೆದಾಗ ಪ್ರಜ್ವಲ್‌ ರೇವಣ್ಣ ವಿಚಾರಣೆಗೆ ಬರ್ತಾರೆ. ಅವನ ವಿದೇಶ ಪ್ರಯಾಣ ಮೊದಲೇ ಡಿಸೈಡ್‌ ಮಾಡಲಾಗಿತ್ತು. FIR ಹಾಕ್ತಾರೆ ಅಂತ ಗೊತ್ತಿರಲಿಲ್ಲ…ಮಾಮೂಲಾಗೇ ವಿದೇಶಕ್ಕೆ ಹೋಗಿದ್ದಾನೆ ಅಂದಿದ್ದಾರೆ. ಅಲ್ಲದೇ ದೇವೇಗೌಡರ ಕುಟುಂಬದ ಮೇಲೆ ಷಡ್ಯಂತರ ನಡೆಯೋದು ಇದೇ ಮೊದಲಲ್ಲ. ಇಂತದ್ದನೆಲ್ಲಾ ಮೊದಲಿಂದಲೂ ಫೇಸ್‌ ಮಾಡ್ತಲೇ ಬಂದಿದ್ದೀವಿ. ಈ ಹಿಂದೆ ದೇವೇಗೌಡರ ಮೇಲೆ ಸಿಒಡಿ ತನಿಖೆ ನಡೆಸಿದ್ರು. ನಾಲ್ಕೈದು ವರ್ಷಗಳ ಹಿಂದಿನ ಕಥೆ ತಂದು ಈಗ ದೂರು ಕೊಟ್ರೆ ಏನ್‌ ಅರ್ಥ! ಇವೆಲ್ಲಾ ಬರೀ ಷಡ್ಯಂತ್ರ ಅಷ್ಟೇ… ಇವಕ್ಕೆಲ್ಲಾ ಹೆದರಿ ಓಡ್‌ ಹೋಗಲ್ಲ. ಕಾನೂನು ಹೋರಾಟ ಮಾಡ್ತೀನಿ. ಇನ್ನು ನನ್ನ ವಿರುದ್ಧ ನೀಡಿರೋ ದೂರಿನ ಬಗ್ಗೇನೂ ಸದ್ಯ ಯಾವ್ದೇ ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ SIT ರಚಿಸಿದ್ಯಲ್ಲಾ… ಅದೇ ತನಿಖೆ ಮಾಡಲಿʼ ಅಂತೇಳಿದ್ದಾರೆ.


ಈ ಎಲ್ಲದ್ರ ನಡುವೆ ಇದೀಗ ಸಂತ್ರಸ್ತೆ ಮಹಿಳೆ ವಿರುದ್ಧವೇ ಆಕೆಯ ಅತ್ತೆನೇ ಆರೋಪ ಮಾಡಿದ್ದಾರೆ. ʻದೂರು ನೀಡಿರೋ ಮಹಿಳೆ ಸರಿಯಿಲ್ಲ. ಹೆಚ್‌ ಡಿ ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ದೂರು ನೀಡಿದ್ದಾರೆ. ಆ ಮಹಿಳೆ ಹೇಳ್ತಿರೋದೆಲ್ಲಾ ಸುಳ್ಳು… ಆ ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡ್ತೇವೆ ಗೌಡರ ಕುಟುಂಬ ತಪ್ಪು ಮಾಡಿಲ್ಲʼ ಅಂತೇಳಿದ್ದಾರೆ.

ಇನ್ನು ಪ್ರಜ್ವಲ್ ರೇವಣ್ಣ ವಿರುದ್ದ ರಾಜ್ಯಾದ್ಯಂತ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಇನ್ನು ಅತ್ತ ಪ್ರಜ್ವಲ್‌ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸರಿ.. ಆತನನ್ನು ಭಾರತ ಸರ್ಕಾರ ಹಿಡಿದು ತಂದು ಕಠಿಣ ಶಿಕ್ಷೆಗೊಳಪಡಿಸಬೇಕು ಅಂತ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply