ಖೇಲ್ ರತ್ನ ಇನ್ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ!

masthmagaa.com:

ಭಾರತೀಯ ಕ್ರೀಡಾಲೋಕದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನಗೆ ಹಾಕಿ ದಂತಕತೆ ಮೇಜರ್ ಧ್ಯಾನ್​ ಚಂದ್ ಹೆಸರು ಇಡಲಾಗಿದೆ. ಇದನ್ನ ಈವರೆಗೆ ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ಅಂತ ಕರೆಯಲಾಗ್ತಿತ್ತು. ಈ ಬಗ್ಗೆ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ಮೇಜರ್ ಧ್ಯಾನ್​ಚಂದ್​ ದೇಶಕ್ಕೆ ಹೆಮ್ಮೆ ಮತ್ತು ಗೌರವವನ್ನು ತಂದುಕೊಟ್ಟ ಕ್ರೀಡಾಪಟು. ಹೀಗಾಗಿ ದೇಶದ ಕ್ರೀಡಾಲೋಕದ ಅತ್ಯುನ್ನತ ಪ್ರಶಸ್ತಿಗೆ ಅವರ ಹೆಸರೇ ಇಡೋದು ಸೂಕ್ತ.. ಈ ಬಗ್ಗೆ ಇಡೀ ದೇಶದಾದ್ಯಂತ ಹಲವು ಬೇಡಿಕೆಗಳು ಬಂದಿದ್ವು. ಹೀಗಾಗಿ ಅವರೆಲ್ಲರ ಭಾವನೆಗಳಿಗೆ ಬೆಲೆ ಕೊಡ್ತಾ ಇನ್ಮುಂದೆ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್​ಚಂದ್ ಪ್ರಶಸ್ತಿ ಅಂತ ಕರೆಯಲಾಗುತ್ತೆ ಅಂತ ಘೋಷಿಸಿದ್ದಾರೆ. ನಿನ್ನೆಯಷ್ಟೇ ಭಾರತೀಯ ಪುರುಷರ ಹಾಕಿ ತಂಡ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿತ್ತು. ಈ ಮೂಲಕ ಹಾಕಿಯಲ್ಲಿದ್ದ 41 ವರ್ಷಗಳ ಪದಕದ ದಾಹವನ್ನು ತೀರಿಸಿತ್ತು. ಅದ್ರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಅಂದಹಾಗೆ ಈ ಮೇಜರ್ ಧ್ಯಾನ್​ಚಂದ್ ಹಾಕಿಯಲ್ಲಿ ದಂತಕತೆಯಾಗಿದ್ರು. ಇವರ ನೇತೃತ್ವದಲ್ಲಿ ಭಾರತ 1928ರಿಂದ 1936ರವರೆಗೆ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿತ್ತು. 1956ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿತ್ತು. ಇವರ ಜನ್ಮದಿನವಾದ ಆಗಸ್ಟ್​ 29ನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತೆ. 1905ರಲ್ಲಿ ಉತ್ತರ ಪ್ರದೇಶದಲ್ಲಿ ಜನಿಸಿದ್ದ ಧ್ಯಾನ್​ಚಂದ್​​ 1979ರ ಡಿಸೆಂಬರ್ 3ರಂದು ವಿಧಿವಶರಾಗಿದ್ರು.
ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ರೆಸ್ಪಾನ್ಸ್ ಬಂದಿದ್ದು ಎಲ್ಲಾ ಸ್ವಾಗತಿಸಿದ್ದಾರೆ. ಸ್ಫೋರ್ಟ್ಸ್​​ ಅವಾರ್ಡ್​​​ಗಳು ಕ್ರೀಡಾಪಟುಗಳ ಹೆಸರನ್ನೇ ಹೊಂದಿರಬೇಕು. ರಾಜಕಾರಣಿಗಳದ್ದಲ್ಲ ಅಂತ ಹೇಳಿದ್ಧಾರೆ. ಇದೇ ವೇಳೆ ವಿಪಕ್ಷ ನಾಯಕರು, ಕ್ರೀಡಾಪಟುಗಳು ಸೇರಿದಂತೆ ಹಲವರು ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂಗೂ ಕ್ರೀಡಾಪಟುಗಳ ಹೆಸರೇ ಇಡಬೇಕು ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply