ಜಿಯೋ ಸಿಮ್ ಬಳಸುತ್ತಿರೋರಿಗೆ ಶಾಕಿಂಗ್ ನ್ಯೂಸ್​!

masthmagaa.com:

ಜಿಯೋ ಮೊಬೈಲ್ ರೀಚಾರ್ಜ್ ರೇಟು ಕೂಡ ಈಗ ಜಾಸ್ತಿ ಆಗಿದೆ. ಏರ್ಟೆಲ್ ಹಾಗೂ ವಿಐ ಕಂಪನಿಯವ್ರು 25 ಪರ್ಸೆಂಟ್ ರೇಟ್ ಜಾಸ್ತಿ ಮಾಡಿದ ಬೆನ್ನಲ್ಲೇ, ಈಗ ಜಿಯೋ ಕೂಡ ದರ ಏರಿಕೆಯ ನಿರ್ಧಾರ ಮಾಡಿದೆ. ಹಳೆ ಹಾಗು ಹೊಸ ರೇಟ್ ಪಟ್ಟಿ ಸ್ಕ್ರೀನ್ ಮೇಲಿದೆ ನೋಡಿ. ಜಿಯೋದ 42 ಕೋಟಿ ಗ್ರಾಹಕರ ಮೇಲೆ ಇದು ಪರಿಣಾಮ ಬೀರುತ್ತೆ. ಈ ಮೂಲಕ ಹೊಸ ವರ್ಷಕ್ಕೆ ಆಫರ್ ಬರಬೋದು ಅಂತ ಕಾಯ್ತಿದ್ದವರಿಗೆ ಟೆಲಿಕಾಮ್ ಕಂಪನಿಗಳು ಆಫರ್ ಬದಲಿಗೆ ಆಪು ಇಟ್ಟಿವೆ. ಕನಸುಭಂಗ ಮಾಡಿವೆ. ಜಿಯೋ ಹೊಸ ದರಗಳು ಡಿಸೆಂಬರ್ ಒಂದರಿಂದ ಜಾರಿಗೆ ಬರುತ್ತೆ. ಈಗಲೇ ಮಾಡಿಸಿಕೊಂಡರೆ ಹಳೇ ರೇಟೇ ಸಿಗುತ್ತೆ ಅಂತ ಕಂಪನಿ ಹೇಳಿದೆ.
2016ಕ್ಕೂ ಮೊದಲು ನಮ್ ಜನ ತಿಂಗಳಿಗೆ ಒಂದು GB 3G ಡೇಟಾದಲ್ಲಿ ಬದುಕೋ ಕಾಲ ಇತ್ತು. ಅದಕ್ಕೂ 350 ರೂಪಾಯಿ ಕೊಡಬೇಕಿತ್ತು. ಅದರ ಜೊತೆ ವ್ಯಾಲಿಡಿಟಿಗೆ ಬೇರೆ ಪ್ಯಾಕ್, ಕಾಲ್ ಮಾಡಕೆ ಬೇರೆ ಟಾಕ್ಟೈಮ್ ರೀಚಾರ್ಜ್ ಮಾಡಬೇಕಿತ್ತು. ಆದ್ರೆ ಆಗ ಬಂದ ಅಂಬಾನಿಯ ಜಿಯೋ 300 ರೂಪಾಯಿಗೆ ಮೂರು ತಿಂಗಳು ಡೇಟಾ ಕೊಡ್ತೀವಿ. ಅದು ದಿನಕ್ಕೆ 1-2 ಜಿಬಿ ಕೊಡ್ತೀವಿ, ಅದ್ರಲ್ಲೂ 4G ಕೊಡ್ತೀವಿ, ಕಾಲ್ ಅನ್ಲಿಮಿಟೆಡ್ ಫ್ರೀ ಅಂತು… V-O LTE ಮೂಲಕ ಫುಲ್ ಕ್ಲಿಯರ್ ಇರುತ್ತೆ ಕಾಲ್ ಅಂತು. ಇದು ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿನೇ ಮಾಡ್ತು. ಇಡೀ ತಿಂಗಳಿಗೆ ಒಂದು ಜಿಬಿಗೆ 350 ರೂಪಾಯಿ ಬೋಳಿಸುತ್ತಿದ್ದ ಉಳಿದ ಕಂಪನಿಗಳೂ ರೇಟ್ ಕಮ್ಮಿ ಮಾಡಬೇಕಾಯ್ತು. ಹಲವು ಕಂಪನಿಗಳು ಮುಚ್ಚೇ ಹೋದವು. ಈಗ ಸರಿಯಾಗಿ ಉಳಿದಿರೋದು ಖಾಸಗಿಯಲ್ಲಿ 2-3 ಕಂಪನಿಗಳು ಮಾತ್ರ. ಈಗ ನಮ್ ಜನಕ್ಕೆ ದಿನಕ್ಕೆ 1-2 ಜಿಬಿ ಡೇಟಾ ರುಚಿ ಹತ್ತಿದೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಯಾಗಿದೆ. ಪೇಮೆಂಟ್, ಶಾಪಿಂಗ್, ವರ್ಕ್ ಎಲ್ಲದಕ್ಕೂ ಇಂಟರ್ನೆಟ್ ಅನ್ನೋದು ಆಕ್ಸಿಜನ್ ಥರ ಆಗೋಗಿದೆ. ಸೋ ಲಾಸ್ ನಲ್ಲಿ ನಡೀತಿದ್ದ ಟೆಲಿಕಾಂ ಕಂಪನಿಗಳು ಈಗ ನಷ್ಟ ಪರಿಹಾರಕ್ಕೆ ಮುಂದಾಗಿವೆ. ಎಲ್ಲರೂ ಒಟ್ಟಿಗೇ ಬ್ಲೇಡು ಜಳಪಿಸುತ್ತಾ ಕುಯ್ಯಲು ಶುರು ಮಾಡಿದ್ದಾರೆ. ಅದರ ಪರಿಣಾಮ ನಮಗೆ ಹೊಸ ರೀಚಾರ್ಜ್ ಪ್ಯಾಕ್ ರೇಟು ನೋಡಿ ಗಾಬರಿಯಾಗುತ್ತಿದೆ.

-masthmagaa.com

Contact Us for Advertisement

Leave a Reply