ರಕ್ಷಣಾ ಕಾರ್ಯಾಚರಣೆಯಲ್ಲಿ ವಿಳಂಬ, ಟರ್ಕಿ ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ!

masthmagaa.com:

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ. ಅವಶೇಷಗಳ ಅಡಿಯಲ್ಲಿ ಸಿಕ್ಕಿಕೊಂಡವ್ರ ರಕ್ಷಿಸೋಕೆ ರಕ್ಷಣಾ ಸಿಬ್ಬಂದಿ ಹರಸಾಹಸ ಪಡ್ತಿದಾರೆ. ಇತ್ತ ಅವಶೇಷಗಳ ಅಡಿಯಲ್ಲಿ ಸಿಲುಕಿದವ್ರು ಹಾಗೂ ಕೆಲವರು ಚಳಿಯಿಂದ ಸಾವನ್ನಪ್ಪುತ್ತಿದ್ದಾರೆ ಅಂತ ವರದಿಯಾಗಿದೆ. ಭೂಕಂಪದಿಂದ ತತ್ತರಿಸಿ ಹೋಗಿರೋ ಟರ್ಕಿ ಹಾಗೂ ಸಿರಿಯಾಗೆ ಹಲವು ದೇಶಗಳು ಸಹಾಯವನ್ನ ನೀಡ್ತಿವೆ. ಇದೀಗ ಅಮೆರಿಕ ಪ್ರಾಥಮಿಕವಾಗಿ 85 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 697 ಕೋಟಿ ರೂಪಾಯಿ ತುರ್ತು ಪರಿಹಾರ ಪ್ಯಾಕೇಜ್‌ನ್ನ ಅನೌನ್ಸ್‌ ಮಾಡಿದೆ. ಈ ಹಣದಿಂದ ಎರಡೂ ದೇಶಗಳ ಸಂತ್ರಸ್ತರಿಗೆ ಆಹಾರ, ವಸತಿ ಹಾಗೂ ತುರ್ತು ಆರೋಗ್ಯ ಸೇವೆ ನೆರವನ್ನ ಶೀಘ್ರವೇ ತಲುಪಿಸಲಾಗುತ್ತೆ ಅಂತ ಅಮೆರಿಕ ಹೇಳಿದೆ. ಇನ್ನೊಂದ್‌ ಕಡೆ ಟರ್ಕಿಯ ರಿಲೀಫ್‌ ಮತ್ತು ರಿಕವರಿ ಪ್ರಯತ್ನಕ್ಕಾಗಿ ವಿಶ್ವ ಬ್ಯಾಂಕ್‌ ಕೂಡ 1.78 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 14.5 ಸಾವಿರ ಕೋಟಿ ರೂಪಾಯಿ ಸಹಾಯ ಧನ ನೀಡೋದಾಗಿ ಅನೌನ್ಸ್‌ ಮಾಡಿದೆ. ಇದೆಲ್ಲದ್ರ ಮಧ್ಯೆ ಟರ್ಕಿಯಲ್ಲಿ ಅಲ್ಲಿನ ಸರ್ಕಾರವೇ ರಕ್ಷಣಾ ಕಾರ್ಯಾಚರಣೆಯನ್ನ ವಿಳಂಬ ಮಾಡ್ತಿದೆ ಅಂತ ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸ್ತಿದಾರೆ. ಇದ್ರಿಂದ ಮೇ ತಿಂಗಳಲ್ಲಿ ಚುನಾವಣೆ ನಡೆಸೋಕೆ ಪ್ರಸ್ತಾಪ ಮಾಡಿರೋ ಟರ್ಕಿ ಅಧ್ಯಕ್ಷ ತಾಯಿಪ್‌ ಎರ್ಡೋಆನ್‌ ಅವ್ರಿಗೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಇನ್ನು ಅಲ್ಲಿನ 10 ಭೂಕಂಪ ಪೀಡಿತ ಪ್ರಾಂತ್ಯಗಳಲ್ಲಿ 3 ತಿಂಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಆ ಪ್ರಾಂತ್ಯಗಳಿಗೆ ಹೋಗಿ ಚುನಾವಣಾ ಪ್ರಚಾರ ಮಾಡೋಕು ಸಾಧ್ಯವಾಗಲ್ಲ. ಇನ್ನೊಮ್ಮೆ ಟರ್ಕಿ ಅಧಿಕಾರ ಹಿಡಿಯೋ ಪ್ರಯತ್ನದಲ್ಲಿರೋ ಏರ್ಡೋಆನ್‌ಗೆ ಇದು ಕೂಡ ನುಂಗಲಾರದ ತುತ್ತಾಗಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಅಂಡಿಯಾಮಾನ್‌ ಪ್ರಾಂತ್ಯದಲ್ಲಿ ಭೂಕಂಪದ ಎರಡನೇ ದಿನ ಒಬ್ಬ ಸರ್ಕಾರಿ ಅಧಿಕಾರಿಯಾಗಲಿ, ಪೊಲೀಸ್‌ ಆಗ್ಲಿ ಯಾರೂ ಇರ್ಲಿಲ್ಲ. ಅವಶೇಷಗಳ ಕೆಳಗೆ ಸ್ವಲ್ಪ ಜನ ಪ್ರಾಣ ಕಳೆದುಕೊಂಡ್ರೆ ಚಳಿಯಿಂದ ಅರ್ಧ ಜನ ಸಾಯ್ತಾ ಇದಾರೆ. ಸರ್ಕಾರ ಸರಿಯಾಗಿ ನಿರ್ವಹಣೆ ಮಾಡ್ತಾ ಇಲ್ಲ ಅಂತ ಅಲ್ಲಿನ ಸ್ಥಳೀಯರೊಬ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply