ಕಾಂತಾರ ಸಿನಿಮಾ ವಿಮರ್ಶೆ: ಕಾಡಿನ ಕಥೆಯಲ್ಲಿ ದೈವತ್ವದ ಅನಾವರಣ!

masthmagaa.com:
ಋಷಿ ಮೂಲ, ನದಿ ಮೂಲ ಹುಡುಕಬಾರದು ಅಂತ ಹೇಳ್ತಾರೆ, ಆದ್ರೆ ದೈವಗಳ ಹುಟ್ಟಿಗೆ ಹಲವಾರು ಮೂಲ ಕಥೆಗಳಿವೆ, ಈ ಎಲ್ಲಾ ಮೂಲ ಕಥೆಗಳ ಮೂಲಾಧಾರ ನಂಬಿಕೆ. ಕರ್ನಾಟಕದ ದಕ್ಷಿಣ ಕನ್ನಡ ಭಾಗದ ದೈವಗಳ ಬಗ್ಗೆ ಸರಳವಾಗಿ ಹೇಳಬೇಕು ಅಂತ ಅಂದ್ರೆ ತಪ್ಪು ಮಾಡಿದಾಗ ತಿದ್ದುಕೊಳ್ಳುವ ಅವಕಾಶವನ್ನ, ಮತ್ತೊಂದು ಚಾನ್ಸ್ ಅನ್ನ ದೇವರು ಕೊಡ್ತಾರೆ, ಆದ್ರೆ ತಪ್ಪು ಮಾಡ್ಲಿಕ್ಕೆ ಹೊರಡುವ ಮನಸ್ಥಿತಿಯನ್ನ ಎಚ್ಚರಿಸುವ ಕೆಲಸವನ್ನ ದೈವಗಳು ಮಾಡ್ತಾವೆ, ಅಕಸ್ಮಾತ್ ತಪ್ಪು ಮಾಡಿದ್ರೆ ಮತ್ತೊಂದು ಅವಕಾಶ ಎಲ್ಲ ಇರಲ್ಲ ಆಗಿಂದಾಗಲೇ ಮಾಡಿದ ತಪ್ಪಿಗೆ ಶಿಕ್ಷೆಯನ್ನ ಕೂಡ ದೈವಗಳು ಕೊಡ್ತಾವೆ. ಹಾಗಾಗಿ ಒಂದು ರೀತಿ ದೈವಗಳು ನಮ್ಮ ಮನಸಾಕ್ಷಿಯ ಪ್ರತೀಕ ಅಂತ ಹೇಳಬಹುದು. ದೇವರುಗಳು ಎಂದರೆ ನಮ್ಮೆಲ್ಲರ ಜನಪ್ರಿಯ ದೇವತೆಗಳಾದ ರಾಮ,ಕೃಷ್ಣ, ಶಿವ, ದುರ್ಗೆ, ಗಣೇಶ, ಸುಬ್ರಹ್ಮಣ್ಯ.. ಇತ್ಯಾದಿ. ಆದ್ರೆ ದೈವಗಳು ಅಂದ್ರೆ ಮಾನವರಾಗಿ ಹುಟ್ಟಿ ನಮ್ಮ ಜೊತೆಗೆ ಇದ್ದು ನಮಗೆಲ್ಲ ಒಳಿತನ್ನು ಮಾಡಿದ ಪೂರ್ವಿಕರು ಅಥವಾ ಆಯಾ ಪ್ರಾಂತ್ಯದ ಹಿಂದಿನವರ ಆರಾಧ್ಯರು, ಅಥವ ನಾಡಿನ ರಕ್ಷಣೆಗಾಗಿ ದುಡಿದ ಯೋಧರನ್ನ  ದೈವಗಳೆಂದು ಕರೆಯುತ್ತಾರೆ.
ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವದ ಬಗ್ಗೆ ತೋರಿಸಿದ್ದಾರೆ. ಪಂಜುರ್ಲಿ ಹಂದಿಯಿಂದ ರೂಪಾಂತರಗೊಂಡ ದೈವ. ಟ್ರೈಲರ್ ನಲ್ಲಿ ತೋರಿಸಿರೋ ಹಾಗೆ ಸಿನಿಮಾದಲ್ಲಿ ನಿಗೂಢವಾದ ಕಾಡಿದೆ, ಹಲವು ವರ್ಷಗಳ ಹಿಂದೆ ಒಬ್ಬ ರಾಜ ಒಂದು ಕಲ್ಲಿಗಾಗಿ ಒಂದಿಡೀ ಊರನ್ನ ದೈವಕ್ಕಾಗಿ ಅರ್ಪಿಸಿದ ಕಥೆಯಿದೆ. ಈಗ ಊರಿನಲ್ಲಿ ಏನೇನೆಲ್ಲಾ ಆಯ್ತು, ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದಲ್ಲಿ ಜಯ ಯಾರಿಗೆ ಸಿಕ್ತು, ಈ ಕಥೆಯಲ್ಲಿ ದೈವಗಳ ಪಾತ್ರ ಎಷ್ಟಿತ್ತು ಅನ್ನೋದೇ ಕಾಂತಾರ ಸಿನಿಮಾ.
ಕರಾವಳಿ ಭಾಗದ ಸಂಸ್ಕೃತಿ, ಆಚಾರ, ವಿಚಾರ, ಭಾಷೆ, ಹಾವ ಭಾವ, ತವಕ, ತಲ್ಲಣ ಒಟ್ಟಾರೆ ದಕ್ಷಿಣ ಕನ್ನಡದ ಆತ್ಮವನ್ನ,  ಜೀವಂತಿಕೆಯನ್ನ ಬಿಗ್ ಸ್ಕ್ರೀನ್ ಮೇಲೆ ಪರಿಣಾಮಕಾರಿಯಾಗಿ ಪ್ರೆಸೆಂಟ್ ಮಾಡುವ ಪ್ರಯತ್ನವನ್ನು
ರಿಷಬ್ ಶೆಟ್ಟಿ ಅವರು ಮಾಡಿ ಗೆದ್ದಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಸಿನಿಮಾದಲ್ಲೂ ಕೂಡ ಇದೆ ಪ್ರಯತ್ನ ಆಗಿತ್ತು ಆದ್ರೆ ಕಾಂತಾರ ಸಿನಿಮಾದಲ್ಲಿ ಕರಾವಳಿ ಭಾಗದ ಕಥೆಯನ್ನ ಕಮರ್ಶಿಯಲ್ ಚೌಕಟ್ಟಿನಲ್ಲಿ ಹೇಳುವ ಪ್ರಯತ್ನ ಆಗಿದೆ. ಹಾಗೆ ಉಳಿದವರು ಕಂಡಂತೆ ಅಲ್ಲಿ ಕೇವಲ ರಿಚ್ಚೀ ಕಥೆಯನ್ನ ಬೇರೆ ಬೇರೆ ಆಂಗಲ್ ಇಂದ ಹೇಳಲಾಗಿತ್ತು ಇಲ್ಲಿ ದಕ್ಷಿಣ ಕನ್ನಡದ ಕಂಬಳ ಇದೆ, ಶಿಕಾರಿ ಇದೆ ದಕ್ಷಿಣ ಕನ್ನಡದ ಜನರ ನಂಬಿಕೆಯ ಮೂಲಾಧಾರ ಆದ ದೈವಗಳ ಬಗ್ಗೆ ಬೆಳಕು ಚೆಲ್ಲುವ ಒಂದು ಅಥೆಂಟಿಕ್ ಪ್ರಯತ್ನ ಆಗಿದೆ. ಸಹಜವಾಗಿ, ಒಂದು ವರ್ಗದ ಜನಗಳ ಆಚರಣೆ, ಆಚಾರ ವಿಚಾರದ ಬಗ್ಗೆ ಅಡ್ರೆಸ್ಸ್ ಮಾಡುವಾಗ ಎಚ್ಚರ ವಹಿಸೋದು ಬಹಳ ಮುಖ್ಯವಾಗಿರುತ್ತೆ. ಪ್ರೆಸೆಂಟೇಷನ್ ನಲ್ಲಿ ಸ್ವಲ್ಪ ಆಚೆ ಈಚೆ ಆದ್ರೂ ಆ ಒಂದು ವರ್ಗದ ಜನರ ಸಿಟ್ಟಿಗೆ ಗುರಿಯಾಗುವ ಸಾಧ್ಯತೆ ಜಾಸ್ತಿ ಇರತ್ತೆ. ಸೋ, ಆ ವಿಚಾರದಲ್ಲಿ ರಿಷಬ್ ಶೆಟ್ಟಿ ಅವರ ತೋರಿಸಿರುವ ಗಟ್ಸ್ ಅನ್ನ ಮೆಚ್ಚಲೇಬೇಕು.
ಇನ್ನು ರಿಷಬ್ ಶೆಟ್ಟಿ ಅವರ ಬಗ್ಗೆ ಹೇಳಬೇಕು ಅಂತ ಅಂದ್ರೆ ಸಿನಿಮಾದಿಂದ ಸಿನಿಮಾಗೆ ಅವರ ನಟನೆ ಮತ್ತೆ ನಿರ್ದೇಶನದ ಗ್ರಾಫ್ ಏರುತ್ತಾನೆ ಇದೆ. ರಿಷಬ್ ಈ ಸಿನಿಮಾದಲ್ಲಿ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದು ಕಾಡುಬೆಟ್ಟುವಿನ ಸೀದಾ ಸಾದಾ ರಫ್ ಅಂಡ್ ಟಫ್ ಹಳ್ಳಿ ಹುಡುಗ ಶಿವ ಆಗಿ ಇದನ್ನ ಟ್ರೈಲರ್ ನಲ್ಲಿ ಆಗಲೇ ತೋರಿಸಿದ್ದಾರೆ. ಇನ್ನೆರಡು ಶೇಡ್ ಯಾವುದು ಅಂತ ಗೊತ್ತಾಗಬೇಕಾದರೆ ಸಿನಿಮಾನ ನೀವು ಥಿಯೇಟರ್ ಅಲ್ಲೇ ನೋಡಬೇಕು. ಆ ಎರಡೂ ಶೇಡ್ ಗಳಲ್ಲಿ ಕಾಣಿಸಿಕೊಳ್ಳದಕ್ಕೆ ನಿಜಕ್ಕೂ ಗಟ್ಸ್ ಬೇಕು, ಸಿನಿಮಾದ ಮೊದಲ 15 ನಿಮಿಷ ಹಾಗೂ ಕೊನೆಯ 20 ನಿಮಿಷ ರಿಷಬ್ ಶೆಟ್ಟಿ ಎಂಥ ಅದ್ಭುತ ಆಕ್ಟರ್ ಅಂತ ತೋರಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಬಡ್ಜೆಟ್ ಗೆ ತಕ್ಕ ಹಾಗೆ ಸಿನಿಮಾ ಮಾಡುವ ಕಲೆ ಅವರಿಗೆ ಸಿದ್ಧಿಸಿದೆ ಅನ್ನೋದನ್ನ ಪ್ರತೀ ಸಿನಿಮಾದಲ್ಲೂ ಪ್ರೂವ್ ಮಾಡ್ತಾ ಇದ್ದಾರೆ. ಕಂಬಳದ ಕೋಣಗಳನ್ನು ಓಡಿಸೋದರಿಂದ ಹಿಡಿದು, ಕೋಲ ಕಟ್ಟೋದರಿಂದ ಹಿಡಿದು, ಸಾಹಸ ದೃಶ್ಯದಲ್ಲಿ ಡ್ಯೂಪ್ ಇಲ್ಲದೆ ಫೈಟ್ ಮಾಡಿರೋದರಿಂದ ಹಿಡಿದು, ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡಿರುವ ಅವರ ಟ್ಯಾಲೆಂಟ್ ಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು. ರಿಷಬ್ ಶೆಟ್ಟಿ ನಮ್ಮ ಕನ್ನಡ ಚಿತ್ರರಂಗದ ಆಸ್ತಿ ಅಂತ ಹೇಳಿದ್ರೆ ತಪ್ಪಾಗಲ್ಲ.
ಇನ್ನು ರಿಷಬ್ ಶೆಟ್ಟಿ ಅವರನ್ನ ಬಿಟ್ಟರೆ ನನಗೆ ತುಂಬ ಇಷ್ಟ ಆಗಿದ್ದು ಕಿಶೋರ್ ಅವರ ಪಾತ್ರ. ಒಬ್ಬ ಪ್ರಾಮಾಣಿಕ ಫಾರೆಸ್ಟ್ ಆಫೀಸರ್ ಆಗಿ ಕಿಶೋರ್ ಬಹಳ ಅದ್ಭುತವಾಗಿ ಆಕ್ಟ್ ಮಾಡಿದ್ದಾರೆ. ಕೆಲವು ಸೀನ್ ಗಳಲ್ಲಿ  ರಿಷಬ್ ಶೆಟ್ಟಿ ಅವರನ್ನ ಓವರ್ ಟೇಕ್ ಮಾಡಿದ್ದಾರೆ. ಇದು ಬಿಟ್ಟರೆ ಆಚುತ್ ಕುಮಾರ್ ಎಂದಿನಂತೆ ಇಂಪ್ರೆಸ್ ಮಾಡ್ತಾರೆ. ಇನ್ನು ಶಿವನ ಸ್ನೇಹಿತರ ಪಾತ್ರ ಮಾಡಿರುವ ಪ್ರಕಾಶ್ ತುಮಿನಡು, ಶನಿಲ್ ಗುರು, ರಾಮದಾಸ್ ಎಲ್ಲರೂ ತುಂಬಾ ಸಹಜವಾಗಿ ಆಕ್ಟ್ ಮಾಡಿದ್ದಾರೆ. ಕಿಶೋರ್ ಮತ್ತು ಹೀರೋಯಿನ್ ಸಪ್ತಮಿ ಗೌಡ ಅವರನ್ನ ಬಿಟ್ರೆ ಈ ಸಿನಿಮಾದಲ್ಲಿ ಎಲ್ಲರೂ ಮಂಗಳೂರಿನವರೆ ಇದ್ದಾರೆ.
ಇನ್ನು ಈ ರೀತಿಯ ಒಂದು ದೇಸಿ ಕಂಟೆಂಟ್ ಗೆ ಬಂಡವಾಳ ಹಾಕಿ ಈ ರೀತಿ ಎಕ್ಸಿಕ್ಯೂಟ್ ಮಾಡ್ಲಿಕ್ಕೆ ಬ್ಯಾಕ್ ಬೋನ್ ಆಗಿ ನಿಂತಿರುವ ಹೊಂಬಾಳೆ ಫಿಲ್ಮ್ಸ್ ನವರಿಗು ಕೂಡ kudos ಹೇಳಲೇಬೇಕು.ಇನ್ನು ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಹಾಗೂ ಸಂಗೀತ ಈ ಸಿನಿಮಾದ ಇಂಪ್ಯಾಕ್ಟ್ ಅನ್ನ ಹೆಚ್ಚು ಮಾಡಿದೆ ಅಂತ ಅಂದ್ರೆ ತಪ್ಪಾಗಲ್ಲ. ಮೂಲತಃ ಭದ್ರಾವತಿಯವರಾದ ಅಜನೀಶ್ ಕರಾವಳಿ ಭಾಗದ ತಾಸೆಯ ಪಟ್ಟುಗಳನ್ನ ಬಿಜಿಎಮ್ ನಲ್ಲಿ ಅಳವಡಿಸಿಕೊಂಡಿರೋದು ಅವರ ಕಲಿಯುವ ಮನಸ್ಥಿತಿಗೆ ಉದಾಹರಣೆ ಅಂತ ಹೇಳಬಹುದು. ನಿರ್ದೇಶಕ ರಿಷಬ್ ಶೆಟ್ಟ್ರ ಫೀಡಿಂಗ್ ಇದ್ರು ಕೂಡ ಕರಾವಳಿ ಭಾಗದ ಸಂಗೀತದ ಮಟ್ಟುಗಳನ್ನ ಡೈಜೆಸ್ಟ್ ಮಾಡಿಕೊಂಡು ಅದನ್ನ ಕ್ರಿಯೇಟಿವ್ ಆಗಿ use ಮಾಡಿಕೊಳ್ಳೋದು ಅವರ ವರ್ಸಟ್ಯಾಲಿಟಿಯನ್ನ ತೋರಿಸುತ್ತೆ. ಅಂಡ್ ರಕ್ಷಿತ್ ಶೆಟ್ಟಿ ಅವರ ಆಸ್ಥಾನ ಸಂಗೀತಗಾರ ಅಂತ ಕರೆಸಿಕೊಳ್ಳುವ ಅಜನೀಶ್ ಅವರಿಗೆ ಕರಾವಳಿಯ ಸಂಗೀತದ ಬಗ್ಗೆ ದೊಡ್ಡದಾಗೇ ಪರಿಚಯ ಆಗಿರುತ್ತೆ ಬಿಡಿ. ಇನ್ನು ಚಿತ್ರದ ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಅವರ ಕೆಲಸ ಬಹಳ ಅದ್ಭುತವಾಗಿ ಮೂಡಿಬಂದಿದೆ.
ಕಂಬಳದ ಬಗ್ಗೆ ಇನ್ನಷ್ಟು ಎಕ್ಸ್ಪ್ಲೋರ್ ಮಾಡಬಹುದು ಅನ್ನಿಸ್ತು, ಸಪ್ತಮಿ ಗೌಡ ಅವರ ಪಾತ್ರ ಬಹಳ ಸೀಮಿತವಾಗಿದೆ ಅಂತ ಅನ್ನಿಸ್ತು, ಎಲ್ಲ ದೃಶ್ಯಗಳಲ್ಲೂ ಒಂದೇ ರೀತಿ ಎಕ್ಸ್ಪ್ರೆಷನ್ ಕೊಡ್ತಾ ಇದ್ದಾರೆ ಅನ್ನಿಸ್ತು. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಅಚ್ಯುತ್ ಕುಮಾರ್ ಅವರ ಪಾತ್ರದ ರೈಟಿಂಗ್ ಸ್ವಲ್ಪ ಡಲ್ ಆಯಿತು ಅಂತ ಅನ್ನಿಸ್ತು. ಇನ್ನು ಫಸ್ಟ್ ಹಾಫ್ ನ ಕೆಲವು ಅಗತ್ಯವಿಲ್ಲದ ದೃಶ್ಯಗಳನ್ನ ಗಳನ್ನ ತೆಗೆದು ಚಿತ್ರದ ಒಟ್ಟಾರೆ ಉದ್ದವನ್ನ ಇನ್ನು ಒಂದು ಸ್ವಲ್ಪ ಟ್ರಿಮ್ ಮಾಡಿದ್ರೆ ಚೆನ್ನಾಗಿ ಇರುತ್ತಿತ್ತು ಅಂತ ಅನ್ನಿಸ್ತು.
 
ಒಟ್ನಲ್ಲಿ ಈ ಸಿನಿಮಾ ಒಂದು ಗಟ್ಟಿ ಕಥೆ, ಒಳ್ಳೆ ಸಂಗೀತ, ಹೈ ಆಕ್ಟೇನ್ ಸಾಹಸ ದೃಶ್ಯಗಳ ಜೊತೆಗೆ ರಿಚ್ ಪ್ರೊಡಕ್ಷನ್ ವ್ಯಾಲ್ಯೂಸ್ ಇರುವಂಥ ಪಕ್ಕ ಪೈಸಾ ವಸೂಲ್ ಸಿನಿಮಾ ಅನ್ನೋದರಲ್ಲಿ ಅನುಮಾನವೇ ಇಲ್ಲ. ಇನ್ನು ದಕ್ಷಿಣ ಕನ್ನಡದವರಿಗೆ ಈ ಸಿನಿಮಾ ಒಂದು ರೀತಿ ಇಮೋಷನ್ ಆಗಿ ಉಳಿದುಕೊಂಡರೆ ಬೇರೆ ಭಾಗದವರಿಗೆ ಒಂದೊಳ್ಳೆ ಕಥೆ ಪ್ಲಸ್ ಹೊಸ ಆಚಾರವನ್ನ ತಿಳಿದುಕೊಂಡ ಅನುಭವ ಆಗತ್ತೆ.
ಕಾಂತಾರ ಸಿನಿಮಾದ ವಿಮರ್ಶೆ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://youtu.be/VsN2Kqh3-zo
-masthmagaa.com
Contact Us for Advertisement

Leave a Reply