ಅಫ್ಘಾನಿಸ್ತಾನ ಅಧ್ಯಕ್ಷರ ಭವನ ಗುರಿಯಾಗಿಸಿ ಮೇಲೆ ರಾಕೆಟ್ ದಾಳಿ!

masthmagaa.com:

ಅಫ್ಘಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೋ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ಘೋಷಣೆ ಮಾಡಿದ ಬೆನ್ನಲ್ಲೇ ಹಿಂಸಾಚಾರ ಮಿತಿ ಮೀರಿದೆ. ಇದೀಗ ಅಫ್ಘಾನಿಸ್ತಾನದ ಅಧ್ಯಕ್ಷರ ಭವನವನ್ನು ಗುರಿಯಾಗಿಸಿ ರಾಕೆಟ್​​ ದಾಳಿ ನಡೆಸಲಾಗಿದೆ. ಇವತ್ತಿಂದ ಈದ್ ಅಲ್ ಅದಾ ಅಂದ್ರೆ ಬಕ್ರೀದ್ ಹಬ್ಬ ಶುರುವಾಗಿದ್ದು, ಅಧ್ಯಕ್ಷರ ಭವನದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಲಾಗ್ತಿತ್ತು. ಈ ವೇಳೆ ಒಂದರ ನಂತರ ಒಂದರಂತೆ ಮೂರು ರಾಕೆಟ್​ ದಾಳಿ ನಡೆದಿದೆ. ಪುಣ್ಯಕ್ಕೆ ಅಧ್ಯಕ್ಷರ ಭವನದ ಮೇಲೆ ಒಂದೂ ರಾಕೆಟ್ ಬಿದ್ದಿಲ್ಲ.. ಎಲ್ಲವೂ ಅಕ್ಕಪಕ್ಕದಲ್ಲಿ ಬಿದ್ದಿವೆ. ಇದ್ರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಕೆಟ್ ಸ್ಫೋಟದ ಶಬ್ದ ಜೋರಾಗಿ ಕೇಳ್ತಿದ್ರೂ ಪ್ರಾರ್ಥನೆ ಮುಂದುವರಿಸಿರೋದನ್ನು ನೋಡಬಹುದು.. ದಾಳಿ ನಡುವೆಯೂ ಅಧ್ಯಕ್ಷರ ಭವನದ ಆವರಣದಲ್ಲಿ ಅಧ್ಯಕ್ಷ ಅಶ್ರಫ್ ಘನಿ, ಹಬ್ಬದ ಅಂಗವಾಗಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈವರೆಗಿನ ವರದಿ ಪ್ರಕಾರ ಈ ದಾಳಿಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ದಾಳಿಯ ಹೊಣೆಯನ್ನು ಕೂಡ ಯಾರೂ ಹೊತ್ಕೊಂಡಿಲ್ಲ. ಅಧ್ಯಕ್ಷರ ಭವನವನ್ನು ಗುರಿಯಾಗಿಸಿ ಈ ರೀತಿ ದಾಳಿ ನಡೆಸಿರೋದು ಇದೇ ಮೊದಲೇನಲ್ಲ. ಈವರೆಗೆ ಹಲವಾರು ಭಾರಿ ಇಂಥಾ ವಿಫಲಯತ್ನಗಳು ನಡೆದಿವೆ. ಆದ್ರೆ ಕೊನೆಯದಾಗಿ ಡಿಸೆಂಬರ್​ನಲ್ಲಿ ಈ ಪ್ರಯತ್ನ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂತ ಘಟನೆಗಳು ನಡೆದಿರಲಿಲ್ಲ. ಇನ್ನೊಂದು ವಿಷ್ಯ ಅಂದ್ರೆ ತಾಲಿಬಾನಿಗಳು ಅಫ್ಘಾನಿಸ್ಥಾನವನ್ನು ಕಂಪ್ಲೀಟಾಗಿ ವಶಕ್ಕೆ ಪಡೆಯೋ ಕಾತುರದಲ್ಲಿರೋವಾಗಲೇ ಈ ದಾಳಿ ನಡೆದಿರೋದ್ರಿಂದ ಈ ದಾಳಿ ಹಿಂದೆಯೂ ಅವರದ್ದೇ ಕೈವಾಡ ಇದೆ ಅಂತ ಕೂಡ ಚರ್ಚೆ ನಡೀತಾ ಇದೆ. ಪ್ರತಿ ವರ್ಷ ತಾಲಿಬಾನಿಗಳು ಹಬ್ಬದ ಸಂದರ್ಭದಲ್ಲಿ ಕದನವಿರಾಮ ಘೋಷಿಸ್ತಿದ್ರು. ಆದ್ರೆ ಈ ವರ್ಷ ಹಬ್ಬದ ವೇಳೆ ಕದನ ವಿರಾಮ ಘೋಷಿಸಿಲ್ಲ. ಮತ್ತೊಂದ್ಕಡೆ ದೋಹಾದಲ್ಲಿ ಅಫ್ಘಾನಿಸ್ತಾನ ಸರ್ಕಾರ ಮತ್ತು ತಾಲಿಬಾನಿ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆ ವಿಫಲವಾಗಿದ್ದು, ಯಾವುದೇ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಈ ನಡುವೆ ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ ಜೊತೆ ಸೇರಿಕೊಂಡು ಅಫ್ಘಾನಿಸ್ಥಾನ ಗಡಿಯಲ್ಲಿ ಸೇನಾ ಸಮರಾಭ್ಯಾಸ ನಡೆಸ್ತೀವಿ ಅಂತ ರಷ್ಯಾ ಘೋಷಿಸಿದೆ. ಮುಂದಿನ ತಿಂಗಳು ಆಗಸ್ಟ್​ 5ರಿಂದ 10ರವರೆಗೆ ತಜಕಿಸ್ತಾನದ ಖಾರ್ಬ್​​ಮೇಡನ್​​ನಲ್ಲಿ ಈ ಸಮರಾಭ್ಯಾಸ ನಡೆಯಲಿದೆ. ಈ ಜಾಗ ಅಫ್ಘಾನಿಸ್ತಾನ ಬಾರ್ಡರ್ ಜೊತೆ ಗಡಿ ಹಂಚಿಕೊಂಡಿದೆ.

-masthmagaa.com

Contact Us for Advertisement

Leave a Reply