ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾ ಕಳುಹಿಸಿದ್ದೇನು?

masthmagaa.com:

ರಷ್ಯಾ ಇಂಟರ್​​​ನ್ಯಾಷನಲ್ ಸ್ಪೇಸ್​ ಸ್ಟೇಷನ್​​ಗೆ ನೌಕಾ ಲ್ಯಾಬ್ ಮಾಡ್ಯೂಲ್​​​ನ್ನು ಲಾಂಚ್ ಮಾಡಿದೆ. ಕಜಕಿಸ್ಥಾನದ ಬೈಕೋನುರ್​ ಕಾಸ್ಮೋಡ್ರೋಮ್​​​ನಿಂದ ಪ್ರೊಟೋನ್ ಎಂ ರಾಕೆಟ್​​ ಈ ಮಾಡ್ಯೂಲ್ ಹೊತ್ತು ಹಾರಿದೆ. ಈ ಮೂಲಕ 11 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸ್ಪೇಸ್​ ಸ್ಟೇಷನ್​​​ಗೆ ಒಂದು ಮಾಡ್ಯೂಲ್​ ಕಳುಹಿಸಿಕೊಟ್ಟಿದೆ. ಇದು 8 ದಿನಗಳ ಬಳಿಕ ಅಂದ್ರೆ ಜುಲೈ 29ರಂದು ಅಂತಾರಾಷ್ಟ್ರೀಯ ಸ್ಪೇಸ್​ ಸ್ಟೇಷನ್​​​ನಲ್ಲಿರೋ ರಷ್ಯಾದ ಜ್ವೆಜ್ಡಾ ಸರ್ವೀಸ್ ಮಾಡ್ಯೂಲ್​​​ಗೆ ಡಾಕ್ ಆಗಲಿದೆ. ಅಂದ್ರೆ ಹೋಗಿ ಕೂಡಿಕೊಳ್ಳಲಿದೆ. ಇದು ಅಂತಾರಾಷ್ಟ್ರೀಯ ಸ್ಪೇಸ್​ ಸ್ಟೇಷನ್​​ಗೆ ಹೆಚ್ಚುವರಿ ಸ್ಥಳಾವಕಾಶಕ್ಕೆ ಅವಕಾಶ ಮಾಡಿಕೊಡಲಿದೆ. ಈ ನೌಕಾ ಲ್ಯಾಬ್ ಮಾಡ್ಯೂಲ್​​​​​ ನಿರ್ಮಾಣ ಕಾರ್ಯ 1990ರ ದಶಕದಲ್ಲೇ ಶುರುವಾಗಿತ್ತು. 2007ರಲ್ಲೇ ಇದನ್ನ ಉಡಾವಣೆಗೆ ಪ್ಲಾನ್ ಮಾಡಲಾಗಿತ್ತು. ಆದ್ರೆ ಒಂದಲ್ಲಾ ಒಂದು ಕಾರಣಗಳಿಂದ ಡಿಲೇ ಮಾಡ್ತಾ ಬರಲಾಗಿತ್ತು. ಇದೀಗ ಲಾಂಚ್ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸ್ತಿರೋ ಪಿರ್ಸ್​​ ಮಾಡ್ಯೂಲ್​ನ್ನು ಈ ಜ್ವೆಜ್ಡಾ ರಿಪ್ಲೇಸ್ ಮಾಡಲಿದೆ. ಶುಕ್ರವಾರ ಅಂದ್ರೆ ನಾಳೆ ಈ ಪಿರ್ಸ್ ಮಾಡ್ಯೂಲ್​​ ಸ್ಪೇಸ್​ ಸ್ಟೇಷನ್​​ನಿಂದ ಡಿಟ್ಯಾಚ್ ಅಂದ್ರೆ ಕಳಚಿಕೊಳ್ಳಲಿದ್ದು, ಫೆಸಿಫಿಕ್ ಸಮುದ್ರದ ಮೇಲ್ಭಾಗದ ಭೂಮಿಯ ವಾತಾವರಣಕ್ಕೆ ಬಂದು ಸುಟ್ಟು ಬೂದಿಯಾಗಲಿದೆ. ಇಲ್ಲಿ ಒಂದು ಅಂಶ ಗಮನಿಸಬೇಕು.. ಬೇರೆ ವಿಚಾರದಲ್ಲಿ ಎಷ್ಟೇ ಕಿತ್ತಾಡಿದ್ರೂ ಬಾಹ್ಯಾಕಾಶ ವಿಚಾರದಲ್ಲಿ ಮಾತ್ರ ಅಮೆರಿಕ, ರಷ್ಯಾ ಎಲ್ಲಾ ಜೊತೆಯಾಗೇ ಇವೆ. ಸ್ಪೇಸ್ ಸ್ಟೇಷನ್ ಸ್ಥಾಪನೆಯಲ್ಲಿ ರಷ್ಯಾ ಕೂಡ ಅಮೆರಿಕ ಮತ್ತು ಇತರೆ ದೇಶಗಳೊಂದಿಗೆ ಕೈ ಜೋಡಿಸಿತ್ತು. ಅಂದಹಾಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು 1998ರಲ್ಲಿ ಅಮೆರಿಕ, ರಷ್ಯಾ, ಜಪಾನ್, ಯೂರೋಪ್, ಕೆನಡಾ ಸೇರಿಕೊಂಡು ನಿರ್ಮಿಸಿದ್ದವು.

-masthmagaa.com

Contact Us for Advertisement

Leave a Reply