ರಷ್ಯಾದಲ್ಲಿ ಪುಟಿನ್​ಗೆ ಕಾನೂನಿಗಿಂತ ಎತ್ತರದ ಸ್ಥಾನ ಕೊಡುವ ಕಾನೂನು..!

masthmagaa.com:

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಜೀವ ಇರೋ ತನಕವೂ ಇನ್ಮುಂದೆ ಕಾನೂನಿನ ಭಯ ಇಲ್ಲ. ಯಾಕಂದ್ರೆ ಜೀವನ ಪರ್ಯಂತ ಅವರ ವಿರುದ್ಧ ಯಾವುದೇ ಪ್ರಕರಣದ ತನಿಖೆ ನಡೆಸಲು ಸಾಧ್ಯವಾಗದ ರೀತಿಯಲ್ಲಿ ಕಾನೂನು ತರುತ್ತಿದ್ದಾರೆ. ರಷ್ಯಾ ಸಂಸತ್​ನ ಕೆಳಮನೆ ಸ್ಟೇಟ್ ಡುಮಾದಲ್ಲಿ ಈ ಕಾನೂನು ಈಗಾಗಲೇ ಪಾಸ್​ ಆಗಿದೆ. ಇದರ ಪ್ರಕಾರ ರಷ್ಯಾದ ಮಾಜಿ ಅಧ್ಯಕ್ಷರು ಎಂತಹದ್ದೇ ಅಪರಾಧ ಮಾಡಿದರೂ ಕಾನೂನು ಕ್ರಮ ಕೈಗೊಳ್ಳಲು, ಶಿಕ್ಷೆ ವಿಧಿಸಲು ಪೊಲೀಸರು ಹಾಗೂ ನ್ಯಾಯಾಲಯಗಳಿಗೆ ಅಧಿಕಾರ ಇರೋದಿಲ್ಲ. ಕೇವಲ ದೇಶದ್ರೋಹದಂತ ಪ್ರಕರಣಗಳಲ್ಲಿ ಮಾತ್ರ ಕ್ರಮ ಕೈಗೊಳ್ಳಲು ಚಾನ್ಸಸ್ ಇರುತ್ತೆ. ಆಗಲೂ ಕೂಡ ಸುಪ್ರೀಂಕೋರ್ಟ್​ನಲ್ಲಿ ತೀರ್ಮಾನ ಆಗಿ, ನಂತರ ಸಂಸತ್​ನಲ್ಲಿ ಮೂರನೇ ಎರಡರಷ್ಟು ಬಹುಮತದ ಬೆಂಬಲ ಸಿಕ್ಕರೆ ಮಾತ್ರ. ಈ ಮೊದಲೂ ಕೂಡ ರಷ್ಯಾದಲ್ಲಿ ಮಾಜಿ ಆಧ್ಯಕ್ಷರುಗಳಿಗೆ ಅವರು ಅಧಿಕಾರದಲ್ಲಿದ್ದಾಗ ಮಾಡಿದ ಅಪರಾಧಗಳಿಗೆ ಸಂಬಂಧಪಟ್ಟ ಹಾಗೆ ತನಿಖೆ ಹಾಗೂ ಶಿಕ್ಷೆಯಿಂದ ವಿನಾಯ್ತಿ ಇತ್ತು. ಆದ್ರೆ ಈಗ ಜೀವನಪರ್ಯಂತ ಅವರು ಏನು ಮಾಡಿದರೂ ಹೇಳೋರಿಲ್ಲ ಕೇಳೋರಿಲ್ಲ. ಕೇಸ್ ಹಾಕೋ ಹಾಗಿಲ್ಲ, ಮನೆ ಮೇಲೆ ರೇಡ್ ಮಾಡೋ ಹಾಗಿಲ್ಲ, ಶೋಧ ನಡೆಸೋ ಹಾಗಿಲ್ಲ, ಅರೆಸ್ಟ್ ಮಾಡೋ ಹಾಗಿಲ್ಲ, ಶಿಕ್ಷೆ ವಿಧಿಸೋ ಹಾಗಿಲ್ಲ.!

ಪುಟಿನ್ ಎಂತಹ ಕಿಲಾಡಿ ಮನುಷ್ಯ ಅಂದ್ರೆ, ಹೆಸರಿಗೆ ಮಾತ್ರ ಎಲ್ಲಾ ಮಾಜಿ ಅಧ್ಯಕ್ಷರುಗಳಿಗೆ ಅಂತ ಕಾನೂನು ಮಾಡಿರೋದು. ಆದ್ರೆ ಅಸಲಿಗೆ ಇದು ಕೇವಲ ಅವರ ಬುಡ ಗಟ್ಟಿ ಮಾಡಿಕೊಳ್ಳೋ ತಂತ್ರ. ಯಾಕೆ ಅಂದ್ರೆ, ರಷ್ಯಾದಲ್ಲಿ ಈಗ ಬದುಕಿರೋ ಮಾಜಿ ಅಧ್ಯಕ್ಷರು ಒಬ್ಬರು ಮಾತ್ರ. ಅದು ಡಿಮಿಟ್ರಿ ಮಡ್ವೆದೆವ್. ಇವರು ವ್ಲಾದಿಮಿರ್ ಪುಟಿನ್ ಅವರ ಪರಮಾಪ್ತ. ಅದು ಬಿಟ್ರೆ ಮಾಜಿ ಅಧ್ಯಕ್ಷ ಬೇಕು ಅಂದ್ರೆ ಈ ಪುಟಿನ್ ಅವರೇ ಮಾಜಿ ಆಗಬೇಕು ಅಷ್ಟೆ. ಸೋ, ಜೀವಂತ ಇರೋ ತನಕ ಅಧ್ಯಕ್ಷರಾಗಿ ಆಯ್ಕೆ ಆಗೋಕೆ ಅವಕಾಶ ಮಾಡಿಕೊಡೋ ಕಾನೂನು ಇದೇ ವರ್ಷ ಪಾಸ್ ಮಾಡಿಕೊಂಡಿರೋ ವ್ಲಾದಿಮಿರ್ ಪುಟಿನ್, ಈಗ ತಾನು ಏನು ಮಾಡಿದರೂ ಯಾರೂ ಟಚ್ ಮಾಡೋಕೆ ಸಾಧ್ಯವಾಗದಂತಹ ಕಾನೂನು ಮಾಡಿಕೊಳ್ಳುತ್ತಿದ್ದಾರೆ. ಸರ್ವಾಧಿಕಾರದ ಸರ್ಕಾರಗಳಿರೋ ದೇಶಗಳ ಕಥೆ ಹೇಗಿದೆ ನೋಡಿ!

ಇಲ್ಲಿ ಇನ್ನೊಂದು ವದಂತಿ ಇದೆ. ಈಗಾಗಲೇ 68 ವರ್ಷ ವಯಸ್ಸಾಗಿರೋ ಪುಟಿನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಅಧಿಕಾರದಿಂದ ಕೆಳಗಿಳಿಯಲು ಪ್ಲಾನ್ ಮಾಡುತ್ತಿದ್ದಾರೆ. ಆದ್ರೆ ಎಲ್ಲಾ ಸರ್ವಾಧಿಕಾರಿಗಳಂತೆ ಪುಟಿನ್ ಅವರಿಗೂ ಭಯ ಇದೆ. ಎಲ್ಲಿ ತನ್ನ ನಂತರ ಬರುವವರು ತನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಾರೋ ಅನ್ನೋ ತಳಮಳ ಇದೆ. ಅದೇ ಕಾರಣಕ್ಕೆ ಇಷ್ಟೆಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಈ ವದಂತಿಯನ್ನ ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್ ನಿರಾಕರಿಸಿದೆ. ಪುಟಿನ್ ಕೆಳಗಿಳಿಯೋದಿಲ್ಲ, ಅವರ ಆರೋಗ್ಯ ಚೆನ್ನಾಗಿದೆ ಅಂತ ಕ್ರೆಮ್ಲಿನ್ ತಿಳಿಸಿದೆ.

-masthmagaa.com

Contact Us for Advertisement

Leave a Reply