ಚೀನಾದ ಸಹಾಯ ಕೇಳಿತಾ ರಷ್ಯಾ?

masthmagaa.com:

ಯುಕ್ರೇನ್‌ ಯುದ್ಧದಲ್ಲಿ ಬಳಸೋಕೆ ರಷ್ಯಾ, ತನ್ನ ಹೊಸ ಫ್ರೆಂಡ್‌ ಚೀನಾ ಹತ್ರ ಸೇನಾ ಉಪಕರಣಗಳನ್ನ ಕೇಳಿದೆ ಅನ್ನೋ ಮಾಹಿತಿ ಈಗ ಹೊರಬಂದಿದೆ. ಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವನ್‌ ರೋಮ್‌ನಲ್ಲಿ ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ಯಾಂಗ್‌ ಜೀಚಿಯನ್ನು ಭೇಟಿಯಾಗುತ್ತಿರುವ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ. ಈ ಸಂಬಂಧ ಮಾತಾಡಿರೋ ಸಲ್ಲಿವನ್‌ “ಅದೆಲ್ಲ ಮುಂದುವರೆಯೋಕೆ ನಾವು ಬಿಡಲ್ಲ, ಹಾಗೇನಾದ್ರು ಆದ್ರೆ ಅದ್ರ ಪರಿಣಾಮಗಳನ್ನ ಅನುಭವಿಸಬೇಕಾಗುತ್ತದೆ” ಅಂತ ಎಚ್ಚರಿಸಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರೋ ಅಮೇರಿಕದಲ್ಲಿನ ಚೀನಾ ರಾಯಭಾರ ಕಚೇರಿ ವಕ್ತಾರ ಲಿಯು ಪೆಂಗ್ಯು, ” ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯುಕ್ರೇನ್‌ ಪರಿಸ್ಥಿತಿ ಕೈ ಮೀರಿ ಹೋಗದಂತೆ ತಡೆಯೋದಷ್ಟೆ ಚೀನಾದ ಪ್ರಯಾರಿಟಿ” ಅಂತ ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಚೀನಾ ರಷ್ಯಾದ ಜೈವಿಕ ಆಯುಧದ ಸುಳ್ಳುಗಳನ್ನ ಹರಡೋಕೆ ಸಹಾಯ ಮಾಡ್ತಿದೆ. ಆ ಮೂಲಕ ರಷ್ಯಾದ ಬಯೋಲಾಜಿಕಲ್‌ ಅಥ್ವಾ ಕೆಮಿಕಲ್‌ ವೆಪನ್‌ ಬಳಸೋ ಸಮರ್ಥನೆಗೆ ಚೀನಾ ಸಹಾಯ ಮಾಡ್ತಿದೆ ಅಂತ ಅಮೇರಿಕ ಆರೋಪ ಮಾಡಿದೆ.

ಈ ನಡುವೆಯೇ ಯುಕ್ರೇನ್‌ – ರಷ್ಯಾ ಸಂಘರ್ಷದ ವಿಚಾರವಾಗಿ ಅಮೆರಿಕಾ ಮತ್ತು ಚೀನಾದ ಉನ್ನತ ಅಧಿಕಾರಿಗಳು ಇಟಲಿಯ ರೋಮ್‌ ನಲ್ಲಿ ಮಾತಕತೆ ನಡೆಸ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕಾದ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ ವಕ್ತಾರೆ ಎಮಿಲಿ ಹಾರ್ನ್‌,” ಅಮೆರಿಕಾದ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವನ್ ಹಾಗು ಚೀನಾದ ಹಿರಿಯ ಅಧಿಕಾರಿಗಳು ಯುಕ್ರೇನ್‌ ಮೇಲೆ ರಷ್ಯಾ ಮಾಡಿರುವ ದಾಳಿ, ಹಾಗು ಉಂಟಾಗುತ್ತಿರುವ ಜಾಗತಿಕ ಉದ್ವಿಗ್ನತೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಅಂತ ಹೇಳಿದ್ದಾರೆ.. ಅಲ್ದೇ ಈ ಯುದ್ದದಿಂದ ಉಂಟಾಗುವ ಜಾಗತಿಕ ಪರಿಣಾಮಗಳ ಬಗ್ಗೆ, ಆಗುತ್ತಿರುವ ನಷ್ಟಗಳ ಬಗ್ಗೆಯೂ ಎರಡೂ ರಾಷ್ಟ್ರಗಳು ಚರ್ಚಿಸಲಿವೆ ಅಂತ ಹೇಳಿಕೆ ಬಿಡುಗಡೆ ಮಾಡಿದ್ದಾರೆ…ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಭದ್ರತಾ ಸಲಹೆಗಾರ ಜೆಕ್‌ ಸಲ್ಲಿವನ್, “ನಾವು ಈ ವಿಚಾರವಾಗಿ ಚೀನಾ ಜೊತೆ ಚರ್ಚೆ ನಡೆಸ್ತೀವಿ. ರಷ್ಯಾ ವಿಚಾರದಲ್ಲಿ ಚೀನಾದ ನಿಲುವು ಏನು ಅನ್ನೋದರ ಕುರಿತು ಕೂಡ ನಾವು ಮಾತು ಕತೆ ನಡೆಸ್ತೀವಿ ಅಂತ ಹೇಳಿದ್ದಾರೆ, ಮುಂದುವರೆದು ಮಾತನಾಡಿರುವ ಅವರು “ಯುಕ್ರೇನ್‌ ವಿಚಾರದಲ್ಲಿ ಯಾವುದೇ ರಾಷ್ಟ್ರ ರಷ್ಯಾ ಬೆನ್ನಿಗೆ ನಿಂತ್ರೆ ಅಂತವರು ಘೋರ ಪರಿಣಾಮಗಳನ್ನ ಫೇಸ್‌ ಮಾಡ್ಬೇಕಾಗುತ್ತೆ” ಅಂತನೂ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ವಕ್ತಾರ ಝಾವೋ ಲಿಜಿಯಾನ್​, ಅಮೆರಿಕ ಯುಕ್ರೇನ್ ವಿಚಾರವಾಗಿ ಚೀನಾವನ್ನು ಟಾರ್ಗೆಟ್ ಮಾಡ್ತಿದೆ. ದುರುದ್ದೇಶದಿಂದ ಚೀನಾ ಹೆಸರು ಹಾಳು ಮಾಡಲು ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಅಂತ ಕಿಡಿಕಾರಿದ್ದಾರೆ. ಇವತ್ತು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲ್ಲಿವನ್ ಚೀನೀ ಪ್ರತಿನಿಧಿಗಳನ್ನು ರೋಮ್​ನಲ್ಲಿ ಭೇಟಿಯಾಗಿ ಚರ್ಚಿಸಲಿದ್ದಾರೆ. ಇಂತಾ ಹೊತ್ತಲ್ಲೇ ಈ ರೀತಿಯ ಆರೋಪ, ಪ್ರತ್ಯಾರೋಪಗಳು ಜೋರಾಗಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ.

-masthmagaa.com

Contact Us for Advertisement

Leave a Reply