ʻಸನಾತನ ಧರ್ಮ ನಿರ್ಮೂಲನೆ ಹೆಸರು ತುಂಬಾ ಇಷ್ಟ!ʼ ವಿವಾದದ ಕಿಡಿ ಹಚ್ಚಿದ TN ಸಿಎಂ ಪುತ್ರ!

masthmagaa.com:

ಸನಾತನ ಧರ್ಮದ ಕುರಿತು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಪುತ್ರ ಹಾಗೂ ಅಲ್ಲಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ ‘ಸನಾತನ ನಿರ್ಮೂಲನಾ ಸಮಾವೇಶ’ದಲ್ಲಿ ಭಾಗವಹಿಸಿ ಮಾತಾಡಿದ್ದು, ಸನಾತನ ಧರ್ಮವನ್ನ ಮಲೇರಿಯಾ ಹಾಗೂ ಡೆಂಗ್ಯುಗೆ ಹೋಲಿಸಿದ್ದಾರೆ. ನೀವು ‘ಸನಾತನ ವಿರೋಧಿ ಸಮ್ಮೇಳನ’ ಅಂತ ಆಯೋಜಿಸುವ ಬದಲು ‘ಸನಾತನ ನಿರ್ಮೂಲನಾ ಸಮ್ಮೇಳನ’ ಅಂತ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟ ಆಯಿತು. ಕೆಲವು ವಿಷಯಗಳನ್ನು ನಾವು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಗ್ಯು, ಮಲೇರಿಯಾ ಅಥವಾ
ಕೋವಿಡ್‌ನಂತಹ ಸೋಂಕನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಅಂತ ಉದಯನಿಧಿ ಹೇಳಿಕೆ ಕೊಟ್ಟಿದ್ದಾರೆ. ಇದೀಗ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ಸೇರಿ ಅನೇಕ ಪಕ್ಷಗಳು ಸಂಘಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ, ʻಉದಯನಿಧಿ ಅವ್ರ ಹೇಳಿಕೆ ಪ್ರತಿಕಪಕ್ಷಗಳ ಒಕ್ಕೂಟ ʻI.N.D.I.Aʼದ ಹಿಂದುತ್ವ ದ್ವೇಷ ಹಾಗೂ ನಮ್ಮ ಪರಂಪರೆಯ ಮೇಲಿನ ದಾಳಿಯನ್ನ ತೋರಿಸುತ್ತೆ. ಅವರು ವೋಟ್‌ಬ್ಯಾಂಕ್‌ ರಾಜಕಾರಣ ಮಾಡ್ತಿದ್ದು, ಸನಾತನ ಧರ್ಮದ ವಿರುದ್ಧ ಮಾತಾಡಿ ಅವಮಾನಿಸಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಹೇಳಿಕೆ ಸಂಬಂಧಿಸಿದಂತೆ ಉದಯನಿಧಿ ಅವ್ರ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಇತ್ತ ಆಕ್ರೋಶ ವ್ಯಕ್ತವಾಗ್ತಿದ್ದಂತೆ ಈ ಬಗ್ಗೆ ಮತ್ತೆ ಮಾತಾಡಿರುವ ಉದಯನಿಧಿ, ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಜೊತೆಗೆ ಕಾನೂನು ಹೋರಾಟ ಸೇರಿದಂತೆ ಯಾವುದೇ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ ಅಂತ ತಮ್ಮ ಹೇಳಿಕೆ ಹಾಗೂ ನಡೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply