ಬ್ರೇನ್ ಡೆಡ್ ಆಗಿದೆ. ಕೇವಲಸಂಚಾರಿ ವಿಜಯ್ ಅಂಗಾಂಗ ದಾನಕ್ಕಾಗಿ ಕಾಯಲಾಗುತ್ತಿದೆ.

masthmagaa.com:

ಸಂಚಾರಿ ವಿಜಯ್ ಅಂದ ಕೂಡಲೇ “ನಾನು ಅವನಲ್ಲ ಅವಳು ಸಿನೆಮಾ ಮೊದಲು ನೆನಪಾಗುತ್ತೆ. ಸಾಮಾನ್ಯವಾಗಿ ಈ ಸಿನಿಮಾನ ಮಾಸ್ ಕಮರ್ಶಿಯಲ್ ಸಿನಿಮಾ ನೋಡುವ ಪ್ರೇಕ್ಷಕರು ನೋಡಿರಲಿಕ್ಕೆ ಸಾಧ್ಯ ಇಲ್ಲ ಬಿಡಿ. ಅದೂ ಅಲ್ಲದೇ ಇಂತಹ ಆಫ್ ಬೀಟ್ ಸಿನಿಮಾಗಳನ್ನ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುವುದಕ್ಕಾಗಲೀ, ಪ್ರಚಾರ ಮಾಡುವುದಕ್ಕಾಗಲೀ ಕನ್ನಡ ಚಿತ್ರರಂಗದಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ಈ ಕಾರಣಕ್ಕೆ ಇಂಥ ಆರ್ಟ್ ಸಿನಿಮಾಗಳಲ್ಲಿ ನಟಿಸಿದ ನಟರ ಪ್ರತಿಭೆ ತೆರೆಮರೆಯಲ್ಲೇ ಉಳಿದುಕೊಳ್ಳುವುದು ನಿಶ್ಚಿತ. ಅದೂ ಅಲ್ಲದೆ ಇಂತಹ ಕಲಾವಿದರಿಗೆ ಅಪಘಾತ ಆದಾಗಲೋ ಅಥವಾ ಅಕಾಲಿಕ ಮರಣ ಉಂಟಾದಾಗಲೋ ಮಾಧ್ಯಮಗಳು, ಜನಗಳು ಅಂಥವರ ಬಗ್ಗೆ ಹೆಕ್ಕಿ ಹೆಕ್ಕಿ ವಿಷಯ ತಿಳಿದುಕೊಳ್ಳುವ, ಅವರ ಸಿನಿಮಾಗಳನ್ನ ನೋಡುವ ಪ್ರಯತ್ನ ಮಾಡೋದು ದುರಂತವೇ ಸರಿ.

ಹಾಗಂತ ಸಂಚಾರಿ ವಿಜಯ್ ಬರೀ ಇಂಥ ಆಫ್ ಬೀಟ್ ಸಿನಿಮಾಗಳಿಗೇ ಸೀಮಿತವಾದ ನಟರೇನಲ್ಲ, ಕೆಲವು ಕಮರ್ಶಿಯಲ್ ಸಿನಿಮಾಗಳಾದ ಜಂಟಲ್ ಮ್ಯಾನ್, ಕಿಲ್ಲಿಂಗ್ ವೀರಪ್ಪನ್ ಹಾಗೆ ಇತ್ತೀಚೆಗೆ ಬಿಡುಗಡೆಯಾದ ಆಕ್ಟ್ -1978 ಸಿನಿಮಾಗಳಲ್ಲು ಕೂಡ ತಮ್ಮದೇ ಆದ ಛಾಪು ಮೂಡಿಸಿ ವರ್ಸಟೈಲ್ ನಟ ಎನಿಸಿಕೊಂಡವರು.

ಚಿತ್ರರಂಗದ ಬಗ್ಗೆ ಹಿಂದೂ ಮುಂದೂ ಗೊತ್ತಿಲದೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಒಬ್ಬ ಉತ್ತಮ ಕಲಾವಿದನಾಗಿ ಬದುಕು ಕಟ್ಟಿಕೊಳ್ಳಬೇಕು ಎಂಬ ಆಸೆಯಿಂದ, ಯಾವುದೇ ಗಾಡ್ ಫಾದರ್ ಇಲ್ಲದೆ, ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಹಲವಾರು ಜನರಲ್ಲಿ ವಿಜಯ್ ಕೂಡ ಒಬ್ಬರು. ಸಂಚಾರಿ ವಿಜಯ್ ಹೆಸರಿನಿಂದ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ ಜನಿಸಿದ್ದು ಜುಲೈ 17, 1983 ರಲ್ಲಿ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ಹುಟ್ಟಿದ ಇವರದ್ದು ಕಲೆಯ ಹಿನ್ನೆಲೆಯ ಕುಟುಂಬವಾಗಿದ್ದು, ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ರೇಡಿಯೋದಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡುತ್ತಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.

ನಟನಾಗುವ ಮೊದಲು ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಸಂಚಾರಿ ವಿಜಯ್, ಕೊ ಕರಿಕ್ಯುಲರ್ ಆಕ್ಟಿವಿಟೀಸ್ ನಲ್ಲಿ ತುಂಬಾ ಆಕ್ಟಿವ್ ಆಗಿ ಇದ್ದರು. ಇದನ್ನು ಗಮನಿಸುತ್ತಿದ್ದ ಸಹೋದ್ಯೋಗಿ ಒಬ್ಬರು ನಿನ್ನ ಜಾಗ ಕೇವಲ ಉಪನ್ಯಾಸಕನಾಗಿ ಕೆಲಸ ಮಾಡುವುದಲ್ಲ ಒಬ್ಬ ದೊಡ್ಡ ಕಲಾವಿದನಾಗುವ ಎಲ್ಲ ಯೋಗ್ಯತೆಗಳೂ ನಿನ್ನಲಿವೆ ಎಂದು
ಹೇಳಿದರಂತೆ. ಇದನ್ನು ಕೇಳಿ ಪ್ರೇರೇಪಿತರಾದ ವಿಜಯ್ತ ತಮ್ಮಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳ ಕಾಲ ಸಂಚಾರಿ ಥಿಯೇಟರ್ ನಲ್ಲಿ ರಂಗ ತಂಡದ ಹಲಾವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ ಎರಡು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಪ್ರಮುಖವಾಗಿ ಕನ್ನಡ ಚಿತ್ರರಂಗ ಸೇರಿ ತಮಿಳು, ತೆಲುಗು ಮತ್ತು ಹಿಂದಿ ಸಿನೆಮದಲ್ಲಿಯೂ ಕೆಲಸ ಮಾಡಿರುವ ಸಂಚಾರಿ ವಿಜಯ್ ಅವರಿಗೆ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡದ “ನಾನು ಅವನಲ್ಲ ಅವಳು” ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ.
ಅಂದಹಾಗೆ, ಲಿಂಗದೇವರು ನಿರ್ದೇಶನದ ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ಮಾಡಿದ್ದರು. ಬಹುಶ ಇಂತಹ ಒಂದು ಪಾತ್ರದಲ್ಲಿ ನಟಿಸಬಲ್ಲ ಸೆನ್ಸಿಬಿಲಿಟಿ ಮತ್ತು ಅವರು ಆ ಪಾತ್ರವನ್ನ ಆಹ್ವಾಹನೆ ಮಾಡಿಕೊಂಡ ರೀತಿಗೆ ಒಂದು ಹಾಟ್ಸ್ ಆಫ್ ಹೇಳಲೇಬೇಕು.

ಅಂದಹಾಗೆ ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಇನ್ನೊಂದು ಸಿನೆಮಾ “ಹರಿವು” ಚಿತ್ರಕ್ಕೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ದೊರಕಿದೆ.

ಮೊದಲೇ ಹೇಳಿದ ಹಾಗೆ ವಿಜಯ್ ಅವರಿಗೆ ಚಿತ್ರರಂಗಕ್ಕೆ ಬರೋಕೆ ಯಾವುದೇ ಗಾಡ್ ಫಾದರ್ ಇರಲಿಲ್ಲ. ಸಿಕ್ಕಿದ ಸಣ್ಣ ಪುಟ್ಟ ಅವಕಾಶನ ಬಳಸಿಕೊಂಡು, ಸೀರಿಯಲ್ ಗಳಲ್ಲಿ ಅಲ್ಲೊಂದು, ಇಲ್ಲೊಂದು ಚಿಕ್ಕ ಚಿಕ್ಕ ಪಾತ್ರ ಮಾಡಿಕೊಂಡು, ನಂತರ ಆ ಧಾರಾವಾಹಿಯ ನಿರ್ದೇಶಕರು ಒಳ್ಳೆ ನಟ ಅಂತ ಇನ್ನೊಬ್ರಿಗೆ ರೆಫರ್ ಮಾಡಿ ಹೀಗೆ ಒಂದೊಂದೆ ಒಂದೊಂದೇ ಅವಕಾಶ ಪಡೆದುಕೊಂಡು ಜೊತೆ ಜೊತೆಗೆ ನಾಟಕ, ಕಿರುತೆರೆ, ಕಿರು ಚಿತ್ರಗಳಲ್ಲಿ ನಟಿಸಿಕೊಂಡು ಬೆಳ್ಳಿತೆರೆಯಲ್ಲಿ ಯಶಸ್ವಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಸಂಚಾರಿ ವಿಜಯ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಮಾರಂಭವೊಂದರಲ್ಲಿ ಹೇಳಿದಿಷ್ಟು

“ಯಾರೋ ಒಬ್ಬ ತಮಿಳು ನಟ ಒಂದು ಸಿನಿಮಾದಲ್ಲಿ ತ್ರಿತೀಯ ಲಿಂಗಿ ಪಾತ್ರ ಮಾಡಿದ್ದಾರಂತೆ, ನಾನು ಆ ಸಿನಿಮಾನೂ ನೋಡಿದ್ದೀನಿ, ವಿಜಯ್ ಅವರ ನಾನು ಅವನಲ್ಲ ಅವಳು ಸಿನಿಮಾ ಕೂಡ ನೋಡಿದ್ದೀನಿ, ಅದಕ್ಕೆ ಕಂಪೇರ್ ಮಾಡಿದ್ರೆ ಸಂಚಾರಿ ವಿಜಯ್ ನಟನೆ ಫಾರ್ ಬೆಟರ್, ಆದ್ರೆ ನಮ್ ಕನ್ನಡಿಗರು ಬೇರೆ ಭಾಷೆಯ ನಟ ಮಾಡಿದ್ದೆ ದೊಡ್ಡದು ಅಂತ ಬಕೆಟ್ ಹಿಡಿಯೋದು ಮೊದಲು ಬಿಡಬೇಕು, ಇಲ್ಲಿ ನೋಡ್ರಿ ಇವರು ನಿಜವಾದ ಕಲಾವಿದರು, ನಾನು ಅವನಲ್ಲ ಅವಳು ನೋಡಿ ನನಗೆ ಇವರೇನ್ ನಟ ರೀ ಅನ್ನಿಸಬಿಡ್ತು. ನೋಡ್ರಿ, ಇಂಥ ನಟರನ್ನ ಬೆಳೆಸಬೇಕು ಕಣ್ರೀ” ಅಂತ ಹೇಳಿದ್ದರು. ಇದರಿಂದ ನಮಗೆ ಗೊತ್ತಾಗೋದು ಏನಂದ್ರೆ ಸಂಚಾರಿ ವಿಜಯ್ ಇಸ್ ಅನ್ ಅಸೆಟ್ ಟು ಕನ್ನಡ ಇಂಡಸ್ಟ್ರಿ ಅನ್ನೋದು.

ಇಂಥ ಒಬ್ಬ ಪ್ರತಿಭಾನ್ವಿತ ಕಲಾವಿದ ಇವತ್ತು ಅಪಘಾತಕ್ಕೆ ಈಡಾಗಿ ಬ್ರೇನ್ ಡೆಡ್ ಆಗಿ ಈಗ ಇಲ್ಲವಾಗಿದ್ದಾರೆ. ಮೊನ್ನೆ ರಾತ್ರಿ ಜೆಪಿ ನಗರದ 7ನೇ ಹಂತದಲ್ಲಿ ಗೆಳೆಯ ನವೀನ್ ಜೊತೆ ಮನೆಗೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿದ್ದರಿಂದ ಅಪಘಾತ ಸಂಭವಿಸಿತ್ತು. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಬೈಕ್ ವೇಗವಾಗಿದ್ದರಿಂದ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಇಬ್ಬರೂ ಹೆಲ್ಮೆಟ್ ಕೂಡ ಹಾಕಿರಲಿಲ್ಲ ಅನ್ಓ ಮಾಹಿತಿ ಇದೆ. ಇದರ ಪರಿಣಾಮ
ವಿಜಯ್ ಬಲ ತೊಡೆ ಭಾಗ ಮುರಿದು, ಮೆದುಳಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿತ್ತು. ಆ ರಾತ್ರಿಯೇ ಶಸ್ತ್ರಚಿಕಿತ್ಸೆ ಕೂಡ ನಡೆಸಲಾಗಿತ್ತು. ಡಾ.ಅರುಣ್.ಎಲ್.ನಾಯ್ಕ್ ಅಂಡ್ ಟೀಂ ಸಂಚಾರಿ ವಿಜಯ್ಉಳಿಸಲು ಎಲ್ಲ ಪ್ರಯತ್ನ ಪಟ್ಟಿದ್ದರು.

ವಿಜಯ್ ಇನ್ನು ಬದುಕೋದಿಲ್ಲ ಅಂತ ಖಚಿತವಾಗ್ತಿದ್ದಂತೆ ಮಾತನಾಡಿದ ಅಪೋಲೋ ಆಸ್ಪತ್ರೆ ವೈದ್ಯರು, ‘ಸಂಚಾರಿ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸದೇ ಬ್ರೈನ್ ಫೇಲ್ಯೂರ್ ಹಂತಕ್ಕೆ ತಲುಪಿದ್ದು ವೆಂಟಿಲೇಟರ್ ಆಧಾರದ ಮೇಲೆ ಅವರ ದೇಹದ ಉಳಿದ ಚಟುವಟಿಕೆಗಳು ಅವಲಂಬಿತವಾಗಿದೆ ಜೊತೆಗೆ ಅವರ ಮೆದುಳಿಗೆ ಸಂಬಂಧಪಟ್ಟ ಯಾವುದೇ ಚಟುವಟಿಕೆಗಳು ಮರುಕಳಿಸುವ ಸಾಧ್ಯತೆ ಬಹಳ ಕಮ್ಮಿ ಇದೆ’ ಅಂತ ಹೇಳಿದ್ರು.
ಬಳಿಕ ಮಾತನಾಡಿದ ವಿಜಯ್ ಸಹೋದರ ಸಿದ್ದೇಶ್ ಅವರಂತೂ, ‘ ವಿಜಯ್ ಅಂಗಾಗ ದಾನ ಮಾಡಿ, ಆಮೂಲಕವಾದರೂ ಅವನ ಆತ್ಮಕ್ಕೆ ಶಾಂತಿ ಸಿಗುವಂತಾಗಬೇಕು ಅಂತ ಕೇಳ್ಕೋತೀನಿ’ ಅಂದ್ರು.

ಎರಡನೆಯ ಲಾಕ್ ಡೌನ್ ಸಮಯದಲ್ಲಿ`ಉಸಿರು’ ಹೆಸರಿನ ತಂಡವನ್ನು ಕಟ್ಟಿಕೊಂಡು ಲಾಕ್‍ಡೌನ್ ನಲ್ಲಿ ಸಂಕಷ್ಟ ಸಿಲುಕಿದವರಿಗೆ ಸಹಾಯ ಮಾಡುತ್ತಿದ್ದ ಸಂಚಾರಿ ವಿಜಯ್ ಅವರಿಗೆ ಈ ರೀತಿ ಆಗಬಾರದಿತ್ತು.
ಇಂಥ ಹೃದಯವಂತ, ಪ್ರತಿಭಾವಂತ ನಟ ಇಂತಹ ವಯಸಲ್ಲದ ವಯಸ್ಸಿನಲ್ಲಿ ಸಾವಿನ ದರ್ಶನ ಮಾಡುವಂತೆ ಆಗಿರುವುದು ಅತ್ಯಂತ ದುಃಖದ ವಿಚಾರ. ಅಗೇನ್, ನಮ್ಮ ದೇಶದ ಯುವಕರಿಗೆ ಹೆಲ್ಮೆಟ್ ಮಹತ್ವ ಎಷ್ಟು ಹೇಳಿದರೂ ಅರ್ಥ ಆಗಲ್ಲ. ದಿನವೂ ನೂರಾರು ಜನ ಹೆಲ್ಮೆಟ್ ಹಾಕದ ಒಂದೇ ಕಾರಣಕ್ಕೆ ಜೀವ ಕಳ್ಕೋತಿದಾರೆ. ಆದ್ರೆ ಇಂತಾ ಖ್ಯಾತನಾಮರಿಗೆ ಸಂಬಂಧಿಸಿದ ದುರಂತಗಳು ನಡೆದಾಗ ಮಾತ್ರ ಸ್ವಲ್ಪ ಚರ್ಚೆ ಆಗುತ್ತೆ. ಆಮೇಲೆ ಮತ್ತೆ ಮೈಮರೀತಾರೆ. ಇನ್ಮುಂದಾದ್ರೂ ಪಾಠ ಕಲಿತ್ರೆ ಇಂಥಾ ದುರಂತಗಳನ್ನ ತಡೀಬೋದು. ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿ..

 

masthmagaa.com:

Contact Us for Advertisement

Leave a Reply