ಪಾಕ್‌ಗೆ ಕಾಶ್ಮೀರ ಶಾಕ್‌! ಭಾರತಕ್ಕೆ ಸೌದಿ ಅರೇಬಿಯಾದ ಬೆಂಬಲ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಕಾಶ್ಮೀರ ವಿಚಾರವಾಗಿ ಸೌದಿ ಅರೇಬಿಯಾ ಬಿಗ್‌ ಸ್ಟೇಟ್‌ಮೆಂಟ್‌ ಕೊಟ್ಟಿದೆ. ಕಾಶ್ಮೀರ ವಿಚಾರ ಎರಡು ದೇಶಗಳ ಮ್ಯಾಟರ್. ಅದನ್ನ ಮೂರನೇ ಪಾರ್ಟಿಯವರು‌ ಬಂದು ಕೈ ಆಡಿಸೋ ಅಗತ್ಯ ಇಲ್ಲ ಅಂತ ಹೇಳಿದೆ. ಈ ಮೂಲಕ ಪಾಕಿಸ್ತಾನಕ್ಕೆ ಬಿಗ್‌ ಶಾಕ್‌ ಕೊಟ್ಟಿದೆ. ಯಾಕಂದ್ರೆ ಜಮ್ಮು & ಕಾಶ್ಮೀರ ಸಮಸ್ಯೆ, ಭಾರತ ಮತ್ತು ಪಾಕ್‌ ನಡುವಿನ ದ್ವಿಪಕ್ಷೀಯ ಸಮಸ್ಯೆ. ಈ ವಿಚಾರವಾಗಿ ಥರ್ಡ್‌ ಪಾರ್ಟಿ ಅಥ್ವಾ ಬೇರೆ ಯಾವೊಂದು ದೇಶ ಮಧ್ಯಸ್ಥಿಕೆ ವಹಿಸೋ ಪ್ರಶ್ನೆನೇ ಬರಲ್ಲ ಅನ್ನೋದು ಭಾರತದ ವಾದವಾಗಿತ್ತು. ಇದನ್ನೇ ಈಗ ಸೌದಿ ಅರೇಬಿಯಾ ಕೂಡ ಪುನರುಚ್ಚಾರ ಮಾಡಿದೆ. ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌ ಅವ್ರ ನಡುವೆ ಮಹತ್ವದ ಮೀಟಿಂಗ್‌ ನಡೆದಿತ್ತು. ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆದ ಈ ಮೀಟಿಂಗ್‌ ವೇಳೆ, ಪಾಕ್‌ ಮತ್ತು ಭಾರತದ ನಡುವಿನ ಸಂಘರ್ಷಕ್ಕೆ ಪ್ರಮುಖ ಸಮಸ್ಯೆಯಾಗಿ ನಿಂತಿರೋ ಜಮ್ಮು & ಕಾಶ್ಮೀರದ ಕುರಿತು ಡಿಸ್‌ಕಸ್‌ ಮಾಡಲಾಗಿತ್ತು. ಈ ಸಮಸ್ಯೆ ಬಗೆಹರಿಸಲು ಎರಡು ದೇಶಗಳು ಕೂತು ಮಾತುಕತೆ ನಡೆಸೋ ಅಗತ್ಯವಿದೆ ಅಂತ ಎರಡೂ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಸೌದಿ ಪಾಕಿಸ್ತಾನಕ್ಕೆ ಭಾರತದ ಭಾಷೆಯಲ್ಲೇ ಬುದ್ದಿವಾದ ಹೇಳಿದೆ. ಅಂದ್ಹಾಗೆ 2019ರಲ್ಲಿ ಆರ್ಟಿಕಲ್‌ 370 ರದ್ದು ಮಾಡಿದಾಗ ಇದೇ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಅಮೆರಿಕ ಸಹಾಯ ಕೇಳಿತ್ತು. ಅಂದಿನ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್‌ ಟ್ರಂಪ್‌ ಅವ್ರಿಗೆ ಮಧ್ಯಸ್ಥಿಕೆ ವಹಿಸಲು ಇಮ್ರಾನ್‌ ಖಾನ್ ಆಫರ್‌ ಮಾಡಿದ್ರು. ಆದ್ರೆ ಭಾರತ ಮಾತ್ರ ʻಈ ಸಮಸ್ಯೆ ಬಗ್ಗೆ ಮಾತುಕತೆ ನಡೀಬೇಕಾದ್ರೆ…ಅದು ಪಾಕಿಸ್ತಾನ ಮತ್ತು ಭಾರತ ನಡುವೆ ಮಾತ್ರ ನಡೀಬೇಕು. ಬೇರೆ ಯಾರು ಮಧ್ಯಸ್ಥಿಕೆ ವಹಿಸೋ ಅಗತ್ಯವಿಲ್ಲʼ ಅಂತ ಹೇಳಿತ್ತು. ಈಗ ಅದನ್ನೇ ಸೌದಿ ಕೂಡ ಹೇಳಿದೆ.

ಸೌದಿಯ ಈ ಹೇಳಿಕೆಗೆ ಈಗ ಹಲವು ಬಗೆಯ ವಿಶ್ಲೇಷಣೆ ಮಾಡಲಾಗ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸೌದಿ ಹಾಗೂ ಪಾಕಿಸ್ತಾನ ಸಂಬಂಧ ಸರಿ ಬರ್ತಿಲ್ಲ. ಹಾಗೇ ಭಾರತ ಹಾಗೂ ಅರಬ್‌ ದೇಶಗಳ ಸಂಬಂಧ ಚೆನ್ನಾಗಿ ಆಗ್ತಿವೆ. ಭಾರತದ ಗಲ್ಫ್‌ ನೀತಿಯಲ್ಲಿ ಪಾಕಿಸ್ತಾನವನ್ನ ಐಸೋಲೇಟ್‌ ಮಾಡೋದು ಕೂಡ ಒಂದು. ಮೋದಿ ಸರ್ಕಾರ ಬಂದಾಗಿನಿಂದ ಗಲ್ಫ್‌ ದೇಶಗಳ ಜೊತೆಗೆ ವ್ಯಾಪಾರ ಮತ್ತು ಸೇನಾ ಸಂಬಂಧವನ್ನ ಹೆಚ್ಚು ಮಾಡ್ಕೊತಿದ್ದಾರೆ. ಹೀಗಾಗಿ ಜಮ್ಮು & ಕಾಶ್ಮೀರ ವಿಚಾರವಾಗಿ ಸೌದಿ ಈ ಮುಂಚಿಗಿಂತ ಹೆಚ್ಚು ಬ್ಯಾಲೆನ್ಸ್ಡ್‌ ಆಗಿ ಇರೋಕೆ ಟ್ರೈ ಮಾಡ್ತಿದೆ. ಆದರೆ 2019ರಲ್ಲಿ ಆರ್ಟಿಕಲ್‌ 370 ರದ್ದತಿ ಬಗ್ಗೆ ಸೌದಿ ಅರೇಬಿಯಾ ಕಳವಳ ವ್ಯಕ್ತಪಡಿಸಿತ್ತು ನಿಜ. ಆದ್ರೆ ಭಾರತದ ಈ ಕ್ರಮದ ಬಗ್ಗೆ ಯಾವ್ದೇ ರೀತಿ ಓಪನ್‌ ಆಗಿ ಖಂಡನೆ ವ್ಯಕ್ತಪಡಿಸಿಲ್ಲ. ಬದಲಿಗೆ ಇದು ಭಾರತದ ಆಂತರಿಕ ವಿಚಾರ ಅಂತ ಸೇಫ್‌ ಆಗಿ ಹೇಳಿಕೆ ನೀಡಿತ್ತು.ಆದ್ರೆ ಈಗ ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗವಾಗಿದೆ. ಯಾವಾಗಲೂ ಕಾಶ್ಮೀರ ಸಮಸ್ಯೆ ಹಿಡ್ಕೊಂಡು ಬಂದು ಭಾರತದ ವಿರುದ್ದ ಮಾತಾಡ್ತಿದ್ದ ಪಾಕಿಸ್ತಾನಕ್ಕೆ ಅವರ ಮಾಜಿ ಅಣ್ಣನೇ ಶಾಕ್‌ ಕೊಟ್ಟಿದಾನೆ. ಹಾಗ್‌ ನೋಡಿದ್ರೆ ಈ ಮುಂಚೆ ಕೂಡ ಸೌದಿ, ಕಾಶ್ಮೀರ ಸಮಸ್ಯೆಯನ್ನ ಬೇಗ ಬಗೆಹರಿಸಿಕೊಂಡು ಭಾರತದೊಂದಿಗೆ ಸಂಬಂಧ ಚೆನ್ನಾಗಿ ಇಟ್ಕೊಳ್ಳಿ ಅಂತೇಳಿತ್ತು.

-masthmagaa.com

Contact Us for Advertisement

Leave a Reply