ಭಾರತದ ರೂಪಾಂತರಿ ಕೊರೋನಾ ಬಗ್ಗೆ ಫೆಬ್ರವರಿಯಲ್ಲೇ ಮಾಹಿತಿ!?

masthmagaa.com:

ದೇಶದಲ್ಲಿ ರೂಪಾಂತರಿತ ಕೊರೋನಾ ಹಾವಳಿ ಬಗ್ಗೆ ತಜ್ಞರು ಕೇಂದ್ರ ಸರ್ಕಾರಕ್ಕೆ ಮೊದಲೇ ಎಚ್ಚರಿಸಿದ್ದರು.  ಅನ್ನೋ ವಿಚಾರ ಈಗ ಗೊತ್ತಾಗಿದೆ. ಕೇಂದ್ರ ಸರ್ಕಾರವೇ ರಚಿಸಿರೋ ವೈಜ್ಞಾನಿಕ ತಜ್ಞರ ಸಲಹಾ ಸಮಿತಿ ಮಾರ್ಚ್ ಆರಂಭದಲ್ಲೇ ಎಚ್ಚರಿಕೆ ನೀಡಿತ್ತು ಅಂತ ಅದರ ತಜ್ಞರೇ ಬಹಿರಂಗಪಡಿಸಿದ್ಧಾರೆ. ರಾಯ್ಟರ್ಸ್​​​​ ಪತ್ರಿಕೆಗೆ ಪ್ರತಿಕ್ರಿಯಿಸಿರುವ INSACOG ಅಂದ್ರೆ Indian SARS-CoV-2 Genomics Consortium ಸದಸ್ಯ ಅಜಯ್ ಪರಿದಾ, ನಾವು ಭಾರತದ ರೂಪಾಂತರಿ ತಳಿ ಬಿ.1.617 ಕೊರೋನಾ ತಳಿ ಮತ್ತದರ ಮ್ಯೂಟೇಷನ್​​​ಗಳನ್ನು ಫೆಬ್ರವರಿ ಆರಂಭದಲ್ಲೇ ಪತ್ತೆ ಹಚ್ಚಿದ್ವಿ. ನಾವು ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರೋ ಎನ್​ಸಿಡಿಸಿ ಅಂದ್ರೆ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​​ಗೆ ಮಾರ್ಚ್​ 10ಕ್ಕೂ ಮೊದಲೇ ಈ ರೂಪಾಂತರಿ ತಳಿ ಬಗ್ಗೆ ಮಾಹಿತಿ ನೀಡಿ, ದೇಶದಲ್ಲಿ ತುಂಬಾ ವೇಗವಾಗಿ ಸೋಂಕು ಹರಡೋ ಬಗ್ಗೆ ಎಚ್ಚರಿಸಿದ್ವಿ ಅಂತ ಹೇಳಿದ್ದಾರೆ. ಈ ಸಂಬಂಧ INSACOG ಆರೋಗ್ಯ ಸಚಿವಾಲಯಕ್ಕೆ ನೀಡಲು ಒಂದು ಮಾಧ್ಯಮ ಪ್ರಕಟಣೆಯನ್ನು ಕೂಡ ಸಿದ್ಧಪಡಿಸಿತ್ತು. ಅದರಲ್ಲಿ ಹೊಸ ರೂಪಾಂತರಿ ವೈರಸ್ ಬಿ.1.617 ಮತ್ತದರ E484Q and L452R ಮ್ಯುಟೇಷನ್​​ಗಳ ಬಗ್ಗೆ ಕಂಪ್ಲೀಟ್ ಮಾಹಿತಿ ನೀಡಲಾಗಿತ್ತು. ಆದ್ರೆ ಈ ಬಗ್ಗೆ ಅಧಿಕಾರಿಗಳು ಮತ್ತು ಆರೋಗ್ಯ ಸಚಿವಾಲಯ ನೀತಿ ರೂಪಿಸುವಾಗ ಸಾಕ್ಷ್ಯಗಳ ಬಗ್ಗೆ ಗಮನ ಕೊಡಲಿಲ್ಲ. ಸಾಕ್ಷ್ಯಗಳ ಆಧಾರದ ಮೇಲೆ ಕೊರೋನಾ ನೀತಿಗಳನ್ನು ರೂಪಿಸಬೇಕಿತ್ತು. ವಿಜ್ಞಾನಿಗಳಾಗಿ ಸಾಕ್ಷ್ಯಗಳನ್ನು ಒದಗಿಸೋದು ನಮ್ಮ ಕೆಲಸ.. ನೀತಿಗಳನ್ನು ರೂಪಿಸೋದು ಸರ್ಕಾರದ ಕೆಲಸ ಅಂತ INSACOG ಮುಖ್ಯಸ್ಥ ಶಾಹಿದ್ ಜಮೀಲ್ ಹೇಳಿದ್ದಾರೆ. ಅಂದಹಾಗೆ ಈ ವರದಿಯನ್ನು ನೀಡಿರೋದು ಯಾವುದೋ ಕೆಳಹಂತದ ಅಧಿಕಾರಿಗೆ ಅಲ್ಲ. ಬದಲಾಗಿ ಹಿರಿಯ ಅಧಿಕಾರಿ ಮತ್ತು ಪ್ರಧಾನಿ ಮೋದಿಗೆ ನೇರವಾಗಿ ರಿಪೋರ್ಟ್​ ಮಾಡುವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಅವರಿಗೆ ಈ ವರದಿ ಸಲ್ಲಿಸಲಾಗಿತ್ತು. ಆದ್ರೆ ಇದು ಪ್ರಧಾನಿ ಮೋದಿ ಅಥವಾ ಪ್ರಧಾನಮಂತ್ರಿ ಕಾರ್ಯಾಲಯದವರೆಗೆ ಹೋಗಿದ್ಯೋ ಇಲ್ವೋ ಗೊತ್ತಿಲ್ಲ. ಒಟ್ನಲ್ಲಿ ಈ ಎಚ್ಚರಿಕೆಯ ಬಳಿಕೂ ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ರ್ಯಾಲಿಗಳಲ್ಲಿ ಲಕ್ಷಾಂತರ ಜನ ಮಾಸ್ಕ್ ಹಾಕದೇ ಭಾಗಿಯಾದ್ರು. ರೈತರು ಕೃಷಿ ನೀತಿಗಳನ್ನು ವಿರೋಧಿಸಿ ತಿಂಗಳುಗಟ್ಲೆ ದೆಹಲಿಯಲ್ಲಿ ಗುಂಪುಗೂಡಿ ಪ್ರತಿಭಟನೆ ನಡೆಸಿದ್ರು. ಆಮೇಲೆ ಏಪ್ರಿಲ್ ಆರಂಭದಿಂದ ನಿರ್ಬಂಧ ವಿಧಿಸೋಕೆ ಶುರು ಮಾಡಲಾಯ್ತು.. ಇವೆಲ್ಲದ್ರ ಪರಿಣಾಮವೇ ಇಂದು ಭಾರತ ಕೊರೋನಾದ ಎಪಿಸೆಂಟರ್ ಆಗಿ ಬದಲಾಗಿದೆ.

-masthmagaa.com

Contact Us for Advertisement

Leave a Reply