ಗಂಡನಿಂದಲೇ ಹೆಂಡತಿ ಮೇಲೆ ಅತ್ಯಾಚಾರ ನಡೆದರೆ!?

masthmagaa.com:

ತನ್ನ ಪತಿಯ ವಿರುದ್ಧವೇ ಅತ್ಯಾಚಾರದ ಆರೋಪ ಮಾಡಿದ ಪತ್ನಿಗೆ ಛತ್ತೀಸ್​​ಗಢ ಹೈಕೋರ್ಟ್​​ನಲ್ಲಿ ಹಿನ್ನಡೆಯಾಗಿದೆ. ಅಧಿಕೃತವಾಗಿ ಮದುವೆಯಾದ ಪತಿ ತನ್ನ ಪತ್ನಿ ಜೊತೆ ಹೊಂದುವ ಬಲವಂತದ ಲೈಂಗಿಕ ಸಂಪರ್ಕವನ್ನ ಅತ್ಯಾಚಾರ ಅಂತ ಪರಿಗಣಿಸಲು ಸಾಧ್ಯವಿಲ್ಲ ಅಂತ ಕೋರ್ಟ್​ ತೀರ್ಪು ನೀಡಿದೆ. ಪತ್ನಿಗೆ ಇಷ್ಟ ಇಲ್ಲದಿದ್ದಾಗ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದುವುದು ನೈತಿಕವಾಗಿ ಸರಿಯಿಲ್ಲದೇ ಇರಬಹುದು. ಆದ್ರೆ ಅದನ್ನ ಅತ್ಯಾಚಾರ ಅಂತ ಹೇಳಲು ಬರುವುದಿಲ್ಲ. ಕಾನೂನುಬದ್ಧ ದಾಂಪತ್ಯದಲ್ಲಿ ಅತ್ಯಾಚಾರ ಅನ್ನೋ ಪದಕ್ಕೆ ಅವಕಾಶ ಇಲ್ಲ ಅಂತ ಛತ್ತೀಸ್​​ಗಢ ಹೈಕೋರ್ಟ್​ ಹೇಳಿದೆ. ಅಂದ್ಹಾಗೆ ಈ ಜೋಡಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದ್ರೆ ಮಹಿಳೆ ತನ್ನ ಅರ್ಜಿಯಲ್ಲಿ, ಗಂಡ ವರದಕ್ಷಿಣೆ ಕೇಳ್ತಿದ್ದಾನೆ, ಹೊಡೀತಿದ್ದಾನೆ, ಅತ್ಯಾಚಾರ ಎಸಗಿದ್ದಾನೆ ಅಂತೆಲ್ಲಾ ಆರೋಪ ಮಾಡಿದ್ದಳು.
ಅಂದಹಾಗೆ ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 375 ಪ್ರಕಾರ ಬಲವಂತದ ದೈಹಿಕ ಸಂಪರ್ಕ ಕೇವಲ ಹೆಂಡತಿ 18 ವರ್ಷಕ್ಕಿಂತ ಕೆಳಗಿನವಳಾದ್ರೆ ಮಾತ್ರ ಕ್ರಿಮಿನಲ್ ಅಪರಾಧ. ಹೀಗಾಗಿ ಮದುವೆ ನಂತರದ ಒತ್ತಾಯದ ದೈಹಿಕ ಸಂಬಂಧ ಭಾರತದ ಕಾನೂನಿನ ಪ್ರಕಾರ ಅತ್ಯಾಚಾರ ಅಂತ ಕರೆಸಿಕೊಳ್ಳೋದಿಲ್ಲ. ಆದ್ರೆ ಕೆಲ ಮದುವೆಗಳಲ್ಲಿ ಗಂಡ ಹೆಂಡತಿ ನಡುವೆ ಸಂಸಾರ ಸರಿ ಇರೋದಿಲ್ಲ. ಅಂತಾ ಸಂದರ್ಭದಲ್ಲಿ ಪತಿ ಬರೀ ದೈಹಿಕ ಸಂಪರ್ಕಕ್ಕಾಗಿ ಮಾತ್ರ ಪತ್ನಿ ಬಳಿ ಬಂದು ಹಿಂಸಿಸಿದರೆ,ಆಗ ಪತ್ನಿ 2005ರ ಕೌಟುಂಬಿಕೆ ಹಿಂಸೆ ತಡೆ ಕಾಯ್ದೆ ಪ್ರಕಾರ ರಕ್ಷಣ ಕೋರಬಹುದು ಅಂತ ತಜ್ಞರು ಹೇಳ್ತಾರೆ. ಅಂದಹಾಗೆ ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿ ಜಗತ್ತಿನ 32 ದೇಶಗಳಲ್ಲಿ ಮದುವೆ ನಂತರದ ಒತ್ತಾಯದ ದೈಹಿಕ ಸಂಪರ್ಕ ಅತ್ಯಾಚಾರ ಅಂತ ಗುರುತಿಸಲ್ಪಟ್ಟಿಲ್ಲ.

-masthmagaa.com

Contact Us for Advertisement

Leave a Reply