ಯಾಸಿನ್ ಮಲ್ಲಿಕ್‌ಗೆ ಜೀವಾವಧಿ ಶಿಕ್ಷೆ! ರಿಲೀಸ್‌ ಮಾಡಿಸುವಂತೆ ವಿಶ್ವಸಂಸ್ಥೆಗೆ ಪಾಕ್‌ ಆಗ್ರಹ!

masthmagaa.com:

ಕಾನೂನು ಬಾಹಿರ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡೋದು ಹಾಗೂ 2017ರಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತಿದ್ದ ಆರೋಪದಲ್ಲಿ ಕಾಶ್ಮೀರದ ಪ್ರತ್ಯೇಕತಾ ಹೋರಾಟಗಾರ ಯಾಸಿನ್‌ ಮಲ್ಲಿಕ್‌ಗೆ ದೆಹಲಿಯ NIA ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 10ಲಕ್ಷ ದಂಡ ಹಾಕಿದೆ. UAPA ಅಂದ್ರೆ UNLAWFUL ACTIVITIES (PREVENTION) ACT, 1967ರ ಅಡಿಯಲ್ಲಿ ಕೇಸ್‌ ದಾಖಲಾಗಿತ್ತು.ಇಂತಹ ಬರೋಬ್ಬರಿ 7 ಕೇಸ್‌ಗಳಲ್ಲಿ ತಪ್ಪು ಮಾಡಿರೋದು ಸಾಬೀತಾಗಿತ್ತು.ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಪರಾಧ ಮಾಡಿರೋ ಬಗ್ಗೆಸ್ವತಃ ಯಾಸಿನ್‌ ಕೂಡ ತಪ್ಪೊಪ್ಪಿಕೊಂಡಿದ್ದ. ಬಳಿಕ ಯಾಸಿನ್‌ಗೆ ಗಲ್ಲು ಶಿಕ್ಷೆ ನೀಡೋದಕ್ಕೆ NIA ತಂಡ ಕೋರ್ಟ್‌ಗೆ ಮನವಿ ಮಾಡಿತ್ತು. ಆದ್ರೆ ಕೋರ್ಟ್‌ ಈಗ ಜೀವನಪರ್ಯಂತ ಸೆರೆವಾಸಕ್ಕೆ ತಳ್ಳಿದೆ. ಇನ್ನು ತೀರ್ಪು ನೀಡೋದಕ್ಕೂ ಮುನ್ನ ಯಾಸಿನ್‌ಗೆ ಭಾರಿ ಭದ್ರತೆ ನೀಡಲಾಗಿತ್ತು. ದೆಹಲಿಯ ಕೋರ್ಟ್‌ ಬಳಿ ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳ ಸೇರಿದಂತೆ ಇಡೀ ಪೊಲೀಸ್‌ ದಂಡೇ ಬೀಡು ಬಿಟ್ಟಿತ್ತು. ಕಾಶ್ಮೀರ ರಾಜಧಾನಿ ಶ್ರೀನಗರದಲ್ಲೂ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್‌ ಘೋಷಿಸಲಾಗಿತ್ತು. ಆದರೂ ಹಲವು ಕಡೆ ಉದ್ರಿಕ್ತ ಗುಂಪುಗಳು ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ನಡೆಸಿದ್ವು. ಇದಕ್ಕೆ ಪ್ರತಿಯಾಗಿ ಸೇನಾ ಪಡೆಗಳು ಸಹ ಅಶ್ರುವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಪ್ರಯತ್ನಿಸಿವೆ. ಕಾಶ್ಮೀರದ ಕಿಡಿಗೇಡಿಗೆ ಶಿಕ್ಷೆ ಪ್ರಕಟವಾಗ್ತಿದ್ರೆ ಅತ್ತ ಪಾಕಿಸ್ತಾನದಲ್ಲಿ ತಮ್ಮ ಮನೆಮಗನನ್ನೇ ಜೈಲಿಗಟ್ಟಿದ ಸಂಕಟ ಬಂದಿದೆ. ನಿನ್ನೆಯಿಂದ ಕೂಡ ಟ್ವೀಟ್‌ ಮೇಲೆ ಟ್ವೀಟ್‌ ಮಾಡಿ ಭಾರತದ ವಿರುದ್ದ ಕೆಂಡ ಉಗುಳ್ತಿರೋ ಪಾಕಿಗಳು ಯಾಸಿನ್‌ನ್ನ ರಿಲೀಸ್‌ ಮಾಡುವಂತೆ ಆಗ್ರಹ ಮಾಡ್ತಿದ್ದಾರೆ. ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಾಲ್ ಬುಟ್ಟೋ ಜರ್ಧಾರಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಮುಖ್ಯಸ್ಥೆ ಮಿಚೆಲ್‌ ಬ್ಯಾಚ್ಲೆಟ್‌ಗೆ ಮನವಿ ಮಾಡಿ, ಯಾಸಿನ್ ಬಿಡುಗಡೆಗೊಳಿಸುವಂತೆ ಭಾರತಕ್ಕೆ ಒತ್ತಡ ಹೇರ್ಬೇಕು ಅಂತ ಆಗ್ರಹಿಸಿದ್ದಾರೆ. ಅಲ್ದೇ ಭಾರತ ಸುಳ್ಳು ಹಾಗೂ ಕಪೋಲಕಲ್ಪಿತ ಕಥೆಗಳನ್ನ ಸೃಷ್ಠಿಸಿ ಕಾಶ್ಮೀರ ನಾಯಕರಿಗೆ ಕಿರುಕುಳ ನೀಡ್ತಾಯಿದೆ. ಅವರನ್ನ ದಮನಮಾಡ್ತಿದೆ ಅಂತ ಆರೋಪಿಸಿದ್ದಾರೆ. ಇತ್ತ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದ್ ಟ್ವೀಟ್‌ ಮಾಡಿ ಭಾರತ, ಕಾಶ್ಮೀರದ ದನಿಗಳನ್ನ ಅಡಗಿಸೋ ಕೆಲಸವನ್ನ ಮುಂದುವರೆಸಿದೆ. ಅವರ ಮೇಲೆ ಇಲ್ಲಸಲ್ಲದ ಕೇಸ್‌ಗಳನ್ನ ಹಾಕ್ತಿದೆ. ಆದ್ರೆ ಇದ್ರಿಂದ ಕಾಶ್ಮೀರದಲ್ಲಿ ನಡೀತಿರೋ ಸ್ವಾತಂತ್ರ್ಯ ಹೋರಾಟವನ್ನ ನಿಲ್ಲಿಸೋಕೆ ಆಗಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply