ರಾಜ್ಯದ ನೂತನ ಸಿಎಂ ಆಗಿ ಸಿದ್ಧರಾಮಯ್ಯ ಆಯ್ಕೆ! ಡಿ.ಕೆ ಶಿವಕುಮಾರ್‌ಗೆ ಡಿಸಿಎಂ ಪಟ್ಟ!

masthmagaa.com:

ರಾಜ್ಯದಲ್ಲಿ ಪೂರ್ಣ ಬಹುಮತ ಪಡೆದ ಕಾಂಗ್ರೆಸ್‌ನಲ್ಲಿ ಸಿಎಂ ಗಾದಿಗಾಗಿ ನಡೆದ ಹಗ್ಗಜಗ್ಗಾಟದ ಬಳಿಕ ಕರ್ನಾಟಕದ ಮುಂದಿನ ಸಿಎಂ ಯಾರು ಅನ್ನೋದು ಅಧಿಕೃತವಾಗಿ ಘೋಷಣೆ ಆಗಿದೆ. ರಾಜ್ಯದ 24ನೇ ಸಿಎಂ ಆಗಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಚುನಾವಣಾ ಫಲಿತಾಂಶ ಬಂದಾಗಿನಿಂದ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದು ಕೂತಿದ್ದರು. ಕೊನೆಗೂ ನಾಲ್ಕು ದಿನಗಳ ಕಾಲ ಇಬ್ಬರ ಮನವೊಲಿಕೆಗೆ ಹೈಕಮಾಂಡ್‌ ನಡೆಸಿದ ಸರ್ಕಸ್‌ ಇಂದು ಯಶಸ್ವಿಯಾಗಿದ್ದು, ಸಿದ್ದರಾಮಯ್ಯನವರು ನೂತನ ಸಿಎಂ ಆದರೆ, ಡಿಕೆ ಶಿವಕುಮಾರ್‌ ಡಿಸಿಎಂ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಮೇ 20 ರಂದು ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ವೇಳೆ ಡಿಸಿಎಂ ಆಗಿ ಡಿಕೆ ಶಿವಕುಮಾರ್‌ ಮತ್ತು ಮಂತ್ರಿಮಂಡಲ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಸಮಾರಂಭ ಕಾರ್ಯಕ್ರಮಕ್ಕೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತ ಸಿಎಂ ಘೋಷಣೆ ಬಳಿಕ ಮೊದಲ ಬಾರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಅಂತ ಬರೆದುಕೊಂಡಿದ್ದಾರೆ. ಅಂದ್ಹಾಗೆ ಸಿಎಂ ಕುರಿತು ಇದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ಸಚಿವ ಸಂಪುಟ ರಚನೆಗೆ ಇನ್ನು ಏನೆಲ್ಲಾ ಸರ್ಕಸ್‌ ಮಾಡ್ತಾರೋ ಕಾದು ನೋಡ್ಬೇಕು. ಇನ್ನು ಅತ್ತ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಸಂಜೆ ಸರ್ಕಾರ ರಚನೆಗೆ ಹಕ್ಕು ಸಾಧಿಸಲಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಮಾಜಿ ಡಿಸಿಎಂ ಜಿ.ಪರಮೇಶ್ವರ್‌ ಅವ್ರು ಕಾಂಗ್ರೆಸ್‌ನ ಪ್ರತಿನಿಧಿಯಾಗಿ ರಾಜಭವನಕ್ಕೆ ತೆರಳಿ ಸರ್ಕಾರ ರಚನೆ ಬಗ್ಗೆ ಮನವಿ ಮಾಡಿದ್ರು.

-masthmagaa.com

Contact Us for Advertisement

Leave a Reply