ಸ್ಪೇಸ್ ಸ್ಟೇಷನ್ ಅಂದ್ರೆ ಏನು..? ಕಂಪ್ಲೀಟ್ ಮಾಹಿತಿ ಇಲ್ಲಿದೆ…

ಸ್ಪೇಸ್ ಸ್ಟೇಷನ್ ಅಥವಾ ಬಾಹ್ಯಾಕಾಶ ನಿಲ್ದಾಣ ಅಂದ್ರೆ ಏನು..? ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತುವಾದ ಸ್ಪೇಸ್ ಸ್ಟೇಷನ್ ಹೇಗಿದೆ ಗೊತ್ತಾ..? ಸುಮಾರು 450 ಟನ್ ತೂಕದ ವಸ್ತುವನ್ನ ಮನುಷ್ಯ ಅಂತರಿಕ್ಷದಲ್ಲಿ ಹಾರಿ ಬಿಟ್ಟಿದ್ದಾನೆ ಅಂದ್ರೆ ನೀವು ನಂಬ್ತೀರಾ..? ಈ ಕಲ್ಪನೆಯೇ ರೋಚಕವದ್ರೂ ಇದ್ರ ಬಗ್ಗೆ ಗೊತ್ತಿಲ್ಲದವರೇ ಹೆಚ್ಚಿದ್ದಾರೆ. ಹಾಗಾದ್ರೆ ಬನ್ನಿ ಇತಿಹಾಸದಲ್ಲೇ ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತುವಿನ ರೋಮಾಂಚನಕಾರಿ ಸ್ಟೋರಿಯನ್ನ ಹೇಳ್ತೀವಿ..ಓದುತ್ತಾ ಹೋಗಿ..

ಬಾಹ್ಯಾಕಾಶ ನಿಲ್ದಾಣ ಕಲ್ಪನೆ ಹುಟ್ಟಿದ್ದು ಹೇಗೆ..?
ವಿಜ್ಞಾನ ಬೆಳೀತಾ ಹೋದಂತೆ ಅಂತರಿಕ್ಷದಲ್ಲಿ ಮನುಷ್ಯನ ಕಾರುಬಾರು ಕೂಡ ಜೋರಾಗುತ್ತಾ ಬಂತು. ಬಾಹ್ಯಾಕಾಶದ ಆ ರಹಸ್ಯವನ್ನು ಅರಿಯಲು ಹೆಜ್ಜೆಯಿಟ್ಟ ಮಾನವ ಮೊದಲು ಅಂತರಿಕ್ಷಕ್ಕೆ ಹಾರಿ ಇನ್ನೂ ನೂರು ವರ್ಷ ಆಗದಿದ್ದರೂ ಸಾಧನೆ ಮಾತ್ರ ಅಪಾರ. ರಷ್ಯಾದವರು ಅಂತರಿಕ್ಷಕ್ಕೆ ಮೊದಲು ಹಾರಿ ರೆಕ್ಕೆಪುಕ್ಕ ಕಟ್ಟಿದರೆ, ಅಮೆರಿಕಾದವರು ರಷ್ಯಾ ಜೊತೆ ಪೈಪೋಟಿಗೆ ಇಳಿದು ಬಾಹ್ಯಾಕಾಶಕ್ಕೆ ದಾಪುಗಾಲಿಟ್ರು. ಇದಾದ ಬಳಿಕ ಬಾಹ್ಯಾಕಾಶಕ್ಕೆ ಜಿಗಿಯುವ ಯಾತ್ರಿಗಳಿಗೆ ಒಂದು ನಿಲ್ದಾಣ ಬೇಕು ಅನ್ನಿಸಿದಾಗ ಸ್ಪೇಸ್ ಸ್ಟೇಷನ್ ಅಥವಾ ಬಾಹ್ಯಾಕಾಶ ನಿಲ್ದಾಣದ ಕಲ್ಪನೆ ಹುಟ್ಟಿಕೊಂಡು ಸಾಕಾರವಾಯಿತು.

ಬಾಹ್ಯಾಕಾಶ ನಿಲ್ದಾಣ ಅಂದ್ರೆ ಏನು..?
ಗಗನಯಾನಿಗಳು ಬಾಹ್ಯಾಕಾಶದಲ್ಲಿ ದೀರ್ಘ ಸಮಯದವರೆಗೆ ಉಳಿದುಕೊಂಡು ಕೆಲಸ ಮಾಡಲು ಪ್ರಯೋಗಾಲಯ ಇರುವ, ಪರಿಭ್ರಮಿಸುವ ವೇದಿಕೆಯನ್ನ ಬಾಹ್ಯಾಕಾಶ ನಿಲ್ದಾಣ ಅಂತಾರೆ. ಸುಲಭವಾಗಿ ಹೇಳಬೇಕು ಅಂದ್ರೆ ಸಾಮಾನ್ಯ ಉಪಗ್ರಹಗಳಿಗೆ ಹೊಲಿಸಿದ್ರೆ ಇದು ಗಾತ್ರದಲ್ಲಿ ದೊಡ್ಡದಾದ ವಸ್ತು ಎಂದೇ ಹೇಳಬಹುದು. ಇದರಲ್ಲಿ ಗಗನಯಾತ್ರಿಗಳು ವಾಸ್ತವ್ಯ ಹೂಡಲು ಬೇಕಾಗುವ ಎಲ್ಲಾ ಸೌಲಭ್ಯಗಳು ಇರುತ್ತವೆ. ಇಂಥ ಬಾಹ್ಯಾಕಾಶ ನಿಲ್ದಾಣಕ್ಕೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನ ಕಾರ್ಗೊ ಬಾಹ್ಯಾಕಾಶ ನೌಕೆಯಲ್ಲಿ ಕಳುಹಿಸಲಾಗುತ್ತೆ.

ಬಾಹ್ಯಾಕಾಶ ನಿಲ್ದಾಣ ಹೇಗೆ ರೆಡಿ ಆಗುತ್ತೆ..?
ಬಾಹ್ಯಾಕಾಶ ನಿಲ್ದಾಣಗಳು ಒಂದೇ ಸಲ ಹುಟ್ಟಿಕೊಳ್ಳಲ್ಲ. ಅದಕ್ಕೆ ವಿಜ್ಞಾನಿಗಳ ಸತತ ಪ್ರಯತ್ನ ಬೇಕು. ಅಂದಹಾಗೆ ಭೂಮಿಯಿಂದ ಕಳುಹಿಸಲ್ಪಟ್ಟ ವಿವಿಧ ಭಾಗಗಳನ್ನ ಬಾಹ್ಯಾಕಾಶದಲ್ಲೆ ಜೋಡಿಸಿ ನಿಲ್ದಾಣವನ್ನ ರೆಡಿ ಮಾಡಲಾಗುತ್ತೆ.

1971ರಲ್ಲಿ ರಷ್ಯಾದಿಂದ ಮೊದಲ ನಿಲ್ದಾಣ
1971ರಲ್ಲಿ ಆರಂಭವಾದ ರಷ್ಯಾದ ಸಲ್ಯೂಟ್-1 ಜಗತ್ತಿನ ಪ್ರಥಮ ಬಾಹ್ಯಾಕಾಶ ನಿಲ್ದಾಣವಾಗಿದೆ. ಅಂದಿನಿಂದ ಅನೇಕ ಸಲ್ಯೂಟ್ ಬಾಹ್ಯಾಕಾಶ ನಿಲ್ದಾಣಗಳು ಆರಂಭವಾದವು. ರಷ್ಯಾದ ಮಿರ್ ಎಂಬ ಅತ್ಯಂತ ಅತ್ಯಾಧುನಿಕ ಬಾಹ್ಯಾಕಾಶ ನಿಲ್ದಾಣ 1986 ರಿಂದ 2001ರವರೆಗೆ ಕಾರ್ಯ ನಿರ್ವಹಿಸುತ್ತಿತ್ತು.

1973 ರಲ್ಲಿ ಅಮೆರಿಕದಿಂದಲೂ ಸ್ಟೇಷನ್
ರಷ್ಯಾವನ್ನ ನೋಡಿ ಉರಿದುಕೊಂಡ ಅಮೆರಿಕ 1973ರಲ್ಲಿ ಸ್ಕೈಲ್ಯಾಬ್ ಎಂಬ ಹೆಸರಿನ ತನ್ನ ಮೊದಲ ಬಾಹ್ಯಾಕಾಶ ನಿಲ್ದಾಣವನ್ನ ಆರಂಭಿಸಿತು. 1979ರಲ್ಲಿ ಅದು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸುವಾಗ ದಹನವಾಯಿತು. ಸದ್ಯಕ್ಕೆ ಭೂಮಿಯ ಕಕ್ಷೆಯಲ್ಲಿರುವ ಏಕೈಕ ಬಾಹ್ಯಾಕಾಶ ನಿಲ್ದಾಣವೆಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಅದನ್ನು ಇಂಗ್ಲಿಷ್ನಲ್ಲಿ ಇಂಟನ್ರ್ಯಾಷನಲ್ ಸ್ಪೇಸ್ ಸ್ಟೇಷನ್ ಅಂತ ಕರೆಯುತ್ತಾರೆ.

ಹೇಗಿದೆ ಗೊತ್ತಾ ಐಎಸ್‍ಎಸ್..?
1998 ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೆಲಸ ಆರಂಭವಾಯಿತು. ಅಂದ್ರೆ 1998 ರಂದು ಈ ಸ್ಪೇಸ್ ಸೆಂಟರ್ ನ ಮೊದಲ ಭಾಗ ಕಂಟ್ರೋಲ್ ಮಾಡ್ಯೂಲ್ ಹಾರಿದರೆ, ಮುಂದಿನ ಎರಡು ವರ್ಷಗಳಲ್ಲಿ ಬಾಹ್ಯಾಕಾಶಕ್ಕೆ ವಿವಿಧ ಭಾಗಗಳನ್ನ ಕಳುಹಿಸಿ ಜೋಡಿಸಲಾಯಿತು. 2000ರಲ್ಲಿ ಅಂತರಿಕ್ಷ ಯಾತ್ರಿಗಳ ತಂಡ ಈ ಸ್ಪೇಸ್ ಸ್ಟೇಷನ್ ತಲುಪುವಷ್ಟು ವಾಸ್ತವ್ಯಕ್ಕೆ ಯೋಗ್ಯವಾಯಿತು. ನಂತರ ನಾಸಾದ ಮುಂದಾಳತ್ವದಲ್ಲಿ ಅಮೆರಿಕ, ರಷ್ಯಾ, ಜಪಾನ್, ಕೆನಡಾ ಮುಂತಾದ 16 ದೇಶಗಳ ಅನೇಕ ಭಾಗಗಳನ್ನ ಸ್ಪೇಸ್ ಸ್ಟೇಷನ್‍ಗೆ ಜೋಡಿಸಿ 2011ರಲ್ಲಿ ಸಂಪೂರ್ಣ ನಿರ್ಮಾಣ ಮಾಡಲಾಯಿತು. ಈಗ ಭಾರತ ಕೂಡ ಇಂತಹದ್ದೇ ಒಂದು ಸ್ಪೇಸ್ ಸ್ಟೇಷನ್ ನಿರ್ಮಾಣದ ಕನಸು ಕಾಣುತ್ತಿದೆ. ಮುಂದಿನ ಏಳೆಂಟು ವರ್ಷಗಳಲ್ಲಿ ಇದನ್ನ ಪೂರ್ಣಗೊಳಿಸಬೇಕು ಅಂತ ಇಸ್ರೋ ಅಧ್ಯಕ್ಷ ಕೆ.ಶಿವನ್ ಯೋಜನೆ ರೂಪಿಸಿಕೊಂಡಿದ್ದಾರೆ.

ಇದಿಷ್ಟು ಬಾಹ್ಯಾಕಾಶ ನಿಲ್ದಾಣ ಅಂದ್ರೆ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಬಗ್ಗೆ ತಿಳಿಸಿಕೊಡುವ ಪ್ರಯತ್ನ. ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾದ್ರೆ ಎಲ್ಲರಿಗೂ ಶೇರ್ ಮಾಡಿ..

Contact Us for Advertisement

Leave a Reply