ಇಸ್ರೇಲ್-ಗಾಜಾ ಕದನ ವಿರಾಮಕ್ಕೆ ಬ್ರೇಕ್​​! ಮತ್ತೆ ದಾಳಿ ಶುರು

masthmagaa.com:

ಕಳೆದ ತಿಂಗಳಷ್ಟೇ ಇಸ್ರೇಲ್ ಮತ್ತು ಪ್ಯಾಲೆಸ್ತೇನ್​​ ನಡುವೆ ದೊಡ್ಡಮಟ್ಟದಲ್ಲಿ ಸಂಘರ್ಷ ನಡೆದಿತ್ತು. 11 ದಿನಗಳ ಬಳಿಕ ಮೇ 21ರಂದು ಕದನ ವಿರಾಮ ಘೋಷಣೆಯಾಗಿತ್ತು. ಆದ್ರೀಗ ಅದು ಪುನಃ ಉಲ್ಲಂಘನೆಯಾಗಿದೆ. ಇಸ್ರೇಲ್ ಇವತ್ತು ಬೆಳಗ್ಗೆ ಗಾಜಾ ಮೇಲೆ ಏರ್​ ಸ್ಟ್ರೈಕ್ ಮಾಡಿದೆ. ದಕ್ಷಿಣ ಇಸ್ರೇಲ್​​​​​ ಗಡಿಯೊಳಗೆ ಗಾಜಾ ಕಡೆಯಿಂದ ಸ್ಫೋಟಕಗಳನ್ನು ಹೊತ್ತ ಬಲೂನ್ ಬಂದಿದ್ದು, ಅದಕ್ಕೆ ಉತ್ತರ ಕೊಡೋಕೆ ರಾಕೆಟ್ ದಾಳಿ ಮಾಡಿದ್ದೀವಿ ಅಂತ ಇಸ್ರೇಲ್ ಸ್ಪಷ್ಟ ಪಡಿಸಿದೆ. ಗಾಜಾದ ಖಾನ್ ಯೂನೆಸ್​​ ಜಾಗ ಮತ್ತು ಹಮಾಸ್ ಪಡೆಯ ನೆಲೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದು, ಅಲ್ಲಿ ಭಯೋತ್ಪಾದಕ ಚಟುವಟಿಕೆ ನಡೀತಾ ಇತ್ತು ಅಂತ ಇಸ್ರೇಲ್ ಆರೋಪಿಸಿದೆ. ಅಷ್ಟೇ ಅಲ್ಲ.. ಇಸ್ರೇಲ್ ಸೇನೆ ಎಲ್ಲದಕ್ಕೂ ಸಿದ್ಧವಿದೆ. ಗಾಜಾ ಕಡೆಯಿಂದ ಯುದ್ಧ ಘೋಷಣೆಯಾದ್ರೂ ನಾವ್ ರೆಡಿ ಅಂತ ಹೇಳಿದೆ. ಅಂದಹಾಗೆ ಇತ್ತೀಚೆಗಷ್ಟೇ ಇಸ್ರೇಲ್​​ನಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದ್ದು, ನೆತಾನ್ಯಹು ಕೆಳಗಿಳಿದು ನೆಫ್ತಾಲಿ ಬೆನೆಟ್ ಹೊಸ ಪ್ರಧಾನಿಯಾಗಿದ್ದಾರೆ. ಇವ್ರು ನೆತಾನ್ಯಹುಗಿಂತ ಪಕ್ಕಾ ರೈಟಿಸ್ಟ್​​..ರಾಷ್ಟ್ರೀಯವಾದಿ ಅಂತ ನಾವು ಮೊನ್ನೆನೇ ಹೇಳಿದ್ವಿ.. ಮೈತ್ರಿ ಸರ್ಕಾರ ರಚನೆಯಾದ ಬೆನ್ನಲ್ಲೇ ನೆಫ್ತಾಲಿ ಬೆನೆಟ್​​ ಜೆರುಸಲೆಂ ಏಕೀಕರಣ ಅಂದ್ರೆ 1967ರಲ್ಲಿ ಜೋರ್ಡಾನ್​​ನಿಂದ ವಶಕ್ಕೆ ಪಡೆದ ಸ್ಮರಣಾರ್ಥ ಒಂದು ಮೆರವಣಿಗೆ ಆಯೋಜಿಸಿದ್ರು. ಇದ್ರಲ್ಲಿ ಸಾವಿರಾರು ಇಸ್ರೇಲಿಗರು ಭಾಗಿಯಾಗಿ, ಇಸ್ರೇಲ್ ಬಾವುಟ ಹಾರಿಸಿ, ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ರು. ಮೆರವಣಿಗೆ ವೇಳೆ ಪ್ಯಾಲೆಸ್ತೇನಿಯರನ್ನು ತೆರವುಗೊಳಿಸಲು ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ಬಳಸಲಾಗಿತ್ತು. ರಸ್ತೆಯುದ್ದಕ್ಕೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇದ್ರಲ್ಲಿ ಸುಮಾರು 33 ಮಂದಿ ಪ್ಯಾಲೆಸ್ತೇನಿಯರು ಗಾಯಗೊಂಡಿದ್ರು. ಇಬ್ಬರು ಪೊಲೀಸರಿಗೂ ಗಾಯಗಳಾಗಿದ್ವು. ಹೀಗಾಗಿ ಘಟನೆ ಸಂಬಂಧ 17 ಮಂದಿಯನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಈ ಮೆರವಣಿಗೆ ನಡೆಸೋದಕ್ಕೆ ಹಮಾಸ್ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕ ಮತ್ತು ವಿಶ್ವಸಂಸ್ಥೆ ಕೂಡ ಮೆರವಣಿಗೆಯಲ್ಲಿ ಸಂಯಮ ಕಾಪಾಡುವಂತೆ ಕರೆ ನೀಡಿದ್ವು. ಆದ್ರೂ ಕೂಡ ಭಾರಿ ಉದ್ರೇಕಕಾರಿ ರೀತಿಯಲ್ಲಿ ಈ ಮೆರವಣಿಗೆ ನಡೆಸಿದ್ದಾರೆ ಇಸ್ರೇಲಿಗರು.. ಇದ್ರ ಬೆನ್ನಲ್ಲೇ ದಕ್ಷಿಣ ಇಸ್ರೇಲ್ ಗಡಿಯಲ್ಲಿ ಗಾಜಾ ಕಡೆಯಿಂದ ಸುಮಾರು 20 ಸ್ಫೋಟಕ ಹೊತ್ತ ಬಲೂನ್​​ಗಳು ಇಸ್ರೇಲ್ ಗಡಿಯೊಳಗೆ ಹಾರಿ ಬಂದಿವೆ. ಅದಕ್ಕೆ ಇಸ್ರೇಲ್ ಕೂಡ ಈಗ ಪ್ರತಿಕ್ರಿಯೆ ನೀಡಿದೆ. ಇದು ಮತ್ತೆ ಯಾವ ಹಂತಕ್ಕೆ ಹೋಗುತ್ತೋ ಅನ್ನೋ ಆತಂಕ ಎದುರಾಗಿದೆ. ಕಳೆದ ತಿಂಗಳ ಸಂಘರ್ಷದಲ್ಲಿ 260 ಮಂದಿ ಪ್ಯಾಲೆಸ್ತೇನಿಯರು ಮತ್ತು 13 ಮಂದಿ ಇಸ್ರೇಲ್ ನಾಗರಿಕರು ಪ್ರಾಣ ಕಳೆದುಕೊಂಡಿದ್ರು. ಗಾಜಾದ ಸುಮಾರು 1000 ಅಪಾರ್ಟ್​ಮೆಂಟ್​​ಗಳು, ಕಚೇರಿಗಳು, ಅಂಗಡಿಗಳು ಕೂಡ ನಾಶವಾಗಿದ್ವು.

-masthmagaa.com

Contact Us for Advertisement

Leave a Reply