ಹಾಲಿ ‘ಮಿಸಸ್ ವರ್ಲ್ಡ್​’ ಸುಂದರಿಯನ್ನ ಅರೆಸ್ಟ್ ಮಾಡಿದ ಶ್ರೀಲಂಕಾ ಪೊಲೀಸರು

masthmagaa.com:

ಹಾಲಿ ‘ಮಿಸಸ್ ವರ್ಲ್ಡ್​’ (Mrs World) ಆಗಿರೋ ಕೆರೋಲಿನಾ ಜ್ಯೂರಿ ಅನ್ನೋರನ್ನ ಶ್ರೀಲಂಕಾದಲ್ಲಿ ಅರೆಸ್ಟ್ ಮಾಡಲಾಗಿದೆ. ಅಂದ್ಹಾಗೆ ಮೊನ್ನೆ ಭಾನುವಾರ ಶ್ರೀಲಂಕಾದಲ್ಲಿ ‘ಮಿಸಸ್ ಶ್ರೀಲಂಕಾ’ ಬ್ಯೂಟಿ ಸ್ಪರ್ಧೆ ನಡೆದಿತ್ತು. ಈ ವೇಳೆ ಪುಷ್ಪಿಕಾ ಡಿ ಸಿಲ್ವಾ ಅವರು ಈ ಸಲದ ‘ಮಿಸಸ್ ಶ್ರೀಲಂಕಾ’ ಅಂತ ಘೋಷಿಸಿ, ಕಿರೀಟವನ್ನ ತೊಡಿಸಲಾಗಿತ್ತು. ಬಳಿಕ ‘ಮಿಸಸ್ ಶ್ರೀಲಂಕಾ’ ಆಗೋರು ವಿಚ್ಛೇದನ ಪಡೆದಿರಬಾರ್ದು. ಆದ್ರೆ ಪುಷ್ಪಿಕಾ ಡಿ ಸಿಲ್ವಾ ವಿಚ್ಛೇದನ ಪಡೆದಿದ್ದಾರೆ ಅಂತ ಘೋಷಿಸಲಾಯ್ತು. ಕೆಲವೇ ಕ್ಷಣಗಳಲ್ಲಿ ಅವರಿಗೆ ತೊಡಿಸಿದ್ದ ಕಿರೀಟವನ್ನ ಎಳೆದು ತೆಗೆದ ಕೆರೋಲಿನಾ ಜ್ಯೂರಿ, ಅದನ್ನ ಮೊದಲ ರನ್ನರ್ ಅಪ್​ಗೆ ತೊಡಿಸಿದ್ರು.

ಆದ್ರೆ ಕಿರೀಟವನ್ನ ಕೀಳೋ ವೇಳೆ ತನ್ನ ತಲೆಗೆ ಗಂಭೀರ ಗಾಯವಾಗಿದೆ ಅಂತ ಪುಷ್ಪಿಕಾ ಆರೋಪಿಸಿದ್ರು. ಜೊತೆಗೆ ಕೆರೋಲಿನಾ ಜ್ಯೂರಿ ಬಹಿರಂಗವಾಗಿ ಕ್ಷಮೆ ಕೇಳಿದ್ರೆ ಬಿಟ್ಟುಬಿಡ್ತೀನಿ ಅಂತ ಪುಷ್ಪಿಕಾ ಹೇಳಿದ್ದರು. ಆದ್ರೆ ಕೆರೋಲಿನಾ ಸ್ವಾರಿ ಕೇಳಲಿಲ್ಲ. ಬೇರೇನೂ ದಾರಿ ಕಾಣದ ಪುಷ್ಪಿಕಾ ಪೊಲೀಸರಿಗೆ ದೂರು ಕೊಟ್ರು. ಈ ಹಿನ್ನೆಲೆ ಕೊಲೊಂಬೋ ಪೊಲೀಸರು ಹಾಲಿ ‘ಮಿಸಸ್ ವರ್ಲ್ಡ್​’ ಆಗಿರೋ ಕ್ಯಾರೋಲಿನಾ ಜ್ಯೂರಿ ಮತ್ತು ಇನ್ನೊಬ್ಬರನ್ನ ಅರೆಸ್ಟ್ ಮಾಡಿದ್ದಾರೆ. ಕ್ಯಾರೋಲಿನಾ ಜ್ಯೂರಿ 2019ರ ಮಿಸಸ್ ಶ್ರೀಲಂಕಾ ವಿಜೇತೆ ಕೂಡ ಆಗಿದ್ದರು. ಅವರಿಗೀಗ ‘ಮಿಸಸ್ ಅಂಡರ್ ವರ್ಲ್ಡ್’ ಅನ್ನೋ ಬಿರುದು ಕೊಡ್ಬೇಕು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗ್ತಿದೆ. ಇನ್ನೊಂದು ವಿಚಾರ ಅಂದ್ರೆ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಷ ಅವರ ಪತ್ನಿ ಶಿರಂತಿ ರಾಜಪಕ್ಷ ಕೂಡ ಭಾಗವಹಿಸಿದ್ರು. ಇದೆಲ್ಲಾ ಹೈಡ್ರಾಮಾ ಆಗುವಾಗ ಅವರು ಕಾರ್ಯಕ್ರಮದಿಂದ ಹೊರ ಹೋಗಿದ್ರು.

-masthmagaa.com:

Contact Us for Advertisement

Leave a Reply