ಬಿಜೆಪಿ ಗೆಲ್ಲುತ್ತೆ, ಆದ್ರೆ ಕಚ್ಚತೀವು ವಿಚಾರ ತೆಗೆಬಾರ್ದಿತ್ತು: ಲಂಕಾ

masthmagaa.com:

ಲೋಕಸಭೆ ಚುನಾವಣೆ ಹೊತ್ತಲ್ಲೆ ತೀವ್ರ ಚರ್ಚೆಯಲ್ಲಿರೊ ಕಚ್ಚತೀವು ದ್ವೀಪದ ವಿಚಾರವಾಗಿ ಶ್ರೀಲಂಕಾದ ಮಾಜಿ ರಾಯಭಾರಿ ಆಸ್ಟಿನ್‌ ಫರ್ನಾಂಡಿಸ್‌ ಪತ್ರಿಕ್ರಿಯೆ ನೀಡಿದ್ದಾರೆ. ಅವರ ಹುದ್ದೆಯಂತೆ ಬಹಳ ರಾಜತಾಂತ್ರಿಕವಾಗಿ ಈ ಬಗ್ಗೆ ಮಾತನಾಡಿದ್ದಾರೆ. ಸದ್ಯ ಚುನಾವಣೆಯಲ್ಲಿ ಮತ ಸೆಳೆಯಲು ಬಿಜೆಪಿ ಈ ವಿಚಾರವನ್ನ ಜನತೆ ಮುಂದೆ ಪ್ರಸ್ತಾಪಿಸುತ್ತಿರಬಹುದು. ಆದ್ರೆ ಚುನಾವಣೆ ಬಳಿಕ ಇದ್ರಿಂದ ಹಿಂದೆ ಸರಿಯಲು ಬಿಜೆಪಿಗೆ ಕಷ್ಟ ಆಗುತ್ತೆ. ಯಾಕಂದ್ರೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಆಗ ಈ ವಿಚಾರದ ಬಗ್ಗೆ ಬಿಜೆಪಿ ಸಮಸ್ಯೆ ಸುಳಿಯಲ್ಲಿ ಸಿಕ್ಕಾಕಿಕೊಳ್ಬೇಕಾಗುತ್ತೆ. ಈಗ ಒಂದು ವೇಳೆ ಪಾಕಿಸ್ತಾನ ಗೋವಾ ಬಳಿ ಇದೇ ರೀತಿ ಅತಿಕ್ರಮಣ ಮಾಡೋಕೆ ಮುಂದಾದ್ರೆ, ಭಾರತ ತಡ್ಕೊಳುತ್ತಾ? ಬಾಂಗ್ಲಾದೇಶ ಬಂಗಾಳ ಕೊಲ್ಲಿಯಲ್ಲಿ ಇಂಥದ್ದೇ ಕೆಲಸ ಮಾಡಿದ್ರೆ ಸಹಿಸಿಕೊಳ್ಳುತ್ತಾ? ಆಗ ಭಾರತದ ರಿಯಾಕ್ಷನ್‌ ಹೇಗಿರುತ್ತೆ? ಬಿಜೆಪಿಗೆ ತಮಿಳುನಾಡಿನಲ್ಲಿ ಗಟ್ಟಿಯಾದ ಹಿಡಿತವಿಲ್ಲ. ಆದ್ರಿಂದ ಈ ಮತ ಸೆಳೆಯೋ ಕಿಡಿಯನ್ನ ಹೊತ್ತಿಸಿದೆ. ಈ ವಿಚಾರವಾಗಿ ಶ್ರೀಲಂಕಾ ಸರ್ಕಾರ ಮಣಿಯದಿದ್ರೆ, ಆಗ ಬಿಜೆಪಿಗೆ ತಮಿಳುನಾಡಿನ ಮತಗಳ ಸಂಖ್ಯೆ ಇನ್ನೂ ಕಡಿಮೆಯಾಗುತ್ತೆ. ಭಾರತ ಸರ್ಕಾರ ಶ್ರೀಲಂಕಾ ಜಲಗಡಿಯನ್ನ ದಾಟಿದ್ರೆ, ಅದು ಲಂಕಾದ ಸಾರ್ವಭೌಮತ್ವಕ್ಕೆ ಧಕ್ಕೆ ತರೋ ಕೆಲ್ಸ. ಈ ವಿಚಾರವನ್ನ ಭಾರತದ ಪೀಸ್‌ ಕೀಪಿಂಗ್‌ ಫೋರ್ಸ್‌ ಲಂಕಾಗೆ ಬಂದಿದ್ದಾಗ್ಲೆ ಆಗಿನ ಲಂಕಾ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಹೇಳಿದ್ರು. ಇದನ್ನ ಮರೀಬಾರ್ದು ಅಂತ ಆಸ್ಟಿನ್‌ ಫರ್ನಾಂಡೊ ಹೇಳಿದ್ದಾರೆ. ಅಲ್ಲದೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್ ಮತದಾರರ ತೃಪ್ತಿಗಾಗಿ ಕಚ್ಚತೀವುನಲ್ಲಿ ಮೀನುಗಾರಿಕಾ ಹಕ್ಕು ಪಡೆಯೋಣ ಅಂತೇಳ್ಬೋದು. ಅದನ್ನ ಪರಿಣಾಮಕಾರಿಯಾಗಿ ಜಾರಿಗೆ ತರೋದು ಬಿಡೋದು ಬೇರೆ ಪ್ರಶ್ನೆ. ಆದ್ರೆ ಇದ್ರಿಂದ ಸಮಸ್ಯೆಗಳು ಉದ್ಭವ ಆದ್ರೆ ಯಾರು ಸರಿ ಪಡಿಸ್ತಾರೆ ಅಂತ ಫರ್ನಾಂಡಿಸ್ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಭಾರತ ಕಷ್ಟದ ಟೈಮಲ್ಲಿ ಲಂಕಾಗೆ $4 ಬಿಲಿಯನ್‌ ನೆರವು ನೀಡಿದೆ, IMFನಲ್ಲಿ ನಮಗೆ ಸಪೋರ್ಟ್‌ ನೀಡಿದೆ. ಈಗ ಲಂಕಾ ಸರ್ಕಾರ ಇದನ್ನ ನೆನೆಸ್ಕೊಳ್ತಿದೆ. ಅದೇ ಕಾರಣಕ್ಕೆ ಸದ್ಯ ರಾಜತಾಂತ್ರಿಕವಾಗಿ ಮೌನವಹಿಸಿದೆ. ಸದ್ಯ ಲಂಕಾದ ಕಷ್ಟದ ಪರಿಸ್ಥಿತಿ ಹಾಗೂ ಚುನಾವಣೆ ವಾತಾವರಣ ಇರೋದ್ರಿಂದ, ಈ ವಿಚಾರ ಮುನ್ನಲೆಗೆ ಬರ್ದಿದ್ರೆ ಚೆನ್ನಾಗಿರ್ತಿತ್ತು. ಆದ್ರೆ ಇದು ಬಿಜೆಪಿಗೆ ಬಹಳ ಅನುಕೂಲಕರ ಸಮಯ ಅನ್ನೋದು ನಮಗೆ ಅರ್ಥ ಆಗುತ್ತೆ ಅಂದಿದ್ದಾರೆ. ಅಲ್ಲದೆ ಭಾರತ ಲಂಕಾದಲ್ಲಿ ಹೂಡಿಕೆ ಮಾಡೋದನ್ನ ಲಂಕಾ ವಿಪಕ್ಷಗಳು ವಿರೋಧಿಸುತ್ವೆ. ಇದೇ ಟೈಮಲ್ಲಿ ಕಚ್ಚತೀವು ವಿಚಾರ ಲಂಕಾದಲ್ಲಿ ಮತ್ತೆ ರಾಜಕೀಯ ವಾತಾವರಣ ಹಾಳಾಗೋದಕ್ಕೆ ಕಾರಣ ಆಗ್ಬೋದು. 1970ರಲ್ಲಿ ಉಭಯ ದೇಶಗಳು ಒಳ್ಳೇ ನಂಬಿಕೆಯೊಂದಿಗೆ ಒಂದಷ್ಟನ್ನ ಕಳ್ಕೊಂಡು, ಒಂದಷ್ಟನ್ನ ಪಡ್ಕೊಂಡು ಒಪ್ಪಂದ ಮಾಡ್ಕೊಂಡಿದ್ವು ಅಂದಿದ್ದಾರೆ. ಅಲ್ಲದೆ ಈ ವಿಚಾರವಾಗಿ ಭಾರತ-ಶ್ರೀಲಂಕಾಗಳು ಮಾತುಕತೆ ನಡೆಸ್ಬೇಕು ಅಂತೇಳಿದ್ದಾರೆ. ಅಂದ್ಹಾಗೆ ಆಸ್ಟಿನ್‌ ಫರ್ನಾಂಡಿಸ್ 2018ರಿಂದ 2020ರವರೆಗೆ ಭಾರತದಲ್ಲಿ ಲಂಕಾ ಹೈಕಮೀಷನರ್‌ ಆಗಿ ಸೇವೆ ಸಲ್ಲಿಸಿದ್ರು.

-masthmagaa.com

Contact Us for Advertisement

Leave a Reply