ಬರ್ತಿದೆ ಹೊಸ ಸೋಷಿಯಲ್ ಮೀಡಿಯಾ! TRUMP ತರ್ತಿದ್ದಾರೆ TRUTH ಆಪ್

masthmagaa.com:

ಈ ನಡುವೆ ಹೊಸತೊಂದು ಸೋಷಿಯಲ್ ಮೀಡಿಯಾ ಬರ್ತಿದೆ. ಅದೇ TRUTH ಆಪ್. ಇದರ ಬಾಸ್ ಯಾರು ಗೊತ್ತಾ? ಡೋನಾಲ್ಡ್ ಟ್ರಂಪ್. ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಒಬ್ಬ ಯಶಸ್ವಿ ಅಧ್ಯಕ್ಷ ಹೌದೋ ಅಲ್ಲವೋ ಅಂತ ಡಿಬೇಟ್ ಮಾಡ್ಬೋದು. ಆದ್ರೆ ಅವರೊಬ್ಬ ಯಶಸ್ವಿ ಬ್ಯುಸಿನೆಸ್ ಮನ್ ಅಂತೂ ಹೌದು. ಒಬ್ಬ ಯಶಸ್ವೀ ಬ್ಯುಸಿನೆಸ್‌ಮ್ಯಾನ್ ತನ್ನ ಸೋಲು, ಹಿನ್ನಡೆಗಳನ್ನೇ ಹೊಸ ಅವಕಾಶ ಮಾಡ್ಕೊಳ್ತಾನೆ. ಟ್ರಂಪ್ ಈಗ ಅದನ್ನೇ ಮಾಡ್ತಿರೋ ಥರ ಕಾಣ್ತಿದೆ. ಇವ್ರು ಅಧ್ಯಕ್ಷರಾಗಿದ್ದಾಗ ಸೋಷಿಯಲ್ ಮೀಡಿಯಾ ದೈತ್ಯರ ಜೊತೆ ದಿನ ಕಿತ್ತಾಟ ನಡೀತಿತ್ತು. ಟ್ವಿಟರ್, ಫೇಸ್ಬುಕ್, ಗೂಗಲ್ ಎಲ್ಲರೂ ಟ್ರಂಪ್ ಮಾಡೋ ಪ್ರಚೋದನಕಾರಿ ಪೋಸ್ಟ್ ಗಳನ್ನ ತೆಗೆದು ಹಾಕೋದು, ಆ ಪೋಸ್ಟ್‌ಗಳು ಸರಿಯಿಲ್ಲ ಅನ್ನೋ ಥರ ಅವುಗಳ ಪಕ್ಕ ಮೆಸೇಜ್ ಡಿಸ್ಪ್ಲೇ ಮಾಡೋದುಎಲ್ಲ ಮಾಡ್ತಿದ್ವು. ಟ್ರಂಪ್ ಸೋತಾಗ ದಂಗೆಗೆ ಕುಮ್ಮಕ್ಕು ಕೊಡೋ ಥರ ಹೇಳಿಕೆ ನೀಡಿದ್ರು ಅಂತ ಈ ಕಂಪನಿಗಳು ಇವರನ್ನ ಜೀವನ ಪರ್ಯಂತ ಬ್ಯಾನ್ ಕೂಡ ಮಾಡಿದ್ದವು. ಇದಕ್ಕೆ ರೊಚ್ಚಿಗೆದ್ದಿರೋ ಟ್ರಂಪ್ ನಾನು ಸೆಪರೇಟ್ ಸೋಷಿಯಲ್ ಮಿಡಿಯಾ ಕಂಪನಿಯನ್ನೇ ಹುಟ್ಟುಹಾಕ್ತೀನಿ. ಅಮೆರಿಕನ್ನರಿಗೆ ಹೊಸ ಪ್ಲಾಟ್ಫಾರ್ಮ್ ಒದಗಿಸ್ತೀನಿ ಅಂತ ಅನೌನ್ಸ್ ಮಾಡಿದ್ದಾರೆ. ಈ ಹಿಂದಿನಿಂದಲೂ ಹೇಳ್ತಾ ಬಂದಿದ್ರು. ಆದ್ರೆ ಈಗ ಅಫಿಶಿಯಲ್ ಅನೌನ್ಸ್ಮೆಂಟ್ ಆಗಿದೆ. ಟ್ರಂಪ್ ಮೀಡಿಯಾ ಅಂಡ್ ಟೆಕ್ನಾಲಜಿ ಗ್ರೂಪ್ ಅಡಿಯಲ್ಲಿ TRUTH Social ಹೆಸರಿನ ಆಪ್ ಬರ್ತಿದೆ. ಮುಂದಿನ ತಿಂಗಳಿನಿಂದಲೇ ಇದರ ಬೀಟಾ ಟೆಸ್ಟಿಂಗ್ ಶುರುವಾಗುತ್ತೆ ಅಂತ ಹೇಳಿದ್ದಾರೆ. ‘ಎಂಥಾ ಕಾಲ ಬಂದಿದೆ ಅಂದ್ರೆ ತಾಲಿಬಾನಿಗಳಿಗೆ ಎಲ್ಲರಿಗೂ ದೊಡ್ಡ ಪ್ರಮಾಣದಲ್ಲಿ ಈ ಸೋಷಿಯಲ್ ಮೀಡಿಯಾ ಕಂಪನಿಗಳು ಜಾಗ ಕೊಟ್ಟಿವೆ. ಆದ್ರೆ ನಿಮ್ಮ ಫೇವರಿಟ್ ಪ್ರೆಸಿಡೆಂಟು ನಾನು. ನನ್ನನ್ನೇ ಬ್ಯಾನ್ ಮಾಡಿದ್ದಾರೆ. ಇದನ್ನ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಅಂತ ಅಬ್ಬರಿಸಿದ್ದಾರೆ ಟ್ರಂಪ್.

-masthmagaa.com

Contact Us for Advertisement

Leave a Reply