ರಾಜ್ಯದಲ್ಲಿ ಇವತ್ತು ಎಲ್ಲೆಲ್ಲಿ ಮಳೆಯಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

masthmagaa.com:

ರಾಜ್ಯದಲ್ಲಿ ಹಲವು ಕಡೆ ಇವತ್ತೂ ಜಡಿಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಟಗರಲಹಳ್ಳಿ ಎಂಬಲ್ಲಿ ಅತಿಹೆಚ್ಚು 222 ಮಿಲಿಮೀಟರ್‌ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳ ಬಹುತೇಕ ಕಡೆ ಸಾಧರಣ ಮಳೆ, ಅಲ್ಲಲ್ಲಿ ಅಧಿಕ ಮಳೆಯಾಗೋ ಸಾಧ್ಯತೆ ಇದೆ. ಇನ್ನು ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಅಧಿಕ ಮಳೆ, ಇನ್ನುಳಿದ ಕಡೆ ಸಾಧರಣ ಮಳೆಯಾಗೋ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಬೀದರ್‌, ಕಲಬುರಗಿ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.
ಇನ್ನು ರಾಜ್ಯದಲ್ಲಿ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಇಂದು ಕಂದಾಯ ಸಚಿವ ಆರ್‌ ಅಶೋಕ್‌ ಮಾಹಿತಿ ನೀಡಿದ್ದಾರೆ. ಜೊತೆಗೆ ನೆರೆ ಸಂತ್ರಸ್ತರಿಗಾಗಿ ಕಂದಾಯ ಇಲಾಖೆಯಿಂದ 255 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ ಅಂತ ಹೇಳಿದ್ರು. ಇನ್ನು ರಾಮನಗರ ಜಿಲ್ಲೆಯಲ್ಲಿ ಉಂಟಾಗಿರೋ ಪ್ರವಾಹದ ಪರಿಸ್ಥಿತಿಯ ಕುರಿತು ಈಗ ರಾಜಕೀಯ ವಾಗ್ವಾದಕ್ಕೂ ಕೂಡ ಕಾರಣವಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಆಗಿರೋ ಅವಾಂತರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ʻಉತ್ತಮವಾದ ಕೆಲಸ ಏನಾಗಿದೆ ಅಂತ ಪ್ರತಾಪ್‌ ಸಿಂಹ ಬಂದು ನೋಡಲಿ. ನಿಂತ್ಕೊಂಡು ಫೋಟೋ ತೆಗೆದುಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹಾಕ್ಕೊಂಡಿದ್ದಾರಲ್ಲ. ರೋಡ್‌ ಮಾಡಿ ಅಂದ್ರೆ ಸ್ವಿಮ್ಮಿಂಗ್‌ ಫೂಲ್‌ ನಿರ್ಮಿಸಿದ್ದಾರೆ. ಇಲ್ಲಿ ಬಂದು ಸ್ವಿಮ್ಮಿಂಗ್ ಮಾಡಬಹುದಿತ್ತು ಅಂತ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply