ಕರ್ನಾಟಕಕ್ಕೆ ಸಂಕಷ್ಟ: ತಮಿಳುನಾಡಿಗೆ ನೀರು ಬಡಲು ಆದೇಶಿಸಿದ ಸುಪ್ರೀಂಕೋರ್ಟ್‌

masthmagaa.com:

ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಅಂತ ಕರ್ನಾಟಕ ಸುಪ್ರೀಂ ಮೊರೆ ಹೋಗಿತ್ತು. ಆದ್ರೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವದಿಲ್ಲ ಅಂತ ಸ್ಪಷ್ಟಪಡಿಸಿದೆ. ಅಲ್ಲದೇ ಪ್ರಾಧಿಕಾರದ ಆದೇಶದಂತೆ KRSನಿಂದ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ರಾಜ್ಯಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಜೊತೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ, ಸಭೆಗಳನ್ನು ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಅಂತ ಸೂಚಿಸಿದೆ.

ಕರ್ನಾಟಕ ಅಕ್ಷರಶಃ ಬರದ ಬೇಗೆಯಿಂದ ಬಸವಳಿದಿದೆ. ಇಂತಹ ಸಂಕಷ್ಟದಲ್ಲೇ ನೆರವಾಗಲಿ ಅಂತ ದೊಡ್ಡ ದೊಡ್ಡ ಜಲಾಶಯಗಳನ್ನ ಕಟ್ಟಿರೋದು. ಆದ್ರೆ ಈಗ ಆ ಜಲಾಶಯಗಳಲ್ಲೂ ನೀರಿಲ್ಲದೇ ಮಹಾಜಲಕ್ಷಾಮ ಎದುರಾಗಿದೆ. KRSನ ಗರಿಷ್ಠ ನೀರಿನ ಮಟ್ಟ 124.8 ಅಡಿ ಇದ್ದು ಸದ್ಯದ ನೀರಿನ ಮಟ್ಟ 97.08 ಅಡಿ ಇದೆ. ಅಂದ್ರೆ ಸುಮಾರು 20 ಟಿಎಂಸಿ ನೀರಿದೆ. ಸುಪ್ರೀಂ ಆದೇಶದಂತೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಬಿಟ್ರೆ 15 ದಿನದಲ್ಲಿ 7 ಟಿಎಂಸಿ ನೀರು ಖಾಲಿಯಾಗಲಿದೆ. ಆಗ ಉಳಿಯೋದು 13 ಟಿಎಂಸಿ ನೀರು ಮಾತ್ರ. ಆದ್ರೆ ಆ 13ರಲ್ಲೂ 5 ಟಿಎಂಸಿ ಡೆಡ್‌ ಸ್ಟೋರೇಜ್‌. ಅಂದ್ರೆ ಆ ನೀರನ್ನ ಬಳಸೋಕಾಗಲ್ಲ. ಆಗ ಕರ್ನಾಟಕಕ್ಕೆ ಉಳಿಯೋದು ಕೇವಲ 8 ಟಿಎಂಸಿ ನೀರು ಮಾತ್ರ. ಅದ್ರಲ್ಲಿ ಬೆಂಗಳೂರೂ ಒಂದಕ್ಕೆ ತಿಂಗಳಿಗೆ 1.25-1.5 ಟಿಎಂಸಿ ನೀರು ಬೇಕು. ಉಳಿದಂತೆ ಮೈಸೂರು ಮತ್ತಿತರೆ ನಗರಗಳಿಗೆ 1 ಟಿಎಂಸಿ ನೀರು ಬೇಕು. ಅತ್ತ ಕಬಿನಿ ಹಾರಂಗಿ ಜಲಾಶಯಗಳಲ್ಲಿ ಕೂಡ 8 ಟಿಎಂಸಿಗಿಂತ ಕಡಿಮೆ ನೀರಿದೆ.

ಇತ್ತ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಕರವೇ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ್ದು, ನಾರಾಯಣ ಗೌಡರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅತ್ತ ಕಾವೇರಿ ಜಲ ವಿವಾದ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್‌ ಅವರನ್ನ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತಾಡಿರುವ ಸಿದ್ದರಾಮಯ್ಯ, ಸದ್ಯಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಅಂತ ಹೇಳಿದ್ದಾರೆ.) ಇನ್ನೊಂದ್‌ ಕಡೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಯಾವುದೇ ಮಾತುಕತೆ ನಡೆಸುವ ಅಗತ್ಯವಿಲ್ಲ. ಸುಪ್ರೀಂಕೋರ್ಟ್‌ ನಿರ್ದೇಶನವೇ ಫೈನಲ್‌ ಅಂತ ತಮಿಳುನಾಡು ಹೇಳಿದೆ. ಜೊತೆಗೆ ಈ ವಿಚಾರದಲ್ಲಿ ತಮಿಳುನಾಡು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂತ ಅಲ್ಲಿನ ಜಲಸಂಪನ್ಮೂಲ ಸಚಿವ ದೊರೈಮುರುಗನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply