ISIS ಮುಖ್ಯಸ್ಥನನ್ನ ಅಮೆರಿಕ ಸೇನೆ ರಾತ್ರೋರಾತ್ರಿ ಮುಗಿಸಿದ್ದು ರೋಚಕ!

masthmagaa.com:

ಐಎಸ್ ಉಗ್ರ ಸಂಘಟನೆಯ ಮುಖ್ಯಸ್ಥ, ಮೋಸ್ಟ್ ವಾಂಟೆಡ್​ ಉಗ್ರ ಅಬು ಇಬ್ರಾಹಿಂ ಅಲ್​ ಹಷೇಮಿ ಅಲ್​ ಖುರೇಷಿ ಫಿನಿಶ್ ಆಗಿದ್ದಾನೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ. ಸಿರಿಯಾದಲ್ಲಿ ಈತ ಅಡಗಿ ಕೂತಿದ್ದ ಕಟ್ಟಡದ ಮೇಲೆ ಅಮೆರಿಕ ಸೇನೆ ರೇಡ್​ ಮಾಡಿದಾಗ, ತನ್ನ ಕುಟುಂಬಸ್ಥರ ಸಮೇತ ತನ್ನನ್ನ ಸ್ಫೋಟಿಸಿಕೊಂಡು ಮೃತಪಟ್ಟಿದ್ದಾನೆ ಅಂತ ಅಮೆರಿಕ ಹೇಳಿದೆ. ಸ್ಫೋಟದಲ್ಲಿ ಖುರೇಷಿ, ಈತನ ಇಬ್ಬರು ಹೆಂಡ್ತೀರು, ಮಕ್ಕಳು, ಸಹಚರರು ಸೇರಿ ಒಟ್ಟು 13 ಜನ ಮೃತಪಟ್ಟಿದ್ದಾರೆ.

ಈ ಆಪರೇಷನ್​ನ ಪ್ಲಾನ್​ ಕಳೆದ ವರ್ಷದ ಡಿಸೆಂಬರ್​​ನಲ್ಲೇ ಶುರುವಾಗಿತ್ತು. ಸಿರಿಯಾದ ಅಟ್​ಮೇ ನಗರದಲ್ಲಿರೋ ಈ ಕಟ್ಟದಲ್ಲಿ ಐಎಸ್​ ಮುಖ್ಯಸ್ಥ ವಾಸ ಮಾಡ್ತಿದ್ದಾನೆ ಅನ್ನೋದು ಕನ್ಫರ್ಮ್​ ಆಗ್ತಿದ್ದಂತೇ ಈತನನ್ನ ಫಿನಿಶ್ ಮಾಡಲು ಅಮೆರಿಕ ಪ್ಲಾನ್​ ಮಾಡಿತ್ತು. ಅಟ್​ಮೇ ನಗರ ಇರೋದು ಸಿರಿಯಾದ ವಾಯುವ್ಯ ಭಾಗದಲ್ಲಿ. ಟರ್ಕಿ ಗಡಿಗೆ ಹತ್ತಿರದಲ್ಲಿ ಬರುತ್ತೆ. ಮೂರಂತಸ್ತಿನ ಈ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸವಿದ್ದ ಈತ, ಕಟ್ಟಡ ಬಿಟ್ಟು ಹೊರಗೆ ಬರ್ತಾನೇ ಇರಲಿಲ್ಲ. ಹೊರ ಜಗತ್ತಿನ ಜೊತೆ ಮಾತಾಡ್ಬೇಕು ಅಂದ್ರೆ ಕೋರಿಯರ್​ಗಳನ್ನ ಆಶ್ರಯಿಸಿದ್ದ. ಇದು ಆಪರೇಷನ್​ಗೆ ದೊಡ್ಡ ಚಾಲೆಂಜ್ ಆಗಿತ್ತು. ಆದ್ರೂ ಈತನ ಅಡಗಿರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಅಮೆರಿಕ ಸೇನೆಯ ವಿಶೇಷ ಪಡೆ ಗುರುವಾರ ಹೆಲಿಕಾಪ್ಟರ್​ಗಳಲ್ಲಿ ಕಟ್ಟಡವನ್ನ ಸುತ್ತುವರಿದಿದೆ. ಮಧ್ಯರಾತ್ರಿ ಸುಮಾರಿಗೆ ಸಾಲು ಸಾಲು ಹೆಲಿಕಾಪ್ಟರ್​​ಗಳನ್ನ ನೋಡಿ ಆ ಏರಿಯಾದ ಜನ ಶಾಕ್​ ಆಗಿದ್ದಾರೆ. ಕೆಲವರು ಹೆಲಿಕಾಪ್ಟರ್ ಶಬ್ದ ಕೇಳಿ ಚಂಡಮಾರುತ ಇರ್ಬೋದು ಅಂತ ಹೊರಗೆ ಬಂದು ನೋಡಿದ್ದಾರೆ. ಅಷ್ಟರಲ್ಲಿ ಅಮೆರಿಕ ಸೇನೆ ಲೌಡ್​ಸ್ಪೀಕರ್ ಬಳಸಿ, ಎಲ್ಲರೂ ಈ ಸ್ಥಳವನ್ನ ಖಾಲಿ ಮಾಡಿ. ಮೂರಂತಸ್ತಿನ ಈ ಕಟ್ಟಡ ನಮ್ಮ ಟಾರ್ಗೆಟ್​. ಹಾಗಂತ ಹೆದರಬೇಡಿ, ಉಗ್ರರಿಂದ ನಿಮ್ಗೆ ಮುಕ್ತಿ ಕೊಡಿಸಲು ನಾವು ಬಂದಿದ್ದೀವಿ. ನಮ್ಮೊಂದಿಗೆ ಸಹಕರಿಸಿ ಅಂತ ಅನೌನ್ಸ್​​ ಮಾಡಿದ್ದಾರೆ. ನಂತ್ರ ಕಟ್ಟಡದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಗುಂಡಿನ ಚಕಮಕಿ ಬಳಿಕ ಕಟ್ಟಡದೊಳಕ್ಕೆ ನುಗ್ಗಿದ್ದಾರೆ.

ಮೊದಲ ಮಹಡಿಗೆ ನುಗ್ಗಿದ ಅಮೆರಿಕ ಸೇನೆ ಅಲ್ಲಿದ್ದ ನಾಲ್ಕು ಮಕ್ಕಳು ಸೇರಿ ಒಟ್ಟು 6 ಜನರನ್ನ ರಕ್ಷಣೆ ಮಾಡ್ತು. ನಂತ್ರ ಎರಡನೇ ಮಹಡಿಗೆ ಹೋದಾಗ ಅಲ್ಲಿ ಖುರೇಷಿಯ ಪತ್ನಿ ಮತ್ತು ಓರ್ವ ಸಹಚರ ಯೋಧರ ಕಡೆಗೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿದ ಯೋಧರು ಅವರನ್ನ ಫಿನಿಶ್​ ಮಾಡಿದ್ದಾರೆ. ಅಲ್ಲಿ ಒಂದು ಮಗು ಕೂಡ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ತು. ಉಳಿದಂತೆ ಎರಡನೇ ಮಹಡಿಯಿಂದ ಮೂರು ಮಕ್ಕಳು ಮತ್ತು ಒಂದು ನವಜಾತ ಶಿಶುವನ್ನ ಅಮೆರಿಕ ಸೇನೆ ಸೇಫಾಗಿ ಹೊರಗೆ ತಂತು. ಇನ್ನೇನು ಅಮೆರಿಕ ಸೇನೆ ಮೂರನೇ ಮಹಡಿಗೆ ನುಗ್ಗಿ, ತನ್ನನ್ನ ಹಿಡಿದುಬಿಡುತ್ತೆ ಅಂದುಕೊಂಡ ಉಗ್ರ ಖುರೇಶಿ ತನ್ನನ್ನ ತಾನು ಸ್ಫೋಟಿಸಿಕೊಂಡಿದ್ದಾನೆ. ಭಾರಿ ಸ್ಫೋಟದಲ್ಲಿ ಖುರೇಶಿ, ಆತನ ಪತ್ನಿ, ಮಕ್ಕಳು ಮತ್ತು ಸಹಚರರು ಕೂಡ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮೃತದೇಹಗಳು ಕಟ್ಟಡದ ಹೊರಗೆ ಹಾರಿ ರಸ್ತೆ ಮೇಲೆಲ್ಲಾ ಬಿದ್ದಿದ್ವು ಅಂತ ವರದಿಯಾಗಿದೆ. ಸ್ಫೋಟಕ್ಕೆ ಮೂರನೇ ಮಹಡಿ ಧ್ವಂಸವಾಗಿದೆ. ಇನ್ನು ಅಮೆರಿಕ ಸೇನೆ ಕಟ್ಟಡದೊಳಗೆ ಕಾರ್ಯಾಚರಣೆ ನಡೆಸೋವಾಗ ಇಬ್ಬರು ಉಗ್ರರು ಹೆಲಿಕಾಪ್ಟರ್​ ಮೇಲೆ ಗುಂಡಿನ ದಾಳಿ ನಡೆಸಿದ್ರು. ಅವರನ್ನ ಕೂಡ ಫಿನಿಶ್ ಮಾಡಲಾಗಿದೆ ಅಂತ ಅಮೆರಿಕ ಹೇಳಿದೆ. ಘಟನಾ ಸ್ಥಳದಲ್ಲಿ ಒಟ್ಟು 13 ಮೃತದೇಹಗಳು ಸಿಕ್ಕಿವೆ ಅಂತ ಸಿರಿಯಾದ ರೆಸ್ಕೂ ಸಿಬ್ಬಂದಿ ಹೇಳಿದ್ದಾರೆ. ಇದರಲ್ಲಿ ಆರು ಜನ ಮಕ್ಕಳು, ನಾಲ್ವರು ಮಹಿಳೆಯರು ಮತ್ತು ಮೂವರು ಪುರುಷರಾಗಿದ್ದಾರೆ. ಆಪರೇಷನ್​ ವೇಳೆ ಅಮೆರಿಕ ಸೇನೆಯ ಒಂದು ಹೆಲಿಕಾಪ್ಟರ್​ನಲ್ಲಿ ದೋಷ ಕಂಡುಬಂದ ಹಿನ್ನೆಲೆ ಅದನ್ನ ಅಲ್ಲೇ ನಾಶ ಮಾಡಬೇಲಾಯ್ತು ಅಂತ ಅಮೆರಿಕ ಹೇಳಿದೆ. ಇಡೀ ಆಪರೇಷನ್​ನ ಅಪ್ಡೇಟ್ಸ್ ಅನ್ನ ಅಮೆರಿಕದ ಮರೀನ್​ ಜನರಲ್​ ಫ್ರಾಂಕ್ ಮೆಕೆಂಝಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ಗೆ ಕೊಡ್ತಿದ್ರು. ಬೈಡೆನ್​, ಕಮಲಾ ಹ್ಯಾರಿಸ್, ಇತರ ಅಧಿಕಾರಿಗಳು ವೈಟ್​ ಹೌಸ್​ನ ಸಿಟುವೇಷನ್​ ರೂಮ್​ನಲ್ಲಿ ಕೂತ್ಕೊಂಡು ರಿಯಲ್​ ಟೈಂ ಅಪ್ಡೇಟ್ಸ್ ಪಡೀತಿದ್ರು. ಈ ಆಪರೇಷನ್​ಗೆ ಜೋ ಬೈಡೆನ್​ ಮಂಗಳವಾರವೇ ಫೈನಲ್​ ಅಪ್ರೂವಲ್​ ಕೊಟ್ಟಿದ್ರು. ಆಪರೇಷನ್​ ಸಕ್ಸಸ್​ ಆದ ಬೆನ್ನಲ್ಲೇ ಬೈಡೆನ್​, ನಮ್ಮ ಸೈನಿಕರ ಶೌರ್ಯಕ್ಕೆ ಧನ್ಯವಾದ ಎಂದಿದ್ದಾರೆ.

ಇನ್ನು ಈ ಕಟ್ಟಡದ ಮಾಲೀಕ ಬಿಲ್ಡಿಂಗ್ ಅನ್ನ 11 ತಿಂಗಳ ಹಿಂದೆ ಓರ್ವ ಕ್ಯಾಬ್​​ ಡ್ರೈವರ್​ಗೆ ಲೀಸ್​ಗೆ ಕೊಟ್ಟಿದ್ದ ಅನ್ನೋದು ಗೊತ್ತಾಗಿದೆ. ಕಟ್ಟಡದಲ್ಲಿ ಉಗ್ರ ಖುರೇಷಿ ವಾಸವಿದ್ದಾನೆ ಅಂತ ಗೊತ್ತಿದ್ದಿದ್ರೆ, ಇಲ್ಲಿರೋಕೇನೇ ಬಿಡ್ತಿರಲಿಲ್ಲ ಅಂತ ಕಟ್ಟಡ ಮಾಲೀಕ ಹೇಳಿದ್ದಾನೆ. ಅಟ್​ಮೆ ನಗರ ನಿವಾಸಿಗಳು ಕೂಡ ಈ ಬಿಲ್ಡಿಂಗ್​ನಲ್ಲಿ ಐಎಸ್ ಮುಖ್ಯಸ್ಥ ಇದ್ದ ಅನ್ನೋ ಸುದ್ದಿ ನೋಡಿ ಶಾಕ್ ಆಗಿದ್ಧಾರೆ. ಖುರೇಷಿ ಬಗ್ಗೆ ಒಂದಷ್ಟು ಮಾಹಿತಿ ಕೊಟ್ಟಿರೋ ಮನೆ ಮಾಲೀಕ, ಆತ ಯಾವಾಗಲೂ ಒಂದೇ ಥರದ ಬಟ್ಟೆಗಳನ್ನ ಧರಿಸುತ್ತಿದ್ದ. ಕೊನೆಬಾರಿ ನಾನು ಅವನ ಜೊತೆ ಮಾತನಾಡಿದಾಗ, ಅವನು ಆರಾಮಾಗಿದ್ದ, ಖುಷ್​ ಖುಷಿಯಾಗಿದ್ದ ಅಂತ ಹೇಳಿದ್ದಾರೆ. ಖುರೇಷಿ ತಲೆ ಮೇಲೆ 10 ಮಿಲಿಯನ್​ ಡಾಲರ್ ಬಹುಮಾನ ಘೋಷಿಸಿದ್ದ ಅಮೆರಿಕ, ಆತನನ್ನ ಜಾಗತಿಕ ಉಗ್ರರ ವಿಶೇಷ ಪಟ್ಟಿಗೆ ಸೇರಿಸಿತ್ತು. ಐಎಸ್​ ಸಂಸ್ಥಾಪಕ ಅಬು ಬಕರ್​ ಅಲ್​ ಬಗ್ದಾದಿ 2019ರಲ್ಲಿ ಅಮೆರಿಕ ಸೇನೆ ನಡೆಸಿದ ರೇಡ್​ ವೇಳೆ ತನ್ನನ್ನ ತಾನು ಸ್ಫೋಟಿಸಿಕೊಂಡಿದ್ದ. ಆತನ ಸಾವಿನ ಬಳಿಕ ಐಎಸ್​ ಸಂಘಟನೆಯನ್ನ ಈ ಖುರೇಷಿ ಮುನ್ನಡೆಸುತ್ತಿದ್ದ. 2014ರಲ್ಲಿ ಉತ್ತರ ಇರಾಕ್​ನಲ್ಲಿ ನಡೆದ ಯಾಝಿದಿ​ ಅಲ್ಪಸಂಖ್ಯಾತರ ನರಮೇಧದ ಮಾಸ್ಟರ್​ಮೈಂಡ್​ ಈ ಖುರೇಷಿ ಅಂತ ಅಮೆರಿಕ ಹೇಳಿತ್ತು. ಹೀಗಾಗಿ ಈತನಿಗೆ ‘ಡೆಸ್ಟ್ರಾಯರ್’ ಅನ್ನೋ ನಿಕ್​ನೇಮ್​​ ಕೂಡ ಇಡಲಾಗಿತ್ತು.

-masthmagaa.com

Contact Us for Advertisement

Leave a Reply