ಫ್ರಾನ್ಸ್‌: ನೂತನ ಪೆನ್ಶನ್‌ ಕಾನೂನು ವಿರೋಧಿಸಿ ಬೀದಿಗಿಳಿದ ಲಕ್ಷಾಂತರ ಜನರು

masthmagaa.com:

ನಿವೃತ್ತಿ ವಯಸ್ಸು ಏರಿಕೆ ಸೇರಿದಂತೆ ಪೆನ್ಶನ್‌ ರಿಫಾರ್ಮ್‌ ಕಾನೂನಿನ ವಿರುದ್ಧದ ಪ್ರತಿಭಟನೆ ಫ್ರಾನ್ಸ್‌ನಲ್ಲಿ ಇನ್ನೂ ಕಮ್ಮಿಯಾಗಿಲ್ಲ. ಮೇ 1 ರಂದು ಅಂದ್ರೆ ನಿನ್ನೆ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಲಕ್ಷಗಟ್ಟಲೇ ಜನ ಬೀದಿಗಳಿದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರಾನ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಸಂಘರ್ಷ ಉಂಟಾಗಿದೆ. ಘಟನೆಯಲ್ಲಿ ಕನಿಷ್ಠ 108 ಪೊಲೀಸರು ಗಾಯಗೊಂಡಿದ್ದಾರೆ, ಸುಮಾರು 291 ಜನರನ್ನ ವಶಕ್ಕೆ ಪಡೆಯಲಾಗಿದೆ. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಜನರನ್ನ ಚದುರಿಸಲು ಪೊಲೀಸರು ಟಿಯರ್‌ ಗ್ಯಾಸ್‌ ಅಥ್ವಾ ಅಶ್ರು ವಾಯುವನ್ನ ಸಿಡಿಸಿದ್ದಾರೆ. ಫ್ರಾನ್ಸ್‌ನಾದ್ಯಂತ ಸುಮಾರು 7.82 ಲಕ್ಷ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಕೇವಲ ಪ್ಯಾರಿಸ್‌ ನಗರವೊಂದರಲ್ಲೇ 1.12 ಲಕ್ಷ ಜನ ಬೀದಿಗಳಿದು ಪ್ರತಿಭಟಿಸಿದ್ದಾರೆ ಅಂತ ಅಲ್ಲಿನ ಇಂಟಿರಿಯರ್‌ ಮಿನಿಸ್ಟ್ರಿ ಹೇಳಿದೆ. ಆದ್ರೆ ಒಟ್ಟು 23 ಲಕ್ಷ ಜನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು, ಪ್ಯಾರಿಸ್‌ ನಗರ ಒಂದ್ರಲ್ಲೇ 5.5 ಲಕ್ಷ ಜನ ಸೇರಿದ್ರು ಅಂತ ಅಲ್ಲಿನ General Confederation of Labour ಯುನಿಯನ್‌ ಹೇಳಿದೆ. ಫ್ರಾನ್ಸ್‌ನಲ್ಲಿ ಇರೋದೇ 6.7 ಕೋಟಿ ಜನಸಂಖ್ಯೆ. ಅದ್ರಲ್ಲಿ 23 ಲಕ್ಷ ಜನ ಒಂದೇ ದಿನ ಪ್ರತಿಭಟನೆಗೆ ಭಾಗಿಯಾಗಿದ್ದಾರೆ. ಇತ್ತ 2009ರ ನಂತರ ಇದೇ ಮೊದಲ ಬಾರಿಗೆ ಫ್ರಾನ್ಸ್‌ನ ಪ್ರಮುಖ 8 ಒಕ್ಕೂಟಗಳು ಜೊತೆಯಾಗಿ ಪ್ರತಿಭಟನೆಗೆ ಕರೆ ಕೊಟ್ಟಿವೆ ಅಂತ ಹೇಳಲಾಗಿದೆ. ಅಂದ್ಹಾಗೆ ಫ್ರಾನ್ಸ್‌ನಲ್ಲಿ ನಿವೃತ್ತಿ ವಯಸ್ಸನ್ನ 62 ರಿಂದ 64ಕ್ಕೆ ಏರಿಸುವ ಬಿಲ್‌ನ್ನ ಭಾರಿ ವಿರೋಧದ ನಡುವೆಯೂ ಕಾನೂನಾಗಿ ಜಾರಿ ಮಾಡಲಾಗಿತ್ತು. ಜನವರಿ ಮಧ್ಯದಲ್ಲಿ ಈ ಬಿಲ್‌ ಪರಿಚಯಿಸಿದಾಗಿನಿಂದಲೂ ಈ ಬಿಲ್‌ ಜಾರಿ ಮಾಡದಂತೆ ಮ್ಯಾಕ್ರಾನ್‌ ವಿರುದ್ಧ ಪ್ರತಿಭಟನೆಗಳು ನಡೀತಾನೆ ಇವೆ. ಅಲ್ದೇ ಈ ವಿವಾದಾತ್ಮಕ ಕಾನೂನಿಂದ ಫ್ರಾನ್ಸ್‌ನ ನಾಲ್ವರಲ್ಲಿ ಮೂವರು ಮ್ಯಾಕ್ರಾನ್‌ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಅಂತ ಸರ್ವೇ ಒಂದ್ರಿಂದ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply