ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಕೆಳಗಿಳಿಯೋದು ಪಕ್ಕಾ!

masthmagaa.com:

ದೀರ್ಘಕಾಲ ಪ್ರಧಾನಿಯಾಗಿ ಇಸ್ರೇಲ್ ಆಳಿದ್ದ ಬೆಂಜಮಿನ್ ನೆತಾನ್ಯಹು ಈಗ ಕೆಳಗಿಳಿಯೋದು ಬಹುತೇಕ ಪಕ್ಕಾ ಆಗಿದೆ. ಯಾಕಂದ್ರೆ ಇಸ್ರೇಲ್​ನ ವಿಪಕ್ಷಗಳೆಲ್ಲಾ ಸೇರ್ಕೊಂಡು ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ವಿಪಕ್ಷ ಯೆಶ್ ಆತಿದ್​​ನ ನಾಯಕ ಯಾರ್ ಲ್ಯಾಪಿಡ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇಸ್ರೇಲ್​ನಲ್ಲಿ ಸರ್ಕಾರ ರಚನೆಗೆ ಪ್ರಸ್ತಾವನೆ ಸಲ್ಲಿಸಲು ನಿನ್ನೆ ಮಧ್ಯರಾತ್ರಿ 11.59ರವರೆಗೆ ಅವಕಾಶ ನೀಡಲಾಗಿತ್ತು. ಅವಧಿ ಮುಗಿಯೋಕೆ ಇನ್ನೇನು ಸ್ವಲ್ಪ ಹೊತ್ತು ಬಾಕಿ ಇದೆ ಅನ್ನೋವಾಗಲೇ ಯಾರ್ ಲ್ಯಾಪಿಡ್ ತಾವು ಮೈತ್ರಿ ಕುದುರಿಸುವಲ್ಲಿ ಯಶಸ್ವಿಯಾಗಿರೋದಾಗಿ ಘೋಷಿಸಿದ್ದಾರೆ. ಜೊತೆಗೆ ಈಗಾಗಲೇ ಅಧ್ಯಕ್ಷರಿಗೆ ಸರ್ಕಾರ ರಚನೆ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾವು ಇಸ್ರೇಲ್ ಜನರಿಗಾಗಿ ಕೆಲಸ ಮಾಡ್ತೀವಿ. ದೇಶವನ್ನು ಸುರಕ್ಷಿತವಾಗಿ ಇಡ್ತೀವಿ ಅಂತ ಹೇಳಿದ್ದಾರೆ. ಒಂದ್ವೇಳೆ ಈ ಅವಧಿಯೊಳಗೆ ಮೈತ್ರಿ ಕುದುರಿಸುವಲ್ಲಿ ವಿಪಕ್ಷಗಳು ಫೇಲ್ ಆಗಿದ್ರೆ, ಇಸ್ರೇಲ್​​ನಲ್ಲಿ ಮತ್ತೆ ಚುನಾವಣೆ ನಡೆಯುತ್ತಿತ್ತು. ಬೆಂಜಮಿನ್ ನೆತಾನ್ಯಹು ಕೂಡ ಚುನಾವಣೆ ನಡೀಬೇಕು ಅಂತಲೇ ಪಟ್ಟು ಹಿಡಿದಿದ್ದಾರೆ. ಆದ್ರೆ ಸದ್ಯ ವಿಪಕ್ಷಗಳ ಮೈತ್ರಿ ಕುದುರಿದೆ. ಯೆಶ್ ಆತಿದ್​ ಪಕ್ಷದ ಯಾರ್ ಲ್ಯಾಪಿಡ್ ಮತ್ತು ಯಾಮಿನಾ ಪಕ್ಷದ ನೆಫ್ತಾಲಿ ಬೆನ್ನೆಟ್​​​​ ನೇತೃತ್ವದ 8 ಪಕ್ಷಗಳ ಈ ಮೈತ್ರಿಯಲ್ಲಿ ಯುನೈಟೆಡ್ ಅರಬ್ ಲಿಸ್ಟ್ ಅಥವಾ ರಾಮ್​​(RAAM)​ ಅನ್ನೋ ಒಂದು ಅರಬ್ ಇಸ್ರೇಲಿ ಪಕ್ಷ ಕೂಡ ಇದೆ. ಒಂದು ವೇಳೆ ಸರ್ಕಾರ ರಚನೆಯಾಗ್ಬಿಟ್ರೆ ಇದೇ ಮೊದಲ ಬಾರಿಗೆ ಅರಬ್ ಪಕ್ಷವೊಂದು ಇಸ್ರೇಲ್ ಸರ್ಕಾರದ ಭಾಗವಾದಂತಾಗುತ್ತೆ. ಅಂದಹಾಗೆ ಇನ್ನೊಂದು ವಾರದಲ್ಲಿ ಈ ಹೊಸ ಮೈತ್ರಿಕೂಟ ಕೆನೆಸೆಟ್​​​ನಲ್ಲಿ ಬಹುಮತ ಸಾಬೀತುಪಡಿಸಬೇಕು. ಇಲ್ಲಿ ಒಟ್ಟು 120 ಸದಸ್ಯರಿದ್ದು ಅವರಲ್ಲಿ ಸರ್ಕಾರ ರಚನೆಗೆ 61 ಸದಸ್ಯ ಬಲ ಅಗತ್ಯ.. ಸದ್ಯ ಬೆಂಜಮಿನ್ ನೆತಾನ್ಯಹುರ ಲೀಕುಡ್ ಪಕ್ಷಕ್ಕೆ 29 ಸ್ಥಾನಗಳು ಸಿಕ್ಕಿದ್ದು, ಮೈತ್ರಿ ಎಲ್ಲಾ ಸೇರಿ ಒಟ್ಟು 54 ಸದಸ್ಯರ ಬಲವಿದೆ. ಅದೇ ವಿಪಕ್ಷಗಳ ಕೂಟದಲ್ಲಿ ಒಟ್ಟು 66 ಸದಸ್ಯ ಬಲವಿದೆ. ಆದ್ರೆ ಬಹುಮತ ಸಾಬೀತುಪಡಿಸೋ ವೇಳೆ ಏನಾಗುತ್ತೋ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇನ್ನು ಲೀಕುಡ್ ಪಾರ್ಟಿ ಬಳಿಕ ಯೆಶ್ ಆತಿದ್ ಅತಿದೊಡ್ಡ ಪಕ್ಷವಾಗಿದ್ರೂ ಕೂಡ ಯಾಮಿನ ಪಕ್ಷದ ನೆಫ್ತಾಲಿ ಬೆನ್ನೆಟ್​​​ಗೆ ಪ್ರಧಾನಿ ಹುದ್ದೆ ಬಿಟ್ಟುಕೊಡೋದಾಗಿ ಯಾರ್ ಲ್ಯಾಪಿಡ್ ಹೇಳಿದ್ದಾರೆ. ಅದರಂತೆ ವಿಪಕ್ಷಗಳು ಬಹುಮತ ಸಾಬೀತು ಮಾಡಿದ್ರೆ ಟೆಕ್ ಕ್ಷೇತ್ರದ ಮಿಲಿಯನೇರ್ ಆಗಿರೋ 49 ವರ್ಷದ ನೆಫ್ತಾಲಿ ಬೆನ್ನೆಟ್​​ ಇಸ್ರೇಲ್ ಪ್ರಧಾನಿಯಾಗಲಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ನೆಫ್ತಾಲಿ ಬೆನ್ನೆಟ್​​​ರ ಯಾಮಿನ ಪಕ್ಷ ಕೂಡ ಲೀಕುಡ್ ಪಾರ್ಟಿ ರೀತಿಯೇ ಬಲಪಂಥೀಯ ವಿಚಾರಧಾರೆ ಹೊಂದಿರೋ ಪಕ್ಷವೇ ಆಗಿದೆ. ಇದ್ರಿಂದ ವಿಪಕ್ಷದಲ್ಲಿ ರೈಟ್ ವಿಂಗ್​​, ಜಾತ್ಯಾತೀತ ಮತ್ತು ಅರಬ್ ಪಕ್ಷಗಳ ಮಿಶ್ರಣವಾಗಿದೆ. ಒಂದ್ವೇಳೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಇದ್ರೆ ಮತ್ತೆ ಚುನಾವಣೆ ನಡೆಯುತ್ತೆ. ಆಗ ಕಳೆದೆರಡು ವರ್ಷದಲ್ಲಿ ಇಸ್ರೇಲ್​​ನಲ್ಲಿ ಐದು ಬಾರಿ ಚುನಾವಣೆ ನಡೆದಂತಾಗುತ್ತೆ.

-masthmagaa.com

Contact Us for Advertisement

Leave a Reply