‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧಿಸಿದ ಪಶ್ಚಿಮ ಬಂಗಾಳ, ತಮಿಳುನಾಡು: ನೋಟಿಸ್ ಜಾರಿ ಮಾಡಿದ ಸುಪ್ರೀಮ್ ಕೋರ್ಟ್!

masthmagaa.com:

ವಿವಾದಾತ್ಮಕ ಬಹುಭಾಷಾ ಚಿತ್ರ ‘ದಿ ಕೇರಳ ಸ್ಟೋರಿ’ ಚಿತ್ರದ ಪ್ರದರ್ಶನವನ್ನು ನಿಷೇಧಿಸಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸಲ್ಲಿಸಿರುವ ಅರ್ಜಿಯನ್ನು ಮೇ 12ರಂದು ವಿಚಾರಣೆ ನಡೆಸೋದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು.

ಇಂದು ಈ ಕುರಿತು ವಿಚಾರಣೆ ನಡೆದ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ, ‘ದೇಶದಾದ್ಯಂತ ಬೇರೆ ಬೇರೆ ಭಾಗಗಳಲ್ಲಿ ಈ ಚಿತ್ರದ ಪ್ರದರ್ಶನ ಆಗುತ್ತಿದೆ, ಹಾಗಿರುವಾಗ ಪಶ್ಚಿಮ ಬಂಗಾಳದಲ್ಲಿ ಮಾತ್ರ ಚಿತ್ರದ ಪ್ರದರ್ಶನ ನಿಲ್ಲಿಸೋದಕ್ಕೆ ಯಾವುದೇ ಕಾರಣ ಇಲ್ಲ’ ಎಂಬುದಾಗಿ ಅಭಿಪ್ರಾಯ ಪಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ಕಂಡುಬರುವ ಡೆಮೋಗ್ರಾಫಿಕ್ ಪ್ರೊಫೈಲ್ ಅಥವಾ ಜನಸಂಖ್ಯಾ ಪ್ರೊಫೈಲ್ ಈ ಚಿತ್ರ ಪ್ರದರ್ಶನಗೊಳ್ಳುತ್ತಿರುವ ದೇಶದ ಇತರೆ ಭಾಗಗಳಲ್ಲಿ ಕೂಡ ಇದೆ. ಹಾಗಾಗಿ ಕೇವಲ ಪಶ್ಚಿಮ ಬಂಗಾಳದಲ್ಲಿ ವಿನಾಕಾರಣ ಈ ಸಿನಿಮಾವನ್ನ ನಿಷೇಧಿಸುವ ಹಾಗಿಲ್ಲ. ಜೊತೆಗೆ ಚಿತ್ರದಲ್ಲಿ ತೋರಿಸಿರುವ ಸಿನಿಮೀಯ ಮೌಲ್ಯಕ್ಕೂ ಜನಸಂಖ್ಯಾ ಪ್ರೊಫೈಲ್ ಗೂ ಯಾವುದೇ ಸಂಬಂಧ ಇಲ್ಲ. ಅದು ಕೆಟ್ಟದ್ದಾಗಿರಲಿ ಅಥವಾ ಒಳ್ಳೆದಾಗಿರಲಿ ಸಿನಿಮಾ ನಿಷೇಧ ಮಾಡುವ ಹಕ್ಕಿಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ.

ವಿಚಾರಣೆ ಬಳಿಕ ಸಿನಿಮಾ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಬೇಕಾಗಿ ಸುಪ್ರೀಮ್ ಕೋರ್ಟ್ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸರಕಾರಗಳಿಗೆ ನೊಟೀಸ್ ಜಾರಿ ಮಾಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನ ಮೇ 17ಕ್ಕೆ ಮುಂದೂಡಲಾಗಿದೆ.

ಇದಕ್ಕೂ ಮುನ್ನ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಸಾರ್ವಜನಿಕ ವೀಕ್ಷಣೆಗೆ ಪ್ರಮಾಣೀಕರಿಸಿದ ಚಲನಚಿತ್ರವನ್ನು ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಚಲನಚಿತ್ರ ಪ್ರದರ್ಶನವನ್ನು ನಿಲ್ಲಿಸಲು ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಚಲನಚಿತ್ರ ನಿರ್ಮಾಪಕರು ಸುಪ್ರೀಮ್ ಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದರು.

ಇನ್ನು ನಿರ್ದಿಷ್ಟವಾಗಿ ತಮಿಳುನಾಡಿಗೆ ಸಂಬಂಧಿಸಿದಂತೆ, ರಾಜ್ಯದ ಅಧಿಕಾರಿಗಳು ಅನೌಪಚಾರಿಕ ಸಂದೇಶ ಕಳುಹಿಸಿದ ನಂತರ ರಾಜ್ಯದ ಪ್ರದರ್ಶಕರು ಚಲನಚಿತ್ರವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿತ್ತು.

ಅಂತಹ ಯಾವುದೇ ನಿಷೇಧವು ವಾಕ್ ಸ್ವಾತಂತ್ರ್ಯದಲ್ಲಿ ತೊಡಗಿಸಿಕೊಳ್ಳಲು ಭಾರತದ ಸಂವಿಧಾನದ 19(1)(ಎ) ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕಿನ ಮೇಲೆ ಅಸಮಂಜಸವಾದ ನಿರ್ಬಂಧವನ್ನು ರೂಪಿಸುತ್ತದೆ. ಅರ್ಜಿದಾರರ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಹತ್ತಿಕ್ಕುವುದು, ಅದೂ ಕೂಡ ಕಾನೂನು ಮತ್ತು ಸುವ್ಯವಸ್ಥೆಯ ಆಧಾರರಹಿತ ಪರಿಗಣನೆಗಳ ಭಯದಿಂದ ಸಾಂವಿಧಾನಿಕ ಯೋಜನೆಯಡಿ ಪರಿಶೀಲನೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

-masthmagaa.com

Contact Us for Advertisement

Leave a Reply