ಕನ್ನಡದಿಂದ ಶುರು ಮಾಡಿ ವಿಶ್ವದೆಲ್ಲೆಡೆ ಕೀರ್ತಿಪತಾಕೆ ಹಾರಿಸಿದ ನಟನಟಿಯರು ಇವರೇ ನೋಡಿ!

masthmagaa.com:

ಕೆಜಿಎಫ್, ಕಾಂತಾರ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ಇವತ್ತು ಗ್ಲೋಬಲ್ ಲೆವೆಲ್ ಅಲ್ಲಿ ಸದ್ದು ಮಾಡ್ತಾ ಇದೆ. ನಮ್ಮ ಇಂಡಸ್ಟ್ರಿ ಚಿಕ್ಕದು ಅಂತ ಅಂದುಕೊಂಡೋರೆಲ್ಲ ನಮ್ಮ ಸಿನಿಮಾಗಳನ್ನ ನೋಡಿ ಈಗ ಬಾಯಿ ಮೇಲೆ ಬೆರಳು ಇಟ್ಕೊಳ್ಳೋ ರೀತಿ ಆಗಿದೆ. ಬರೀ ಒಳ್ಳೊಳ್ಳೆ ಸಿನಿಮಾಗಳನ್ನ ಅಷ್ಟೇ ಅಲ್ಲ ಪ್ರತಿಭಾವಂತ ಕಲಾವಿದರನ್ನ ತಂತ್ರಜ್ಞರನ್ನ ಕನ್ನಡ ಚಿತ್ರರಂಗ ಭಾರತೀಯ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟಿದೆ.ಅದರಲ್ಲಿ ಕೆಲವರು ಹಾಲಿವುಡ್ ಸಿನಿಮಾಗಳಲ್ಲೂ ಹೆಸರು ಮಾಡಿದ್ದಾರೆ. ಈ ವರದಿಯಲ್ಲಿ ಕನ್ನಡ ಚಿತ್ರರಂಗದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟನೆಯ ಮೂಲಕ ಹೆಸರು ಮಾಡಿರುವ ತಮ್ಮದೇ ಛಾಪು ಮೂಡಿಸಿರುವ ಟಾಪ್ 10 ಕಲಾವಿದರ ಬಗ್ಗೆ ಮಾಹಿತಿ ಇಲ್ಲಿದೆ.

1. ದೀಪಿಕಾ ಪಡುಕೋಣೆ : ಬಾಲಿವುಡ್‌ನಲ್ಲಿ ಸದ್ಯ ಆಕ್ಟೀವ್‌ ಇರುವ ದೀಪಿಕಾ ಪಡುಕೋಣೆ ಮೊದಲು ತಮ್ಮ ಜರ್ನಿಯನ್ನ ಶುರು ಮಾಡಿದ್ದು ಕನ್ನಡ ಸಿನಿಮಾದ ಮೂಲಕ. ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಪುಡುಕೋಣೆ ಕೂಡ ಒಬ್ಬರು. 2006ರಲ್ಲಿ ಬಿಡುಗಡೆ ಆದ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯದ “ಐಶ್ವರ್ಯ” ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಈಗ ಬಾಲಿವುಡ್‌ನ ವುಮೆನ್‌ ಸೂಪರ್‌ ಸ್ಟಾರ್‌ಗಳ ಪಟ್ಟಿಯಲ್ಲಿ ಮೂಂಚೂಣಿಯಲ್ಲಿದ್ದಾರೆ. ಹಾಲಿವುಡ್‌ ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಆದ್ರೆ ಇದು ವರೆಗೂ ಕನ್ನಡದಲ್ಲಿ ಅಭಿನಯಿಸಿದ “ಐಶ್ವರ್ಯ” ಸಿನಿಮಾವೇ ನನ್ನ ಮೊದಲ ಸಿನಿಮಾ ಅಂತ ಅವರು ಎಲ್ಲೂ ಹೇಳಿಕೊಂಡಿಲ್ಲ ಅನ್ನೋದು ವಿಪರ್ಯಾಸ.

2. ರಶ್ಮಿಕಾ ಮಂದಣ್ಣ: ತಮಗೆ ತಾವೇ ನ್ಯಾಷನಲ್‌ ಕ್ರಶ್‌ ಅಂತ ಬಿಂಬಿಸಿಕೊಳ್ಳುವ ರಶ್ಮಿಕಾ ಮಂದಣ್ಣ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. 2016ರಲ್ಲಿ ರಿಲೀಸ್‌ ಆದ ಕನ್ನಡದ ಕಿರಿಕ್‌ ಪಾರ್ಟಿ ಚಿತ್ರದಿಂದ ತಮ್ಮ ಸಿನಿಮಾ ಜರ್ನಿಯನ್ನ ಶುರು ಮಾಡಿದ್ದ ಇವರು ಈಗ ತೆಲುಗು, ತಮಿಳು, ಮತ್ತು ಹಿಂದಿ ಸಿನಿಮಾಗಳಲ್ಲೂ ಮಿಂಚ್ತಾ ಇದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮಗೆ ಮೊದಲು ಅವಕಾಶ ಕೊಟ್ಟ ನಿರ್ಮಾಣ ಸಂಸ್ಥೆಯಾದ ಪರಮ್‌ವಾ ಸ್ಟೂಡಿಯೋಸ್‌ ಹೆಸರನ್ನೂ ಹೇಳದೇ ಕೈ ಸನ್ನೆ ಮಾಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ರು. ಕನ್ನಡ ಸಿನಿಮಾದಿಂದ ಗ್ಲೋಬಲ್‌ ಲೆವೆಲ್‌ಗೆ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ ಅವರಿಗೆ ಸದ್ಯಕ್ಕೆ ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಬರತ್ತೆ.

3. ರಕುಲ್‌ ಪ್ರೀತ್‌ ಸಿಂಗ್‌ : ಹಿಂದಿ, ತೆಲುಗು, ತಮಿಳು ಭಾಷೆಯ ಚಿತ್ರಗಳಲ್ಲಿ ಬ್ಯುಸಿ ಇರುವ ರಕುಲ್‌ ಪ್ರೀತ್‌ ಸಿಂಗ್‌ ತಮ್ಮ ಸಿನಮಾ ಜರ್ನಿಯನ್ನ ಶುರು ಮಾಡಿದ್ದು ಕನ್ನಡ ಸಿನಿಮಾ ಮೂಲಕವೇ ಅಂದ್ರೆ ನೀವು ನಂಬಲೇಬೇಕು. 2009ರಲ್ಲಿ ರಿಲೀಸ್‌ ಆದ “ಗಿಲ್ಲಿ” ಎಂಬ ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಈ ಚಿತ್ರದಲ್ಲಿ ಜಗ್ಗೇಶ್‌ ಅವರ ಮಗ ಗುರುರಾಜ್‌ ಜಗ್ಗೇಶ್‌ ಅವರು ನಾಯಕರಾಗಿ ನಟಿಸಿದ್ದಾರೆ.

4. ಜಯ ಲಲಿತಾ : ರಾಜಕಾರಣಿಯಾಗಿ, ತಮಿಳುನಾಡಿನ ದಿಟ್ಟ ಮುಖ್ಯಮಂತ್ರಿಯಾಗಿ ಸೈ ಎನಿಸಿಕೊಂಡಿದ್ದ ಜಯ ಲಿಲಿತಾ ಅವರು ಚಿತ್ರರಂಗದಲ್ಲೂ ಕೂಡ ಒಳ್ಳೆ ಹೆಸರನ್ನ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲ್ಕೋಟೆಯಲ್ಲಿ ಜನಿಸಿದ ಜಯಲಲಿತಾ ಅವರು 1961 ರಲ್ಲಿ ರಿಲೀಸ್‌ ಆದ “ಶ್ರೀ ಶೈಲ ಮಹಾತ್ಮೆ” ಎಂಬ ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನನ್ನ ಕರ್ತವ್ಯ, ಚಿನ್ನದ ಗೊಂಬೆ ಹೀಗೆ ಹಲವಾರು ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಅಭಿನಯಿಸಿದ್ರು.

5. ನಿತ್ಯ ಮೆನನ್‌ : ಕನ್ನಡ ಚಿತ್ರರಂಗದಲ್ಲಿ ನಟಿ ಮಾತ್ರವಲ್ಲದೇ, ಗಾಯಕಿಯಾಗಿಯೂ ಒಳ್ಳೆ ಹೆಸರನ್ನ ಸಂಪಾದಿಸಿರುವ ನಿತ್ಯಮೆನನ್‌ ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಆದರೆ ಇವರು ತಮ್ಮ ಸಿನಿಮಾ ಜರ್ನಿಯನ್ನ ಶುರು ಮಾಡಿದ್ದು ಮಾತ್ರ 2006ರಲ್ಲಿ ರಿಲೀಸ್‌ ಆದ ಕನ್ನಡದ “7ʼo ಕ್ಲಾಕ್‌” ಎಂಬ ಚಿತ್ರದ ಮೂಲಕ. ನಂತರ ಜೋಶ್‌, ಮೈನಾ, ಕೋಟಿಗೊಬ್ಬ 2 ಹೀಗೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

6. ಸೌಂದರ್ಯ : ನಟಿ, ನಿರ್ಮಾಪಕಿ ಆಗಿ ಜನಮನ ಗೆದ್ದಿರುವ ಸೌಂದರ್ಯ ಈಗಲೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೇ ಉಳಿದಿದ್ದಾರೆ. ಕೋಲಾರದ ಮುಳಬಾಗಿಲು ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಜನಿಸಿದ ಸೌಂದರ್ಯ ಅವರು ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಅಭಿನಯಿಸಿ ಮಿಂಚಿದ್ದರು. 1992ರಲ್ಲಿ ರಿಲೀಸ್‌ ಆದ “ಗಂಧರ್ವ” ಎಂಬ ಕನ್ನಡ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಬಹುಭಾಷಾ ನಟಿಯಾಗಿ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡ್ರು.

7. ರೇಖಾ : 70ರ ದಶಕದ ಗ್ಲಾಮರ್‌ ಗೊಂಬೆ ರೇಖಾ ಹಿಂದಿ ಚಿತ್ರರಂಗದ ಫೇಮಸ್‌ ನಟಿ. ಇವರ ಹೆಸರನ್ನ ಯಾಕೆ ಹೇಳ್ತಾ ಇದಾರೆ ಅಂತ ಶಾಕ್‌ ಆಗಬಹುದು, ಆದ್ರೆ ಇವರೂ ಕೂಡ ಕನ್ನಡ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಬಂದಿದ್ದು. 1968ರಲ್ಲಿ ರಿಲೀಸ್‌ ಆದ ಡಾ. ರಾಜ್‌ಕುಮಾರ್‌ ಅಭಿನಯದ “ಆಪರೇಷನ್‌ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ 999″ ಎಂಬ ಕನ್ನಡ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

8. ಅರ್ಜುನ್‌ ಸರ್ಜಾ : ನಟ, ನಿರ್ಮಾಪಕ, ನಿರ್ದೇಶಕರಾಗಿಯೂ ಸಹ ಗುರುತಿಸಿಕೊಂಡಿರುವ ಅರ್ಜುನ್‌ ಸರ್ಜಾ ತೆಲುಗು, ಮಲಯಾಲಂ, ತಮಿಳು, ಹಿಂದಿ ಬಾಷೆಗಳಲ್ಲಿ ನಟಿಸಿದ ಬಹುಭಾಷಾ ನಟ. 1981ರಲ್ಲಿ ರಿಲೀಸ್‌ ಆದ ಕನ್ನಡದ ” ಸಿಂಹದ ಮರಿ ಸೈನ್ಯ” ಎಂಬ ಮಕ್ಕಳ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

9. ಸುದೀಪ್‌ : ಬಾದ್‌ ಷಾ ಕಿಚ್ಚ ಸುದೀಪ್‌ ಕೂಡ ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿದ ಅದ್ಭುತ ಕಲಾವಿದ. ಈಗ, ಸೈರಾ ನರಸಿಂಹ ರೆಡ್ಡಿ, ಬಾಹುಬಲಿ, ಆಕ್ಷನ್‌ 3ಡಿ, ಪುಲಿ, ಪೂಂಕ್‌, ರಣ್‌, ದಬಾಂಗ್‌ 3 ಎಂಬ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಸಿನಿಮಾ ಜರ್ನಿ ಸ್ಟಾರ್ಟ್‌ ಆಗಿದ್ದೂ ಕೂಡ ಕನ್ನಡ ಸಿನಿಮಾದ ಮೂಲಕವೇ. 1997ರಲ್ಲಿ ರಿಲೀಸ್‌ ಆದ ಕನ್ನಡದ “ತಾಯವ್ವ” ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. ನಂತರ ಪ್ರತ್ಯರ್ಥ, ಸ್ಪರ್ಶ, ಹುಚ್ಚ ಸಿನಿಮಾದಲ್ಲಿ ಅಭಿನಯಿಸಿ ಕಿಚ್ಚ ಅಂತಾನೇ ಫೇಮಸ್‌ ಆದ್ರು.

10. ಅನಂತ್‌ ನಾಗ್‌ : ನಟ ಮತ್ತು ರಾಜಕಾರಣಿಯಾಗಿ ಫೇಮಸ್‌ ಆಗಿರುವ ಅನಂತ್‌ನಾಗ್‌ ಹಿಂದಿ, ತೆಲುಗು, ತಮಿಳು, ಮರಾಠಿ, ಇಂಗ್ಲೀಷ್‌ ಭಾಷೆಗಳಲ್ಲಿ ನಟಿಸಿ ಬಹುಭಾಷಾ ನಟ ಅಂತ ಕರೆಸಿಕೊಂಡಿದ್ದಾರೆ. ಆದ್ರೆ ಇವರು ಮೂಲತಃ ಕನ್ನಡ ಚಿತ್ರರಂಗದವ್ರು. ಕನ್ನಡದ 1973ರಲ್ಲಿ ರಿಲೀಸ್‌ ಆದ “ಸಂಕಲ್ಪ” ಚಿತ್ರದ ಮೂಲಕವೇ ಇವರು ಸಿನಿಮಾ ರಂಗಕ್ಕೆ ಬಂದಿದ್ದು.

-masthmagaa.com

Contact Us for Advertisement

Leave a Reply