ಯುದ್ಧ ಶುರು ಮಾಡಿಲ್ಲ ಆದ್ರೆ ಮುಗಿಸುತ್ತೇವೆ! ಇಸ್ರೇಲ್‌ ಶಪಥ!

masthmagaa.com
ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಭೀಕರ ಯುದ್ಧ ಕಂಟಿನ್ಯೂ ಆಗಿದೆ. ಇದೀಗ ಇಸ್ರೇಲ್‌ ಮೇಲೆ ಹಠಾತ್‌ ದಾಳಿ ಮಾಡಿದ್ದ ಹಮಾಸ್‌ ಭಯೋತ್ಪಾದಕರನ್ನ ಮಟ್ಟ ಹಾಕಲು ಸುಮಾರು 3 ಲಕ್ಷ ಸೈನಿಕರ ತುಕಡಿ ನಿಯೋಜನೆ ಮಾಡಿರೋದಾಗಿ ಇಸ್ರೇಲ್‌ ಹೇಳಿದೆ. ಈ ಯುದ್ಧದಲ್ಲಿ ಇಸ್ರೇಲ್‌ ಸೇನೆಯ ನೆರವಿಗಾಗಿ 3 ಲಕ್ಷ ಮೀಸಲು ಪಡೆಗಳಿಗೆ ಕರೆ ನೀಡಲಾಗಿದ್ದು, 48 ಗಂಟೆಗಳಲ್ಲಿ ಭಾರಿ ಪ್ರಮಾಣದ ಸೈನಿಕರನ್ನ ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಈ ರೀತಿ ದೊಡ್ಡ ಮಟ್ಟದಲ್ಲಿ ಮೀಸಲು ಪಡೆಗಳನ್ನ ನಿಯೋಜಿಸಿದ್ದೇವೆ ಅಂತ ಇಸ್ರೇಲ್‌ ಸೇನಾ ವಕ್ತಾರ ಡೇನಿಯಲ್‌ ಹಗರಿ ತಿಳಿಸಿದ್ದಾರೆ. ಇನ್ನು ಈ ದಾಳಿ-ಪ್ರತಿದಾಳಿಯಲ್ಲಿ ಈವರೆಗೆ ಎರಡೂ ಕಡೆ ಸುಮಾರು 1600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್‌ ಒಂದ್ರಲ್ಲೇ ಹಮಾಸ್‌ ದಾಳಿಯಿಂದ 73 ಜನ ಸೈನಿಕರು ಸೇರಿದಂತೆ 700 ಮಂದಿ ಮೃತಪಟ್ಟಿದ್ದು, 2 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಅಂತ ಹಗರಿ ಮಾಹಿತಿ ನೀಡಿದ್ದಾರೆ. ಇತ್ತ ನಾವು ಈ ಯುದ್ಧವನ್ನ ಪ್ರಾರಂಭಿಸಿಲ್ಲ, ಆದ್ರೆ ನಾವೇ ಇದನ್ನ ಮುಗಿಸುತ್ತೇವೆ ಅಂತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಮತ್ತೊಮ್ಮೆ ಹಮಾಸ್‌ ಉಗ್ರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಸುಮ್ಮನಿದ್ದ ನಮ್ಮನ್ನ ಕೆರಳಿಸಿ ಹಮಾಸ್ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ತಕ್ಕ ಶಿಕ್ಷೆಯನ್ನ ಅವರು ಅನುಭವಿಸಲೇ ಬೇಕು. ʻನಮಗೆ ಈ ಯುದ್ಧ ಬೇಕಾಗಿಲ್ಲ. ಇದು ಅತ್ಯಂತ ಕ್ರೂರ ಮತ್ತು ಅನಾಗರಿಕ ಸಂಸ್ಕೃತಿಯಾಗಿದ್ದು, ನಮ್ಮ ಮೇಲೆ ಬಲವಂತವಾಗಿ ಹೇರಲಾಗಿದೆ. ಹೀಗಾಗಿ ನಾವು ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ನಾವೇ ಕೊನೆಗೊಳಿಸುತ್ತೇವೆʼ ಅಂತ ನೆತನ್ಯಾಹು ಶಪಥ ಮಾಡಿದ್ದಾರೆ. ಇದರ ಬೆನ್ನಲ್ಲೇ ಹಮಾಸ್‌ ಉಗ್ರರ ಅಡಗುದಾಣವಾಗಿರುವ ಗಾಜಾ ಪಟ್ಟಿ ಮೇಲೆ ಸಂಪೂರ್ಣವಾಗಿ ಮುತ್ತಿಗೆ ಹಾಕುವಂತೆ ಇಸ್ರೇಲ್‌ ರಕ್ಷಣಾ ಸಚಿವ ಯೋವ್‌ ಗ್ಯಾಲಟ್‌ ಆದೇಶ ಹೊರಡಿಸಿದ್ದಾರೆ. ಗಾಜಾ ಪಟ್ಟಿ ಮೇಲೆ ದಾಳಿ ತೀವ್ರಗೊಳಿಸಿರುವ ಇಸ್ರೇಲ್‌ ಸೇನೆ, ಉಗ್ರರನ್ನ ಸಂಪೂರ್ಣ ನಾಶ ಮಾಡ್ತೀವಿ ಅಂತ ಹೇಳಿದೆ. ಇದಕ್ಕೆ ರಿಯಾಕ್ಟ್‌ ಮಾಡಿರುವ ಹಮಾಸ್‌, ನಮ್ಮ ದಾಳಿಯನ್ನ ನಾವು ಮುಂದುವರಸುತ್ತೇವೆ. ಜೊತೆಗೆ ಯಾವುದೇ ವಾರ್ನಿಂಗ್‌ ಇಲ್ದೆ ನಮ್ಮ ಜನರನ್ನ ಟಾರ್ಗೆಟ್‌ ಮಾಡಿದ್ರೆ ಅಥ್ವಾ ಗಾಜಾ ಮೇಲೆ ಸ್ಪೋಟಕ ದಾಳಿ ಮಾಡಿದ್ರೆ, ಅದಕ್ಕೆ ಪ್ರತಿಯಾಗಿ ನಮ್ಮ ಬಳಿ ಒತ್ತೆಯಾಳಾಗಿ ಇಟ್ಕೊಂಡಿರುವ ಒಬ್ಬೊಬ್ಬರೇ ನಾಗರಿಕರನ್ನ ಹತ್ಯೆ ಮಾಡೋದಾಗಿ ಹಮಾಸ್‌ ಉಗ್ರರು ಬೆದರಿಕೆ ಹಾಕಿದ್ದಾರೆ.

ಇನ್ನೊಂದ್‌ ಕಡೆ ಇಸ್ರೇಲ್‌ನ ಫೇಮಸ್‌ ʻಫೌದಾʼ ವೆಬ್‌ ಸೀರಿಸ್‌ನ ನಟ ಲಿಯರ್‌ ರಾಜ್‌ ಅವರು ಯುದ್ಧದಲ್ಲಿ ಭಾಗವಹಿಸಲು ಇಸ್ರೇಲ್‌ ಸೇನೆ ಸೇರಿರೋದಾಗಿ ಹೇಳಿದ್ದಾರೆ. ಅತ್ತ ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸ್ಸಾದ್‌ ಭಾರತ ಫೇಸ್‌ ಮಾಡಿದ್ದ ಭಯೋತ್ಪಾದಕ ದಾಳಿಗಳನ್ನ ಉಲ್ಲೇಖಿಸಿ Xನಲ್ಲಿ ಪೋಸ್ಟ್‌ ಹಾಕಿದೆ. ನಮ್ಮ ಮೇಲೆ ಭಯೋತ್ಪಾದಕ ದಾಳಿಗಳು ಆಗೋವರೆಗೂ ಉಗ್ರರನ್ನ ಅರ್ಥ ಮಾಡಿಕೊಳ್ಳೋದು ಮನುಷ್ಯರಿಗೆ ಕಷ್ಟ. ಮುಂಬೈ, ಇಂಡಿಯಾ ಹೋಟೆಲ್‌ ಮತ್ತು ಚಬಾದ್‌ ಸೆಂಟರ್‌ ಮೇಲೆ ನಡೆದ ಉಗ್ರ ದಾಳಿಯನ್ನ ನೆನಪಿದೆಯಾ?. ಭಯೋತ್ಪಾದಕರು ರಕ್ತಹೀರುವ ಕ್ರೂರ ಪ್ರಾಣಿಗಳು ಅಂತ ಆಕ್ರೋಶ ವ್ಯಕ್ತಪಡಿಸಿದೆ. ಮತ್ತೊಂದ್‌ ಕಡೆ ಇಸ್ರೇಲ್‌- ಹಮಾಸ್‌ ಯುದ್ಧದಲ್ಲಿ ಇನ್ವಾಲ್ವ್‌ ಆಗದಂತೆ ಇರಾನ್‌ಗೆ ಅಮೆರಿಕ ವಾರ್ನ್‌ ಮಾಡಿದೆ. ಈ ಬಗ್ಗೆ ಮಾತಾಡಿರುವ ಅಮೆರಿಕ ಜಾಯಿಂಟ್‌ ಚೀಫ್‌ ಆಫ್‌ ಸ್ಟಾಫ್‌, ಜನರಲ್‌ ಚಾರ್ಲ್ಸ್‌ ಕ್ಯು ಬ್ರೌನ್‌, ನಾವು ಈ ಯುದ್ಧವನ್ನ ಹರಡೋಕೆ ಬಿಡೋದಿಲ್ಲ. ಹೀಗಾಗಿ ಇದ್ರಲ್ಲಿ ಇರಾನ್‌ ಭಾಗಿಯಾಗದಂತೆ ಸ್ಟ್ರಾಂಗ್‌ ಮೆಸೇಜ್‌ ರವಾನಿಸೋಕೆ ಬಯಸುತ್ತೇವೆ ಅಂತ ಹೇಳಿದ್ದಾರೆ. ಯಾಕಂದ್ರೆ ಇಸ್ರೇಲ್‌ ಮೇಲಿನ ಹಮಾಸ್‌ ದಾಳಿಯನ್ನ ಇರಾನ್‌ ಬೆಂಬಲಿಸಿದ್ದು, ಇದರ ಹಿಂದೆ ಇರಾನ್‌ ಕೈವಾಡವಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅತ್ತ ಇರಾನ್‌ನ ಸುಪ್ರೀಂ ಲೀಡರ್‌ ಅಲಿ ಖಮೇನಿ ಅವರು ಹಮಾಸ್‌ ಉಗ್ರ ಗುಂಪಿನ ಪರವಾಗಿ Xನಲ್ಲಿ ಪೋಸ್ಟ್‌ ಹಾಕಿದ್ದು, ಅದನ್ನ ರಿಮೂವ್‌ ಮಾಡಿರೋದಾಗಿ Xನ ಬಾಸ್‌ ಎಲಾನ್‌ ಮಸ್ಕ್‌ ಹೇಳಿದ್ದಾರೆ. ಸದ್ಯ ಆ ಟ್ವೀಟ್‌ ಹೈಡ್‌ ಆಗಿದ್ದು, Xನ ನಿಯಮ ಉಲ್ಲಂಘನೆಯಾಗಿದೆ ಅಂತ ತೋರಿಸ್ತಾ ಇದೆ. ಇದಕ್ಕೆ ರಿಯಾಕ್ಟ್‌ ಮಾಡಿರೋ ಮಸ್ಕ್‌, ಇರಾನ್‌ ಕೇವಲ ಹಮಾಸ್‌ಗೆ ಸಪೋರ್ಟ್‌ ಮಾಡ್ತಿಲ್ಲ. ಬದ್ಲಾಗಿ ಇಸ್ರೇಲ್‌ನ್ನೇ ನಾಶ ಮಾಡೋಕೆ ಹೊರಟಿರೋದು ಸ್ಪಷ್ಟವಾಗಿದೆ. ಆದ್ರೆ ಅದು ಎಂದಿಗೂ ಆಗೋದಿಲ್ಲ ಅಂತ ತಿರುಗೇಟು ನೀಡಿದ್ದಾರೆ. ಇತ್ತ ಯುದ್ಧ ಪೀಡಿತ ಪ್ಯಾಲಸ್ತೈನ್ ಪರವಾಗಿ ನಾವು ನಿಲ್ಲುತ್ತೇವೆ ಅಂತ ಸೌದಿ ಅರೇಬಿಯಾ ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಹೇಳಿದ್ದಾರೆ. ಪ್ಯಾಲಸ್ತೈನ್‌ ಜನರ ಶಾಂತಿಯುತ ಹಾಗೂ ಕಾನೂನುಬದ್ಧ ಜೀವನದ ಹಕ್ಕನ್ನ ಸಾಧಿಸಲು ನಾವು ಅವರ ಪರವಾಗಿ ಇದ್ದೇವೆ ಅಂತ ಸಲ್ಮಾನ್‌ ಹೇಳಿದ್ದಾರೆ.
ಇನ್ನೊಂದ್‌ ಕಡೆ ಹಮಾಸ್‌ ದಾಳಿ ಕುರಿತಂತೆ ಮೊದಲೇ ಈಜಿಪ್ಟ್‌ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಆದ್ರೆ ಅದನ್ನ ನೆತನ್ಯಾಹು ಸರ್ಕಾರ ನಿರ್ಲಕ್ಷ್ಯ ಮಾಡಿತ್ತು ಅಂತ ವರದಿಯಾಗಿದೆ. ಇದಕ್ಕೆ ರಿಯಾಕ್ಟ್‌ ಮಾಡಿರುವ ನೆತನ್ಯಾಹು ಅವರ ಕಚೇರಿ, ಇದು ಸಂಪೂರ್ಣ ಸುಳ್ಳು ಅಂತ ತಳ್ಳಿ ಹಾಕಿದೆ. ಹಮಾಸ್‌ ದಾಳಿಗೂ ಮೊದಲೇ ಈಜಿಪ್ಟ್‌ನಿಂದಾಗಲೀ ನಮಗೆ ಮೆಸೇಜ್‌ ಬಂದಿಲ್ಲ. ಅಥ್ವಾ ಈಜಿಪ್ಟ್‌ನ ಗುಪ್ತಚರ ಮುಖ್ಯಸ್ಥರನ್ನ ಡೈರಕ್ಟ್‌ ಅಥ್ವಾ ಇಂಡೈರೆಕ್ಟ್‌ ಆಗಿ ನೆತನ್ಯಾಹು ಅವರು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ. ಇದು ಸಂಪೂರ್ಣ ಫೇಕ್‌ ನ್ಯೂಸ್‌ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply