ದೇಶದಲ್ಲಿಂದು ಲಸಿಕೆ ಉತ್ಸವ! ಮೋದಿ ಹೇಳಿದ್ದೇನು?

masthmagaa.com:

ದೇಶದಲ್ಲಿ ಕೊರೋನಾ ಅಬ್ಬರದ ಓಟ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿದ್ದು, 839 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಂದು ದಿನದಲ್ಲಿ ಒಂದೂವರೆ ಲಕ್ಷ ಮಂದಿಗೆ ಸೋಂಕು ತಗುಲಿದ 2ನೇ ದೇಶವಾಗಿದೆ ಭಾರತ. ಈ ನಡುವೆ ಇವತ್ತಿಂದ ಇಂದಿನಿಂದ 4 ದಿನ ದೇಶದಲ್ಲಿ ಲಸಿಕೆ ಉತ್ಸವ ಶುರುವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ಜ್ಯೋತಿಬಾ ಫುಲೆಯವರ ಜನ್ಮದಿನವಾದ ಇಂದು ದೇಶದಲ್ಲಿ ಲಸಿಕೆ ಉತ್ಸವ ಶುರುವಾಗುತ್ತಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರವರೆಗೂ ನಡೆಯಲಿದೆ. ಇದು ಕೊರೋನಾ ವಿರುದ್ಧದ ಮತ್ತೊಂದು ದೊಡ್ಡ ಯುದ್ಧ ಅಂತ ಬಣ್ಣಿಸಿದ್ದಾರೆ. ಜೊತೆಗೆ ಪ್ರತಿಯೊಬ್ಬರೂ, ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದ ಯಾರಾದರೊಬ್ಬರಿಗೆ ಲಸಿಕೆ ಹಾಕಿಸಿ, ಪ್ರತಿಯೊಬ್ಬರು ಒಬ್ಬ ಕೊರೋನಾ ರೋಗಿಯ ಚಿಕಿತ್ಸೆಗೆ ಸಹಕರಿಸಿ, ಪ್ರತಿಯೊಬ್ಬರು ಕೊರೋನಾ ಬಗ್ಗೆ ಜಾಗೃತಿ ಮೂಡಿಸಿ ಕನಿಷ್ಠ ಒಂದು ಜೀವ ಉಳಿಸಿ, ಮತ್ತು ಯಾರಾದರೊಬ್ಬರಿಗೆ ಕೊರೋನಾ ಬಂದ್ರೆ ಜನರೇ ಮೈಕ್ರೋ ಕಂಟೋನ್ಮೆಂಟ್ ಝೋನ್ ರಚಿಸಿಕೊಳ್ಳಬೇಕು ಅಂತ ನಾಲ್ಕು ಅಂಶಗಳನ್ನು ಕೂಡ ಜನರ ಮುಂದಿಟ್ಟಿದ್ದಾರೆ. ಒಂದ್ಕಡೆ ದೇಶದಲ್ಲಿ ಲಸಿಕೆ ಉತ್ಸವ ನಡೀತಾ ಇದ್ರೆ, ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಎದುರಾಗಿದೆ. ಮಹಾರಾಷ್ಟ್ರ, ಪಂಜಾಬ್, ದೆಹಲಿ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಲಸಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿವೆ. ಭಾರತದಲ್ಲಿ 85 ದಿನಗಳಲ್ಲಿ 10 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಅಮೆರಿಕ 10 ಕೋಟಿ ಜನರಿಗೆ ಲಸಿಕೆ ಹಾಕಲು 89 ದಿನ ತಗೊಂಡಿದ್ರೆ, ಚೀನಾ 102 ದಿನಗಳನ್ನು ತೆಗೆದುಕೊಂಡಿತ್ತು.

-masthmagaa.com

Contact Us for Advertisement

Leave a Reply