ಸೌದಿ ಯುವರಾಜ MBSಗೆ ಶಾಕ್‌ ನೀಡಿದ ಅಮೆರಿಕ!

masthmagaa.com:

ಸೌದಿ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್​​ಗೆ ಅಮೆರಿಕ ದೊಡ್ಡ ಶಾಕ್ ನೀಡಿದೆ. ಬೈಡೆನ್ ಸರ್ಕಾರ ಟ್ರಂಪ್ ಸರ್ಕಾರದ ರೀತಿಯಲ್ಲಿ ಸೌದಿ ಬಗ್ಗೆ ಸಾಫ್ಟ್ ಇರೋದಿಲ್ಲ ಅನ್ನೋದು ಈ ಮೊದಲೇ ಸ್ಪಷ್ಟ ಇತ್ತು. ಆದ್ರೆ ಈಗ ಬೈಡೆನ್ ಸರ್ಕಾರ ದಿನ ದಿನಕ್ಕೂ ಸೌದಿ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್​ಗೆ ಜೀವನ ಕಷ್ಟ ಮಾಡೋದು ಗ್ಯಾರಂಟಿ ಅನ್ನೋ ವಾತಾವರಣ ಸೃಷ್ಟಿಯಾಗಿದೆ. ಇದುವರೆಗೂ ಕಿಂಗ್ ಸಲ್ಮಾನ್ ಇದ್ದರೂ ಎಲ್ಲವನ್ನೂ ಯುವರಾಜ ಮಹಮ್ಮದ್​ ಬಿನ್ ಸಲ್ಮಾನೇ ನೋಡಿಕೊಳ್ಳುತ್ತಿದ್ದರು. ಪ್ರಮುಖ ನಿರ್ಧಾರಗಳನ್ನ ತಾವೇ ತೆಗೆದುಕೊಳ್ತಿದ್ರು.  ಟ್ರಂಪ್ ಕೂಡ ಯುವರಾಜನಿಗೆ ಕ್ಲೋಸ್ ಇದ್ರು. ಟ್ರಂಪ್ ಅಳಿಯ ಜೇರಡ್ ಕುಶ್ನರ್ ಅಂತೂ ಯುವರಾಜ ಎಂಬಿಎಸ್​ ಜೊತೆ ಫ್ರೆಂಡೇ ಆಗಿ ಹೋಗಿದ್ರು. ಅಮೆರಿಕ-ಸೌದಿ ಸಂಬಂಧ ವಿಚಾರದಲ್ಲಿ ಏನೇ ಇದ್ರೂ ರಾಜನಿಗೆ ಹೇಳದೆ ಇವರೇ ಮಾತಾಡಿಕೊಂಡು ಡಿಸೈಡ್ ಮಾಡ್ಕೋತಿದ್ರು. ಹೀಗಾಗಿ ಯುವರಾಜ ಆಡಿದ್ದೇ ಆಟ ಮಾಡಿದ್ದೇ ಪಾಠ ಅನ್ನೋ ರೀತಿ ಆಗಿತ್ತು. ಪತ್ರಕರ್ತ ಜಮಾಲ್ ಕಶೋಗಿ ಹತ್ಯೆ, ಯೆಮೆನ್​ನಲ್ಲಿ ಸೌದಿ ಮಾಡ್ತಿರೋ ಯುದ್ಧ ಎಲ್ಲದಕ್ಕೂ ಟ್ರಂಪ್ ಮೌನ ಸಮ್ಮತಿ ನೀಡಿದ್ದರು.

ಸಲ್ಮಾನ್ ನಾಗಾಲೋಟಕ್ಕೆ ಬ್ರೇಕ್‌ ಹಾಕಿದ  ಬೈಡೆನ್ ಹೌದು… ಬೈಡೆನ್ ಅಧಿಕಾರಕ್ಕೆ ಬಂದ ಕೂಡಲೇ ಯುವರಾಜ ಎಂಬಿಎಸ್‌ಗೆ ಅವಮಾನ ಮಾಡಿದ್ದಾರೆ. ಇನ್ಮುಂದೆ ಸೌದಿಯ ಜೊತೆ ಅಮೆರಿಕ ಸರ್ಕಾರದ ಮಾತುಕತೆ ನಡೆಯೋದಿದ್ರೆ ಅದು ನೇರವಾಗಿ 85 ವರ್ಷದ ರಾಜ ಸಲ್ಮಾನ್ ಜೊತೆ ನಡೆಯುತ್ತೆ. ಯುವರಾಜನ ಜೊತೆ ಅಲ್ಲ ಅಂತ ಹೇಳಿದೆ. ಈ ಮೂಲಕ ಯುವರಾಜ ಎಂಬಿಎಸ್​ಗೇ ನೀವಿನ್ನೂ ಬಚ್ಚಾ ಅಂದಿದೆ ಅಮೆರಿಕ. ಹಾಗೇ ಸೌದಿ ಯುವರಾಜ ಏನಾದ್ರೂ ಮಾತಾಡೋದಿದ್ರೆ ನೇರವಾಗಿ ಬೈಡೆನ್ ಜೊತೆ ಮಾತಾಡಕ್ಕಾಗಲ್ಲ. ಬದಲಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಜೊತೆ ಮಾತಾಡಬೇಕು ಅಂತ ಕೂಡ ಅಮೆರಿಕ ಹೇಳಿದೆ. ಯಾಕಂದ್ರೆ ಸೌದಿ ಯುವರಾಜ ಕೂಡ ಆ ದೇಶದ ರಕ್ಷಣಾ ಸಚಿವನ ಸ್ಥಾನ ಹೊತ್ತಿದ್ದಾರೆ. ಹೀಗಾಗಿ ಸಮಾನರು ಮಾತ್ರ ಮಾತಾಡಬೇಕು. ಬೈಡೆನ್ ಮುಂದೆ ಯುವರಾಜ ಜೂನಿಯರ್ ಅಂತಾ ಅಮೆರಿಕ ಖಾರವಾಗಿ ಹೇಳಿದೆ. ಇಷ್ಟು ಮಾತ್ರವಲ್ಲದೇ..,

ಯುವರಾಜನ ಜಾತಕ ಕೆದಕಲಿದೆ ಅಮೆರಿಕ ….ಮೊದಲನೇದಾಗಿ ಪತ್ರಕರ್ತ ಜಮಾಲ್ ಕಶೋಗಿ ಹತ್ಯೆ ಪ್ರಕರಣದ ಸೀಕ್ರೆಟ್ ಸಿಐಎ ಫೈಲ್​ಗಳನ್ನ ಬಹಿರಂಗ ಪಡಿಸುತ್ತೇವೆ ಅಂತ ಹೇಳಿದೆ ಬೈಡೆನ್ ಸರ್ಕಾರ. ಹಾಗೇ ಯೆಮೆನ್​​ನಲ್ಲಿ ಸೌದಿ ನಡೆಸುತ್ತಿರೋ ಯುದ್ಧವನ್ನ ಈ ಕೂಡಲೇ ನಿಲ್ಲಿಸುವಂತೆ ತಾಕೀತು ಮಾಡಿದೆ. ಇದೇ ಕಾರಣಕ್ಕೆ ಸೌದಿ ಆಧುನಿಕ ಶಸ್ತ್ರಾಸ್ತ್ರಗಳ ಮಾರಾಟವನ್ನ ತಡೆಹಿಡಿಯಲಾಗಿದೆ. ಟ್ರಂಪ್ ಅವಧಿಯಲ್ಲಿ ಅಮೆರಿಕದ ಅತ್ಯಾಧುನಿಕ ಯುದ್ಧೋಪಕರಣಗಳನ್ನ ಸೌದಿ ಮಾರಲು ಒಪ್ಪಿಗೆ ಕೊಡಲಾಗಿತ್ತು. ನಾವು ಕೊಟ್ಟಿಲ್ಲ ಅಂದ್ರೆ ಲಕ್ಷಾಂತರ ಕೋಟಿಗಳ ಈ ಡೀಲ್ ರಷ್ಯಾ, ಚೀನಾ ಪಾಲಾಗುತ್ತೆ ಅಂತ ಟ್ರಂಪ್ ಸಮರ್ಥಿಸಿಕೊಂಡಿದ್ರು. ಆದ್ರೆ ಬೈಡೆನ್ ಬರ್ತಿದ್ದಂತೆ ಈ ಡೀಲ್ಗೆ ಬ್ರೇಕ್ ಹಾಕಿದ್ದಾರೆ. ಜೊತೆಗೆ ಯುವರಾಜನ ಆಡಳಿತ ಶೈಲಿ ಕರುಣೆ ಇಲ್ಲದ ಹಾಗೂ ಅಬ್ಬರದಿಂದ ಕೂಡಿದೆ ಅಂತಾ ಅಮೆರಿಕ ಭಾವಿಸಿದೆ. ಈ ಕೂಡಲೇ ಸೌದಿ ಅರೇಬಿಯಾ ಮಾನವ ಹಕ್ಕುಗಳ ವಿಚಾರದಲ್ಲಿ ತನ್ನನ್ನ ತಾನು ಸುಧಾರಿಸಿಕೊಳ್ಳಬೇಕು ಅಂತಾ ತಾಕೀತು ಮಾಡಿದೆ. ಈ ಮೂಲಕ ಟ್ರಂಪ್ ಥರ ನಾನು ‘ಹೌದಪ್ಪ’ ಪ್ರೆಸಿಡೆಂಟ್ ಆಗಿ ಇರಲ್ಲ. ಸ್ಪೆಷಲ್ ಟ್ರೀಟ್​ಮೆಂಟ್ ಸಿಗಲ್ಲ ಅಂತಾ ಸೌದಿಯ ಪವರ್​ಫುಲ್ ಯುವರಾಜನಿಗೆ ಸಂದೇಶ ರವಾನಿಸಲಾಗಿದೆ. ಅಮೆರಿಕದ ಈ ಬದಲಾದ ಧೋರಣೆಯಿಂದ ಹೌಹಾರಿರೋ ಸೌದಿ ಯುವರಾಜ ತಮ್ಮ ನೀತಿಯಲ್ಲಿ ಇತ್ತೀಚೆಗೆ ಒಂದುಷ್ಟು ಬದಲಾವಣೆಗಳನ್ನ ಕೂಡ ಮಾಡಿಕೊಳ್ತಿದಾರೆ. 6 ವರ್ಷ ಜೈಲು ಶಿಕ್ಷೆ ಕೊಟ್ಟು ಜೈಲಿಗೆ ಅಟ್ಟಲಾಗಿದ್ದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಲೋಜೈನ್ ಹಾಥ್ಲೌಲ್​ರನ್ನ ಮೂರೇ ವರ್ಷಕ್ಕೆ ಬಿಡುಗಡೆ ಮಾಡಿದ್ದು ಇದಕ್ಕೆ ಒಂದು ಎಕ್ಸಾಂಪಲ್.

-masthmagaa.com

Contact Us for Advertisement

Leave a Reply