ನಾಳೆ ಅಪ್ಪು 11ನೇ ದಿನದ ಕಾರ್ಯ: ಸಿದ್ಧತೆ ಹೇಗಿದೆ ಗೊತ್ತಾ?

masthmagaa.com:

ನಾಳೆಗೆ ಕನ್ನಡ ಚಿತ್ರರಂಗದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಚಿರ ನಿದ್ರೆಗೆ ಜಾರಿ 11 ನೇ ದಿನ. ಹೀಗಾಗಿ ನಾಳೆ ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಕಂಠೀರವ ಸ್ಟುಡಿಯೋ ಹಾಗೂ ಪುನೀತ್‌ ನಿವಾಸದಲ್ಲಿ ಮಾಡಬೇಕಾದ ಎಲ್ಲಾ ಕಾರ್ಯಗಳ ಬಗ್ಗೆ ಈಗಾಗ್ಲೆ ರಾಜ್‌ ಕುಟುಂಬ ನಿರ್ಧಾರ ತೆಗೆದುಕೊಂಡಿದೆ. ಹಾಗೆ ನಾಳೆಯ ಪುಣ್ಯತಿಥಿಯೊಂದಿಗೆ ಸುಮಾರು 2 ಸಾವಿರ ಜನರಿಗೆ ಅನ್ನ ಸಂತರ್ಪಣೆ ಮಾಡಲು ನಿರ್ಧರಿಸಿದ್ದಾರೆ. ಮತ್ತೊಂದ್ಕಡೆ ರಾಜ್ಯದ ಎಲ್ಲಾ ಥಿಯೇಟರ್​​ಗಳಲ್ಲಿ ಗೀತನಮನ, ಚಿತ್ರನಮನಕ್ಕೆ ಸಿದ್ಧತೆ ನಡೆಸಲಾಗಿದೆ. ಇನ್ನು ಇವತ್ತು ಕೂಡ ಥಿಯೇಟರ್​ಗಳಲ್ಲಿ ಪುನೀತ್​​ಗೆ ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ಚಿತ್ರ ಪ್ರದರ್ಶಕರು ನಮನ ಸಲ್ಲಿಸಿದ್ದಾರೆ.

ಇನ್ನು ಅಪ್ಪು ಬೆಳೆದು ಬಂದ ಹಾದಿ, ಸಮಾಜ ಮತ್ತು ಚಿತ್ರರಂಗಕ್ಕೆ ಮಾಡಿದ ಸೇವೆಯನ್ನು ನೆನೆಯಲು ಒಂದು ಹಾಡು ಮೂಡಿ ಬಂದಿದೆ. ಅದನ್ನ ಸಾಹಿತಿ ನಾಗೇಂದ್ರ ಪ್ರಸಾದ್ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ.

ಇನ್ನು ಇವತ್ತು ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ದೀಪ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇವತ್ತು ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿ ಬಳಿ ರವಿಚಂದ್ರನ್‌ ಮಗ ವಿಕ್ರಮ್‌ ರವಿಚಂದ್ರನ್‌ ಆಗಮಿಸಿ ನಮನ ಸಲ್ಲಿಸಿದ್ರು. ಈ ವೇಳೆ ಅಪ್ಪು ಜೊತೆಗಿನ ನೆನಪುಗಳನ್ನ ಸ್ಮರಿಸಿದ್ರು. ಹಾಗೆ ತಮ್ಮ ಒಂದು ಸಿನಿಮಾಗೆ ಅವರು ಹಾಡಬೇಕಿತ್ತು ಆದ್ರೆ ಸಾಧ್ಯ ಆಗಿಲ್ಲ. ಅವರು ಇಲ್ಲಾ ಅನ್ನೋ ಶಾಕ್‌ನಿಂದ ಇನ್ನು ಹೊರ ಬರಲು ಆಗ್ತ ಇಲ್ಲ ಅಂತ ಭಾವುಕರಾದ್ರು.

ಇನ್ನು ಇವತ್ತು ವೀಕೆಂಡ್‌ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಪುನೀತ್‌ ರಾಜ್‌ಕುಮಾರ್‌ ಸಮಾಧಿ ದರ್ಶನಕ್ಕೆ ಜನ ಬಂದಿದ್ರು. ಇಂದಿಗೆ ಪುನೀತ್‌ ನಮ್ಮೊಂದಿಗೆ ಇಲ್ಲದೆ 10ನೇ ದಿನ ಆದ್ರು ಅಭಿಮಾನಿಗಳು ಪುನೀತ್‌ ದರ್ಶನ ಪಡೆಯಲು ಕಿಲೋ ಮೀಟರ್‌ಗಟ್ಟಲೆ ಉದ್ದದ ಕ್ಯೂ ನಿಂತಿದ್ದು ನೋಡಬಹುದಿತ್ತು. ಕಂಠೀರವ ಸ್ಟುಡಿಯೋ ಸುತ್ತಮುತ್ತ ಬಿಗಿ ಭದ್ರತೆಯನ್ನೂ ಏರ್ಪಡಿಸಲಾಗಿದ್ದು, ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರತಿದಿನ ಅಪ್ಪು ಸಮಾಧಿ ನೋಡಲು ಸಾವಿರಾರು ಅಭಿಮಾನಿಗಳು ಬರ್ತಾ ಇದ್ದಾರೆ. ಕೆಲವರಿಗೆ ಅಪ್ಪು ದೇವರ ಸಮಾನ. ಹಾಗಾಗಿ ಕೆಲವರು ಅಪ್ಪು ಸಮಾಧಿ ಎದುರಲ್ಲೆ ಮದುವೆ ಆಗ್ಬೇಕು ಅನ್ನೋ ಆಸೆ ಕೂಡ ಇದೆ. ಆದ್ರೆ ಕಾನೂನಿನ ಪ್ರಕಾರ ಕೆಲವು ನಿಯಮಗಳು ಇರುತ್ತವೆ. ಕೆಲವರು ಅಪ್ರಾಪ್ತರೆಲ್ಲಾ ಬಂದು ಮದ್ವೆಯಾದ್ರೆ ಗಲಾಟೆಯಾಗೋ ಸಾಧ್ಯತೆ ಇರುತ್ತೆ. ಅದೇ ರೀತಿ ಮದುವೆ ಆಗೋದು ಟಿವಿಯಲ್ಲಿ ಬರೋದ್ರಿಂದ ತುಂಬಾ ಜನ ಅದೇ ರೀತಿ ಸಮಾಧಿ ಬಳಿ ಮದ್ವೆ ಆಗ್ತೀವಿ ಅಂತ ಬರ್ತಾರೆ. ಹೀಗಾಗಿ ಅಂಥವರು ತಮ್ಮ ತಂದೆ-ತಾಯಿಯನ್ನೂ ಕರ್ಕೊಂಡು ಬಂದ್ರೆ ಅನುಮತಿ ಕೊಡಬಹುದು. ಇಲ್ಲವಾದ್ರೆ ಕೊಡಕ್ಕಾಗಲ್ಲ ಅಂತ ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದಾರೆ.

ರಾಮನಗರದ ಚನ್ನಪಟ್ಟಣದ ಎಲೆಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಪ್ಪು ಅಭಿಮಾನಿ ಮನೆಗೆ ರಾಘವೇಂದ್ರ ರಾಜ್​ಕುಮಾರ್ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. ಪುನೀತ್‌ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ 25 ವರ್ಷದ ಅಭಿಮಾನಿ ವೆಂಕಟೇಶ್‌ ಇದೇ 4ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಅಪ್ಪುರಂತೆಯೇ ವೆಂಕಟೇಶ್ ಕಣ್ಣುಗಳನ್ನು ಕೂಡ ದಾನ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply