ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ಗೆ ಎದುರಾಯ್ತು ತೆರಿಗೆ ಸಂಕಷ್ಟ! ಏನಿದು?

masthmagaa.com:

ಈಗಾಗಲೇ ಆರ್ಥಿಕ ಬಿಕ್ಕಟ್ಟು, ವಲಸೆ ಸೇರಿದಂತೆ ಹಲವಾರು ಸಮಸ್ಯೆಗಳನ್ನ ಎದುರಿಸ್ತಿರೋ ಬ್ರಿಟನ್‌ಗೆ ಇದೀಗ ಮತ್ತೆ ರಾಜಕೀಯ ಪರಿಸ್ಥಿತಿ ಹದಗೆಡೋ ಲಕ್ಷಣ ಕಾಣಿಸ್ತಿದೆ. ಇದೀಗ ಹಾಲಿ ಪ್ರಧಾನಿ ರಿಷಿ ಸುನಾಕ್‌ ತಮ್ಮ ಪಕ್ಷದ ವಿರೋಧವನ್ನ ಎದುರಿಸ್ತಿದ್ದು ಮತ್ತೆ ಟ್ಯಾಕ್ಸ್‌ ವಿಚಾರಕ್ಕೆ ರಿಷಿ ತಲೆದಂಡವಾಗಲಿದೆಯಾ ಅನ್ನೋ ಅನುಮಾನ ಮೂಡಿದೆ. ರಿಷಿ ನೇತೃತ್ವದ ಬ್ರಿಟನ್‌ ಸರ್ಕಾರ ಇತ್ತೀಚಿನ ಬಜೆಟ್‌ನಲ್ಲಿ ಜನರ ಮೇಲೆ ಅತಿಹೆಚ್ಚು ಟ್ಯಾಕ್ಸ್‌ ಹಾಕೋಕೆ ಪ್ಲ್ಯಾನ್‌ ಹಾಕಿದೆ. ಹೀಗಾಗಿ ಇದರ ವಿರುದ್ದ ಪಕ್ಷದ ಸದಸ್ಯರೇ ಧ್ವನಿ ಎತ್ತಿದ್ದಾರೆ. ಪಕ್ಷದ ಒಳಗೆ ಸದಸ್ಯರು ಬಣಗಳನ್ನ ಸೃಷ್ಟಿಸಿ ಸುನಾಕ್‌ ಮೇಲೆ ಒತ್ತಡ ಹಾಕಿದಾರೆ. ಇನ್ನು ಈ ಹೊಸ ತೆರಿಗೆ ಯೋಜನೆ ಕುರಿತು 40 ಕನ್ಸರ್ವೇಟಿವ್‌ ಪಕ್ಷದ ಶಾಸಕರ ಬಣ ‘Conservative Way Forward’ ಅಲ್ಲಿನ ಹಣಕಾಸು ಮಂತ್ರಿ ಜೆರೆಮಿ ಹಂಟ್‌ಗೆ ಪತ್ರ ಬರೆದಿದೆ. ಅದ್ರಲ್ಲಿ ಈ ತೆರಿಗೆ ಯೋಜನೆ ಎರಡನೇ ವಿಶ್ವಯುದ್ದದ ನಂತರದ ಗರಿಷ್ಟ ತೆರಿಗೆಯಾಗಿದೆ ಅಂತ ಆರೋಪಿಸಿದ್ದಾರೆ. ಇತ್ತ ಪಕ್ಷದ ಇನ್ನೊಂದು ಬಣ ಕನ್ಸರ್ವೇಟಿವ್‌ ಡೆಮೊಕ್ರೇಟಿಕ್‌ ಆರ್ಗನೈಸೇಶನ್‌ನ (CDO) ಸದಸ್ಯರು ಕೂಡ ಕನ್ಸರ್ವೇಟಿವ್‌ ಪಕ್ಷದ ಹಿಡಿತವನ್ನ ಸಾಧಿಸೋಕೆ ಪ್ರಯತ್ನ ಮಾಡ್ತಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ಅನೇಕ ಶಾಸಕರು ಕನ್ಸರ್ವೇಟಿವ್‌ ಪಕ್ಷದ ಮೇಲೆ ನಂಬಿಕೆಯನ್ನ ಈಗಾಗಲೇ ಕಳೆದುಕೊಂಡಿದ್ದಾರೆ ಅಂತ ಮಾಜಿ ಇಂಟಿರಿಯರ್‌ ಮಿನಿಸ್ಟರ್‌ ಪ್ರೀತಿ ಪಟೆಲ್‌ ಬೆಂಬಲಿತ CDO ಬಣ ಹೇಳಿದೆ. ಇತ್ತ ಈ ಹೊಸ ವಿರೋಧಕ್ಕೆ ಪ್ರತಿಕ್ರಿಯಿಸಿರೊ ಸುನಾಕ್‌, ಆರ್ಥಿಕ ಸ್ಥಿರತೆ ಹಾಗೂ ಕಾನ್ಫಿಡೆನ್ಸ್‌ ನಮ್ಮ ಸರ್ಕಾರದ ಅಜೆಂಡ, ಅಂದ್ರೆ ಹಲವಾರು ಕಠಿಣ ನಿರ್ಧಾರಗಳು ಬರಲಿವೆ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ. ಅಂದ್ಹಾಗೆ ಈ ಹಿಂದೆ ಮಾಜಿ ಪ್ರಧಾನಿ ಲಿಜ್‌ ಟ್ರಸ್‌ ಜಾರಿ ಮಾಡಿದ್ದ ನೂತನ ತೆರಿಗೆ ಯೋಜನೆ ವಿಫಲವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರು. ಈಗ ಮತ್ತೆ ಅದೇ ಟ್ಯಾಕ್ಸ್‌ ವಿಚಾರ ಈಗ ಬ್ರಿಟನ್ ಪ್ರಧಾನಿಗೆ ತಲೆ ನೋವಾಗಿದೆ.

-masthmagaa.com

Contact Us for Advertisement

Leave a Reply