20 ವರ್ಷ ಬಳಿಕ ಆಫ್ಘನಿಸ್ತಾನದಿಂದ ಅಮೆರಿಕ ಸೇನೆ ವಾಪಸ್​ಗೆ ಸಿದ್ಧತೆ

masthmagaa.com:

ಕಳೆದ 20 ವರ್ಷಗಳಿಂದ ಅಫ್ಘನಿಸ್ತಾನದಲ್ಲಿರೋ ಅಮೆರಿಕ ಸೇನೆ ಈ ವರ್ಷದ ಸೆಪ್ಟೆಂಬರ್ 11ರ ಒಳಗೆ ಅಫ್ಘನಿಸ್ತಾನದಿಂದ ಕಂಪ್ಲೀಟ್​ ಆಗಿ ಗಂಟುಮೂಟೆ ಕಟ್ಕೊಂಡು ಅಮೆರಿಕಕ್ಕೆ ವಾಪಸ್ ಬರಲಿದೆ ಅಂತ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳೋ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇವತ್ತು ಘೋಷಣೆ ಮಾಡಲಿದ್ದಾರೆ. ಈ ಮೂಲಕ ಅಮೆರಿಕ ಕಂಡ ಅತಿ ದೀರ್ಘಾವಧಿ ಯುದ್ಧ ಅಂತ್ಯವಾಗಲಿದೆ. ವಿಯೆಟ್ನಾಂನಲ್ಲಿ ಅಮೆರಿಕ ಸೇನೆ 19 ವರ್ಷಗಳ ಕಾಲ ಇತ್ತು. ಅಫ್ಘನಿಸ್ತಾನದಲ್ಲಿ 20 ವರ್ಷ ಆಗ್ತಿದೆ. ಅಂದ್ಹಾಗೆ 2001ರ ಸೆಪ್ಟೆಂಬರ್ 11ರಂದು ಮಂಗಳವಾರ ಅಲ್​-ಖೈದಾ ಉಗ್ರರು ಅಮೆರಿಕದ ವರ್ಲ್ಡ್​ ಟ್ರೇಡ್ ಸೆಂಟರ್​ಗೆ ವಿಮಾನ ನುಗ್ಗಿಸಿ ದಾಳಿ ನಡೆಸಿದ್ರು. ದಾಳಿಯಲ್ಲಿ ಸುಮಾರು ಮೂರು ಸಾವಿರ ಜನ ಮೃತಪಟ್ಟಿದ್ರು. ಅದಾದ ಬಳಿಕ ಅಫ್ಘನಿಸ್ತಾನದಲ್ಲಿದ್ದ ತಾಲಿಬಾನ್ ಮತ್ತು ಅಲ್​-ಖೈದಾ ಕ್ಯಾಂಪ್​ಗಳ ಮೇಲೆ ಅಮೆರಿಕ ದಾಳಿ ನಡೆಸ್ತು. ಆಫ್ಘನಿಸ್ತಾನದಲ್ಲಿದ್ದ ತಾಲಿಬಾನ್ ಸರ್ಕಾರವನ್ನ ಕೆಳಗಿಳಿಸ್ತು ಅಮೆರಿಕ. ನಂತ್ರ 2011ರಲ್ಲಿ ಅಂದ್ರೆ WTO ಮೇಲೆ ದಾಳಿ ನಡೆದು 10 ವರ್ಷಗಳಾದ ಬಳಿಕ ಪಾಕಿಸ್ತಾನದಲ್ಲಿ ಅಡಗಿ ಕೂತಿದ್ದ ಒಸಮಾ ಬಿನ್ ಲಾಡೆನ್​ ಅನ್ನ ಮುಗಿಸಿಬಿಡ್ತು ಅಮೆರಿಕ. 2001ರಿಂದ ಅಫ್ಘನಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರೋ ದಾಳಿಯಲ್ಲಿ ಇದುವರೆಗೆ ಸುಮಾರು 2,400 ಅಮೆರಿಕ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. 20 ವರ್ಷದ ಕಾರ್ಯಾಚರಣೆಗೆ ಸುಮಾರು 2 ಟ್ರಿಲಿಯನ್ ಡಾಲರ್ ಖರ್ಚಾಗಿದೆ ಅಂತಾನೂ ಅಂದಾಜಿಸಲಾಗಿದೆ. ಅಫ್ಘನಿಸ್ತಾನದಿಂದ ಸೇನೆಯನ್ನ ಹಿಂಪಡೆಯಲು ಡೊನಾಲ್ಡ್ ಟ್ರಂಪ್ ಮೇ 1ರ ಡೆಡ್​ಲೈನ್ ಹಾಕ್ಕೊಂಡಿದ್ರು. ಆದ್ರೀಗ ಬೈಡೆನ್ ಸರ್ಕಾರ ಸೆಪ್ಟೆಂಬರ್ 11ರ ಡೆಡ್​ಲೈನ್ ಹಾಕ್ಕೊಂಡಿದ್ದಾರೆ. 2011ರ ವೇಳೆಗೆ ಅಫ್ಘನಿಸ್ತಾನದಲ್ಲಿ 1 ಲಕ್ಷ ಅಮೆರಿಕದ ಯೋಧರು ಇದ್ದರು. ಬಳಿಕ ಆ ಸಂಖ್ಯೆ ಕಮ್ಮಿಯಾಗ್ತಾ ಬಂತು.

-masthmagaa.com

Contact Us for Advertisement

Leave a Reply