ಮೂರು ದಿಕ್ಕುಗಳಿಂದ ಯುಕ್ರೇನ್​​ ಸುತ್ತುವರಿದ ರಷ್ಯಾ!

masthmagaa.com:

ಯುಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷವನ್ನ ಕಮ್ಮಿ ಮಾಡೋ ಉದ್ದೇಶದಿಂದ ಎರಡು ದೇಶಗಳಿಗೆ ಹೋಗಿ, ರಷ್ಯಾ ಅಧ್ಯಕ್ಷ ಪುಟಿನ್​ ಮತ್ತು ಯುಕ್ರೇನ್​ ಅಧ್ಯಕ್ಷ ಝೆಲೆನ್ಸ್​ಕಿಯನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್​ ಮ್ಯಾಕ್ರನ್ ಇದೀಗ​ ಮಾತುಕತೆಯ ಸಂಪೂರ್ಣ ವಿವರಣೆಯನ್ನ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​ಗೆ ಕೊಟ್ಟಿದ್ದಾರೆ. ಬೈಡೆನ್​ಗೆ ಕಾಲ್​ ಮಾಡಿರೋ ಮ್ಯಾಕ್ರನ್​ ಮೀಟಿಂಗ್​ ಬಗ್ಗೆ ಚರ್ಚೆ ನಡೆಸಿದ್ದಾರೆ ಅಂತ ವೈಟ್​ ಹೌಸ್​ ಹೇಳಿದೆ.

ಅತ್ತ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಇವತ್ತು ಬೆಲ್ಜಿಯಂ ಮತ್ತು ಪೋಲ್ಯಾಂಡ್​ಗೆ ಹೋಗಲಿದ್ದಾರೆ. ಬೆಲ್ಜಿಯಂ ರಾಜಧಾನಿ ಬ್ರಸ್ಸೆಲ್ಸ್​ನಲ್ಲಿ ನ್ಯಾಟೋ ಮುಖ್ಯಸ್ಥ ಜೇನ್ಸ್ ಸ್ಟೋಲನ್​ಬರ್ಗ್​ರನ್ನ ಭೇಟಿಯಾಗಲಿದ್ದಾರೆ. ನಂತ್ರ ಪೊಲ್ಯಾಂಡ್​ ರಾಜಧಾನಿ ವಾರ್ಸಾಗೆ ಹೋಗಿ ಅಲ್ಲಿನ ನಾಯಕರನ್ನ ಭೇಟಿಯಾಗಲಿದ್ದಾರೆ. ನ್ಯಾಟೋ ಮುಖ್ಯಸ್ಥರ ಭೇಟಿಗೂ ಮುನ್ನ ಮಾತನಾಡಿರೋ ಬೋರಿಸ್​ ಜಾನ್ಸನ್​, ಯುಕ್ರೇನ್​ ವಿಚಾರದಲ್ಲಿ ನ್ಯಾಟೋ ಮಿತ್ರರಾಷ್ಟ್ರಗಳು ತಮ್ಮ ತತ್ವಗಳನ್ನ ಕಾಂಪ್ರಮೈಸ್​ ಮಾಡಿಕೊಳ್ಳಬಾರ್ದು ಅಂತ ಕರೆ ಕೊಟ್ಟಿದ್ದಾರೆ.

ಮತ್ತೊಂದುಕಡೆ ರಷ್ಯಾ ಮತ್ತು ಅದರ ಕುಚಿಕು ದೇಶ ಬೆಲಾರುಸ್​​ ನಡುವೆ ಇವತ್ತಿನಿಂದ 10 ದಿನಗಳ ಕಾಲ ಜಂಟಿ ಸೇನಾಭ್ಯಾಸ ನಡೆಯಲಿದೆ. ರಷ್ಯಾ ಮತ್ತು ಯುಕ್ರೇನ್​ ಪಕ್ಕದಲ್ಲಿರೋ ಬೆಲಾರುಸ್​​ನಲ್ಲಿ ಈ ಮಿಲಿಟರಿ ಡ್ರಿಲ್​​ ನಡೆಯಲಿದೆ. ಇದಕ್ಕಾಗಿ ರಷ್ಯಾ ಸೇನೆಯ ಸುಮಾರು 30,000 ಯೋಧರು, S-400 ಸರ್ಫೇಸ್​ ಟು ಏರ್​ ಮಿಸೈಲ್​ ಸಿಸ್ಟಂನ ಎರಡು ಬೆಟಾಲಿಯನ್ ಮತ್ತು ಹಲವು ಫೈಟರ್​ ಜೆಟ್​​ಗಳನ್ನ ರಷ್ಯಾ ಬೆಲಾರುಸ್​ಗೆ ಕಳಿಸಿದೆ. ಇದರಲ್ಲಿ ಹೆಚ್ಚಿನ ಶಸ್ತ್ರಾಸ್ತ್ರಗಳನ್ನ ಯುಕ್ರೇನ್ ಗಡಿ ಸಮೀಪ ಇರೋ ಲೊಕೇಷನ್​ಗಳಿಗೆ ಕಳಿಸಲಾಗಿದೆ ಅನ್ನೋದು ಉಪಗ್ರಹ ಚಿತ್ರಗಳಲ್ಲಿ ಗೊತ್ತಾಗಿದೆ. ಬೆಲಾರುಸ್​​ ಗಡಿಯಿಂದ ಯುಕ್ರೇನ್​ ರಾಜಧಾನಿ ಕ್ವಿವ್​ ಕೇವಲ 210 ಕಿಲೋ ಮೀಟರ್ ದೂರದಲ್ಲಿದೆ ಅನ್ನೋದು ಕೂಡ ಗಮನಾರ್ಹ.

ಯುಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮಾಡ್ಬೋದು ಅನ್ನೋ ಆತಂಕ ಇರುವಾಗಲೇ ಈ ಜಂಟಿ ಮಿಲಿಟರಿ ಡ್ರಿಲ್ ನಡೆಸೋದು ಸರಿಯಲ್ಲ, ಸಮಸ್ಯೆ ಮತ್ತಷ್ಟು ಉಲ್ಬಣ ಆಗುತ್ತೆ, ಇದನ್ನ ಕೈ ಬಿಡಬೇಕು ಅಂತ ಅಮೆರಿಕ ಮತ್ತು ನ್ಯಾಟೋ ಪದೇಪದೇ ಆಗ್ರಹಿಸಿದ್ವು. ಆದ್ರೆ ರಷ್ಯಾ ಮಾತ್ರ ನಾವಿದನ್ನ ಮೊದಲೇ ಪ್ಲಾನ್​ ಮಾಡಿದ್ವಿ, ಮಿಲಿಟರಿ ಡ್ರಿಲ್​ ಮುಗಿದ ಬಳಿಕ ನಮ್ಮ ಸೇನೆಯನ್ನ ಬೆಲಾರುಸ್​ನಿಂದ ವಾಪಸ್​ ಕರೆಸಿಕೊಳ್ತೀವಿ ಅಂತ ಹೇಳ್ತಿದೆ.

ಅಂದ್ಹಾಗೆ ಈ ಹಿಂದೆ ಸೋವಿಯತ್ ಒಕ್ಕೂಟದಲ್ಲಿದ್ದ ಬೆಲಾರುಸ್​​ ಈಗ ರಷ್ಯಾದ ಕುಚಿಕು ಆಗಿದೆ. ಬೆಲಾರುಸ್​ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಇಬ್ಬರೂ ಒಳ್ಳೇ ಫ್ರೆಂಡ್ಸ್ ಆಗಿದ್ದಾರೆ. 2020ರ ಬೆಲಾರುಸ್​​ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತ ದೇಶವ್ಯಾಪಿ ಭಾರಿ ಪ್ರತಿಭಟನೆ ನಡೆದಿತ್ತು. ಹಲವು ಪಾಶ್ಚಿಮಾತ್ಯ ದೇಶಗಳು ಬೆಲಾರುಸ್​ ಮೇಲೆ ಸ್ಯಾಂಕ್ಷನ್ಸ್​ ಹೇರಿದ್ವು ಮತ್ತು ಎಲೆಕ್ಷನ್​ ರಿಸಲ್ಟ್ ಅನ್ನ ರೆಕಗ್ನೈಜ್ ಮಾಡಲು ನಿರಾಕರಿಸಿದ್ವು.

ಅಂಥಾ ಟೈಮಲ್ಲಿ ಲುಕಶೆಂಕೊಗೆ ಪುಟಿನ್ ಸಂಪೂರ್ಣ ಬೆಂಬಲ ಕೊಟ್ಟಿದ್ರು. ಹೀಗೆ ಉತ್ತರದಲ್ಲಿ ಬೆಲಾರುಸ್​, ದಕ್ಷಿಣದಲ್ಲಿ ರಷ್ಯಾ ಆಕ್ರಮಿತ ಕ್ರೈಮಿಯಾ ಮತ್ತು ಪೂರ್ವದಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು – ಮೂರೂ ಕಡೆಯಿಂದಲೂ ಯುಕ್ರೇನ್​ ಅನ್ನ ರಷ್ಯಾ ಸುತ್ತುವರಿದಂತಾಗಿದೆ. ಯುಕ್ರೇನ್​ನ ಉತ್ತರ ಭಾಗದಲ್ಲಿ ಸುಮಾರು 1 ಲಕ್ಷ ಯೋಧರನ್ನ ರಷ್ಯಾ ನಿಯೋಜಿಸಿರಬಹುದು ಅಂತ ಪೆಂಟಗನ್​ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply