ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ!

masthmagaa.com:

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್. ಶಂಕರ್,  ಸಿ.ಪಿ. ಯೋಗೇಶ್ವರ್ ಮತ್ತು ಎಸ್. ಅಂಗಾರ.. ಈ 7 ಜನರ ಹೆಸರು ಅನೌನ್ಸ್ ಆದ ಬೆನ್ನಲ್ಲೇ ಎಂ.ಪಿ. ರೇಣುಕಾಚಾರ್ಯ, ಹೆಚ್​. ವಿಶ್ವನಾಥ್ ಮತ್ತು ಸತೀಶ್ ರೆಡ್ಡಿ ಮುಂತಾದವರು ಅಸಮಾಧಾನ ಹೊರಹಾಕಿದ್ದಾರೆ.

ಸಿ.ಪಿ. ಯೋಗೇಶ್ವರ್​ಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಎಂಎಲ್​ಸಿ ಹೆಚ್​. ವಿಶ್ವನಾಥ್ ಕೆಂಡಾಮಂಡಲರಾಗಿದ್ದಾರೆ. ಯೋಗೇಶ್ವರ್ ವಿರುದ್ಧ 420 ಕೇಸ್ ಇದೆ. ಅವನೊಬ್ಬ ಫ್ರಾಡ್, ಅವನು ಸಾಕಷ್ಟು ಜನರಿಗೆ ವಂಚನೆ ಮಾಡಿದ್ದಾನೆ. ಆತನಿಗೆ ಸಚಿವ ಸ್ಥಾನ ಕೊಟ್ಟಿದ್ದೇಕೆ? ಸಿಎಂ ಯಡಿಯೂರಪ್ಪನವರೇ ದೇವರು ನಿಮ್ಮನ್ನ ಒಳ್ಳೇದು ಮಾಡಲ್ಲ. ನೀವು ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ. ಹೀಗಾಗಿ ಸಿದ್ಧಲಿಂಗೇಶ್ವರ ನಿಮಗೆ ಒಳ್ಳೇದು ಮಾಡಲ್ಲ ಅಂತ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಇನ್ನು ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬರೋವರೆಗೆ ಕಾದು ಅವರನ್ನ ಭೇಟಿಯಾಗಿದ್ದಾರೆ. ಈ ವೇಳೆ ಮಾತನಾಡಿದ ರೇಣುಕಾಚಾರ್ಯ, ನಾನು ಸಚಿವ ಸ್ಥಾನಕ್ಕೆ ಲಾಬಿನೇ ಮಾಡಿಲ್ಲ. ಲಾಬಿ ಮಾಡೋರು ಶಾಸಕರಾಗ್ತಾರೆ. ಎಂಎಲ್​ಸಿಗಳಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ನನಗೆ ಬೇಜಾರಿಲ್ಲ. ಅವರು ನಮ್ಮ ಸರ್ಕಾರ ಬರೋಕೆ ಸಹಾಯ ಮಾಡಿದ್ದಾರೆ. ಆದ್ರೆ ಶಾಸಕರ ಬದಲು ವಿಧಾನ ಪರಿಷತ್ ಸದಸ್ಯರಿಗೆ ಮಂತ್ರಿಗಿರಿ ಕೊಟ್ಟಿದ್ದೇಕೆ ಅಂತ ಜನ ಮಾತಾಡಿಕೊಳ್ತಾರೆ ಅಂತ  ಹೇಳಿದ್ರು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕೂಡ ಅಸಮಾಧಾನ ಸ್ಫೋಟಿಸಿದ್ದಾರೆ. ‘ರೀ ಯಡಿಯೂರಪ್ಪನವರೇ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲು ಮಾನದಂಡಗಳೇನು? ನಿಮಗೆ ನಿಷ್ಠಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ವಾ?’ ಅಂತ ಸತೀಶ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply