ಅಮೆರಿಕ-ಚೀನಾ ಯುದ್ಧಕ್ಕೆ ಪ್ಲಾನ್! ಟ್ರಂಪ್ ಮಾಡಿದ್ದರಾ ‘ಡ್ರಾಗನ್ ಸಂಹಾರ’ ಸ್ಕೀಮ್?

masthmagaa.com:

ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್​ ಟ್ರಂಪ್ ಚೀನಾದ ಮೇಲೆ ಯುದ್ಧ ಮಾಡೋ ಅಪಾಯ ಇತ್ತು. ಇದ್ರಿಂದ ಜಾಯಿಂಟ್ ಚೀಫ್ ಆಫ್ ಸ್ಟಾಫ್ ಆಗಿರೋ ಮಾರ್ಕ್ ಮಿಲ್ಲೇ ಫುಲ್ ಹೆದರಿ ಹೋಗಿದ್ರು ಅಂತ ವಾಷಿಂಗ್ಟನ್ ಪೋಸ್ಟ್​ನಲ್ಲಿ ವರದಿ ಪ್ರಕಟಿಸಲಾಗಿದೆ. ಈ ವರದಿಯನ್ನು ಪತ್ರಕರ್ತರಾದ ಬಾಬ್​ ವುಡ್​ವರ್ಡ್​​ ಮತ್ತು ರಾಬರ್ಟ್​ ಕೋಸ್ಟಾ ಬರೆದಿರೋ ಪೆರಿಲ್ ಅನ್ನೋ ಪುಸ್ತಕ ಆಧಾರವಾಗಿಟ್ಟುಕೊಂಡು ಈ ವರದಿ ಪ್ರಕಟಿಸಲಾಗಿದೆ. ಸುಮಾರು 200 ಮಂದಿಯನ್ನು ಸಂದರ್ಶನ ಮಾಡಿದ ಬಳಿಕ ಈ ಪುಸ್ತಕ ಬರೆಯಲಾಗಿದೆ. ಇದ್ರ ಪ್ರಕಾರ, ಚುನಾವಣೆಯಲ್ಲಿ ಸೋಲೋ ಭೀತಿಯಿಂದ ಡೊನಾಲ್ಡ್​ ಟ್ರಂಪ್ ಚೀನಾದ ಮೇಲೆ ಯುದ್ಧ ಘೋಷಿಸೋ ಅಪಾಯವಿತ್ತು. ಹೀಗಾಗಿ ಮಾರ್ಕ್​ ಮಿಲ್ಲೇ ಚೀನಾದ ಪೀಪಲ್ ಲಿಬರೇಷನ್ ಆರ್ಮಿಯ ಜನರಲ್ ಜುಶೆಂಗ್​​​ಗೆ ಕರೆ ಮಾಡಿ ಎರಡೆರಡು ಬಾರಿ ಮಾತನಾಡಿದ್ರು. ಅಕ್ಟೋಬರ್​​ನಲ್ಲಿ ರಾಷ್ಟ್ರಪತಿ ಚುನಾವಣೆಗೂ 4 ದಿನ ಮುನ್ನ ಮತ್ತು ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ದಾಳಿ ನಡೆದ ಬಳಿಕ ಅಂದ್ರೆ ಜನವರಿ 8ರಂದು ಕರೆ ಮಾಡಿ, ಈ ಬಗ್ಗೆ ಚರ್ಚೆ ನಡೆಸಿದ್ರು. ಜೊತೆಗೆ ಅಮೆರಿಕ ಸ್ಥಿರವಾಗಿದ್ದು, ಯುದ್ಧ ನಡೆಸೋದಿಲ್ಲ. ಒಂದು ವೇಳೆ ಯುದ್ಧ ಮಾಡೋದಾದ್ರೂ ಮೊದಲೇ ಈ ಬಗ್ಗೆ ನಿಮಗೆ ಮಾಹಿತಿ ನೀಡ್ತೀನಿ ಅಂತ ಮಾರ್ಕ್​ ಮಿಲ್ಲೇ ಭರವಸೆ ನೀಡಿದ್ರು ಅಂತ ಹೇಳಲಾಗಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ಇದೆಲ್ಲಾ ಕಟ್ಟುಕಥೆ. ನಾನು ಯಾವತ್ತೂ ಚೀನಾದ ಮೇಲೆ ಯುದ್ಧ ಸಾರೋ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ. ಒಂದು ವೇಳೆ ಪುಸ್ತಕದಲ್ಲಿ ಬರೆದಿರೋದು ನಿಜವಾಗಿದ್ರೆ, ಜಾಯಿಂಟ್ ಚೀಫ್ ಸ್ಟಾಫ್ ಮಾರ್ಕ್ ಮಿಲ್ಲೇ ಕರೆ ಮಾಡಿದ್ದು ನಿಜ ಅಂತಾದ್ರೆ ಅವರ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಬೇಕು ಅಂತ ಗುಡುಗಿದ್ದಾರೆ. ಅದೇ ರೀತಿ ರಿಪಬ್ಲಿಕನ್ ಪಕ್ಷದ ಸೆನೆಟರ್​​ಗಳು ಕೂಡ ಈ ಕೂಡಲೇ ಮಾರ್ಕ್​ ಮಿಲ್ಲೇ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಅಂತ ಬೈಡೆನ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮಿಲಿಟರಿ ವಿಚಾರಗಳನ್ನು ಈ ರೀತಿ ಬೇರೆ ದೇಶಗಳೊಂದಿಗೆ ಚರ್ಚಿಸೋದು, ಸಾರ್ವಜನಿಕಗೊಳಿಸೋದ್ರಿಂದ ದೊಡ್ಡ ಅಪಾಯ ಎದುರಾಗೋ ಸಾಧ್ಯತೆ ಇರುತ್ತೆ ಅಂತ ಕಿಡಿಕಾರಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸೋಕೆ ಮಾರ್ಕ್ ಮಿಲ್ಲೇ ಕಚೇರಿ ನಿರಾಕರಿಸಿದೆ. ಅದೇ ರೀತಿ ವೈಟ್ ಹೌಸ್ ವಕ್ತಾರ ಕೂಡ, ಈ ಬಗ್ಗೆ ಮಾರ್ಕ್ ಮಿಲ್ಲೇ ಅಥವಾ ರಕ್ಷಣಾ ವಿಭಾಗವನ್ನು ಕೇಳಿ ಅಂತ ಜಾರಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply