ವಿಧಾನಸಭೆ ನೂತನ ಸ್ಪೀಕರ್‌ ಆಗಿ ಅಧಿಕಾರ ಸ್ವೀಕರಿಸಿದ ಯು.ಟಿ ಖಾದರ್‌!

masthmagaa.com:

ರಾಜ್ಯದ ವಿಧಾನಸಭೆ ನೂತನ ಸ್ಪೀಕರ್‌ ಆಗಿ ಯು.ಟಿ ಖಾದರ್‌ ಫರೀದ್‌ ಅವ್ರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಖಾದರ್‌ ಅವ್ರ ಹೆಸರನ್ನ ಸಿಎಂ ಸಿದ್ದರಾಮಯ್ಯನವರು ಸೂಚಿಸಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್‌ ಅವ್ರು ಅನುಮೋದಿಸಿದ್ದಾರೆ. ಇನ್ನು ಸ್ಪೀಕರ್‌ ಸ್ಥಾನಕ್ಕೆ ಖಾದರ್‌ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬಳಿಕ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ಬಸವರಾಜ್‌ ಬೊಮ್ಮಾಯಿ ಅವರು ನೂತನ ಸ್ಪೀಕರ್‌ಗೆ ಶುಭಾಶಯ ಕೋರಿದ್ದಾರೆ. ಅಂದ್ಹಾಗೆ ಖಾದರ್‌ ಅವರ ಹಿನ್ನೆಲೆ ಹಾಗೂ ರಾಜಕೀಯ ಜರ್ನಿ ನೋಡೋದಾದ್ರೆ, ಇವರು ದಕ್ಷಿಣ ಕನ್ನಡದ ಮಂಗಳೂರು ನಗರದ ಆಗಿನ ಉಲ್ಲಾಳ ಕಾಂಗ್ರೆಸ್‌ ಶಾಸಕರಾಗಿ 2007ರ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಈ ಹಿಂದೆ ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಅಷ್ಟೆ ಅಲ್ದೆ ಕರ್ನಾಟಕ ರಾಜಕೀಯದಲ್ಲೇ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಾಗಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ. 2007ರಲ್ಲಿ ಯು.ಟಿ. ಖಾದರ್ ಅವ್ರ ತಂದೆ ಯು. ಟಿ. ಫರೀದ್ ನಿಧನದ ನಂತರ ಉಳ್ಳಾಲ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಯ್ತು. ಆ ಸಮಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದ ಖಾದರ್ ಮೊದಲ ಬಾರಿಗೆ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ರು. ಬಳಿಕ 2008ರ ಚುನಾವಣೆ ಸಂದರ್ಭದಲ್ಲಿ ಉಳ್ಳಾಲ ಮತ್ತು ಇತರ ಪ್ರದೇಶಗಳನ್ನ ಸೇರಿಸಿ ಮಂಗಳೂರು ಕ್ಷೇತ್ರ ರಚನೆ ಮಾಡಲಾಯಿತು. ಬಳಿಕ ಮಂಗಳೂರು ಕ್ಷೇತದಿಂದ 2008, 2013, 2018 ಮತ್ತು 2023ರ ವಿಧಾನಸಭೆ ಚುನಾವಣೆಗಳು ಹಾಗೂ ಉಪಚುನಾವಣೆ ಸೇರಿ ಸತತ 5 ಬಾರಿ ಗೆಲುವು ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಖಾದರ್, 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೆಚ್‌ಡಿ ಕುಮಾರಸ್ವಾಮಿ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾನೂನು ಪದವಿದರರಾಗಿರುವ ಖಾದರ್‌, ಸದಾ ಜನರೊಂದಿಗೆ ಬೆರೆಯುವ ಗುಣವನ್ನ ಹೊಂದಿದ್ದು, ತಮ್ಮ ಪಕ್ಷದ ನಾಯಕರಷ್ಟೆ ಅಲ್ಲದೆ ವಿರೋಧ ಪಕ್ಷದ ನಾಯಕರಿಂದಲೂ ಸಹ ಗೌರವಕ್ಕೆ ಪಾತ್ರರಾಗಿದ್ದಾರೆ. ಮಂಗಳೂರಿನಲ್ಲಿ ಸಂಚಾರ ದಟ್ಟಣೆ ಉಂಟಾದಾಗ ಕಾರಿನಿಂದ ಇಳಿದು ಟ್ರಾಫಿಕ್‌ ಪೊಲೀಸರಂತೆ ಕೆಲಸ ಮಾಡಿರುವ ಉದಾಹರಣೆಗಳಿವೆ. ಜೊತೆಗೆ ರಸ್ತೆ ಅಪಘಾತಗಳು ಉಂಟಾದಾಗ ಗಾಯಾಳುಗಳನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಈ ರೀತಿ ಕೆಲಸಗಳಿಂದ ಖಾದರ್‌ ಉತ್ತಮ ಹೆಸರನ್ನ ಗಳಿಸಿದ್ದಾರೆ. ಹೀಗಾಗಿ ಮಂಗಳೂರಿನಲ್ಲಿ ಕೇವಲ ಮುಸ್ಲಿಂ ಅಥ್ವಾ ಒಂದು ಸಮುದಾಯದವ್ರು ಮಾತ್ರವಲ್ಲದೇ ಎಲ್ಲ ಸಮುದಾಯದ ಜನರೂ ಖಾದರ್‌ಗೆ ಮತ ಹಾಕುವ ಮೂಲಕ 5 ಬಾರಿ ಗೆಲ್ಲಿಸಿದ್ದಾರೆ. ಇನ್ನು ಹಿಜಬ್‌ ಬ್ಯಾನ್‌ ಗಲಾಟೆ ವೇಳೆ ಹಿಜಬ್‌ ಬೇಕು ಅಂತ ಪ್ರತಿಭಟನೆ ಮಾಡ್ತಿರುವ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಪಾಕಿಸ್ತಾನ ಹಾಗೂ ಸೌದಿಯಂತಹ ದೇಶಗಳಿಗೆ ಹೋಗಲಿ. ಆಗ ಅವರಿಗೆ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ ಅಂತ ಹೇಳಿದ್ದರು.

-masthmagaa.com

Contact Us for Advertisement

Leave a Reply