masthmagaa.com:

ರಾಜ್ಯದಲ್ಲಿ ಇವತ್ತೂ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಪಡುಪೆರಾರ್‌ ಎಂಬಲ್ಲಿ ಅತಿಹೆಚ್ಚು ಅಂದ್ರೆ 175.5 ಮಿಲಿಮೀಟರ್‌ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳ ಕೆಲವೊಂದು ಕಡೆ ಸಾಧರಣ ಮಳೆ. ಅಲ್ಲಲ್ಲಿಅಧಿಕ ಮಳೆಯಾಗೋ ಸಾಧ್ಯತೆ ಇದೆ. ಮಲೆನಾಡು,ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳ ಬಹುತೇಕ ಕಡೆ ಅಧಿಕ ಮಳೆಯಾಗಲಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಕೊಡಗು, ದಕ್ಷಿಣಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಹಾಸನ, ಚಿತ್ರುದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ, ಉತ್ತರಕನ್ನಡ, ಬಾಗಲಕೋಟೆ, ಬೆಳಗಾವಿ, ಗದಗ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಸುರೀತಿರೋ ಭಾರಿ ಮಳೆಗೆ ಹಲವು ಕಡೆ ರಸ್ತೆ, ಮನೆಗಳೆಲ್ಲವೂ ಜಲಾವೃತವಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ನಿವಾಸಿಗಳ ಕುಂದುಕೊರತೆಯನ್ನು ಆಲಿಸೋಕೆ ಪ್ರತಿವಾರ್ಡ್‌ನಲ್ಲೂ ಕುಂದುಕೊರತೆ ವಿಭಾಗವನ್ನು ಸ್ಥಾಪಿಸಬೇಕು ಅಂತ ಕರ್ನಾಟಕ ಹೈಕೋರ್ಟ್​ BBMPಗೆ ಸೂಚನೆ ನೀಡಿದೆ. ಇನ್ನು ಬಿಟ್ಟು ಬಿಡದೇ ಸುರಿಯುತ್ತಿರೊ ಮಳೆ ಕೇವಲ ಲೋ ಏರಿಯಾಗಳಲ್ಲಿ ವಾಸಿಸುತ್ತಿರುವ ಜನರನ್ನ ಮಾತ್ರ ಕಾಡ್ತಿಲ್ಲ. ಬಿಲಿಯನೇರ್‌ಗಳು ವಾಸಿಸುತ್ತಿರೊ ಎಪ್ಸಿಲಾನ್‌ ಏರಿಯಾದಲ್ಲೂ ನೀರು ನುಗ್ಗಿದೆ. ಈ ಎಪ್ಸಿಲಾನ್‌ನಲ್ಲಿ ವಿಪ್ರೊ ಚೇರ್‌ಮ್ಯಾನ್ ರಿಶದ್‌ ಪ್ರೇಮ್‌ಜಿ ಮತ್ತು ಬೈಜು ರವಿಚಂದ್ರನ್‌ರ ಮನೆಗಳು ಕೂಡ ನೀರಿನಿಂದ ಆವೃತವಾಗಿವೆ.ಬೆಂಗಳೂರಿನಲ್ಲಿ ಮಳೆಯ ಹೊಡೆತಕ್ಕೆ ಫುಡ್‌ ಡಿಲವರಿ ಕಂಪನಿಗಳು ಕೂಡ ನಗರದ ಕೆಲವೊಂದು ಭಾಗಗಳಿಗೆ ಸೇವೆ ನೀಡೋಕೆ ಸಾಧ್ಯವಾಗ್ತಿಲ್ಲ ಅಂತ ಅಸಹಾಯಕತೆಯನ್ನ ವ್ಯಕ್ತಪಡಿಸಿವೆ.

ರಾಜ್ಯದಲ್ಲಿ ಮಳೆ, ಪ್ರವಾಹ ಹಾನಿ ಹಿನ್ನೆಲೆಯಲ್ಲಿ ಕೇಂದ್ರ ಸಮೀಕ್ಷಾ ತಂಡ ಇಂದು ರಾಜ್ಯಕ್ಕೆ ಆಗಮಿಸಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಮಳೆಹಾನಿಯ ಬಗ್ಗೆ ಈ ಸಮೀಕ್ಷಾ ತಂಡ ಅಧ್ಯಯನ ನಡೆಸಲಿದ್ದು ಸಿಎಂ ಬಸವರಾಜ ಬೊಮ್ಮಾಯಿ ಕೂಡ ಇವತ್ತು ಬೆಳಿಗ್ಗೆಯೇ ಕೇಂದ್ರದ ತಂಡದ ಜೊತೆಗೆ ಸಭೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply