ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದೇ ಇದ್ದದ್ದಕ್ಕೆ ಕಾರಣ ಕೊಟ್ಟ ಯಶ್‌ !

masthmagaa.com:

ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾ ಬಗ್ಗೆ ಈಗ ದೇಶದಾದ್ಯಂತ ಸಾಕಷ್ಟು ನಿರೀಕ್ಷೆ ಇದೆ. ಯಶ್ ಕೂಡ ಅದರ ತಯಾರಿಯಲ್ಲೇ ಬಿಝಿ ಆಗಿದ್ದಾರೆ. ಇದೇ ಕಾರಣದಿಂದಾನೇ ಯಶ್ ಮೀಡಿಯಾ ಮುಂದೆ ಬರೋದೇ ಅಪರೂಪ ಅಂತ ಹೇಳಬಹುದು. ಆದ್ರೆ ನಿನ್ನೆ ಎಲೆಕ್ಷನ್ ಇದ್ದ ಕಾರಣ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ವೋಟ್ ಹಾಕೋಕೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತಾಡಿದ್ದಾರೆ. ಜೊತೆಗೆ ತಾವು ಯಾಕೆ ಈ ಬಾರಿ ಚುನಾವಣೆಯಲ್ಲಿ ಯಾರಿಗೂ ಪ್ರಚಾರ ಮಾಡಿಲ್ಲ ಅನ್ನೋದಕ್ಕೆ ಕಾರಣ ಕೂಡ ಕೊಟ್ಟಿದ್ದಾರೆ.

ಯಶ್ ಅವರಿಗೆ ಚುನಾವಣಾ ಪ್ರಚಾರ ಹೊಸದೇನಲ್ಲ. ರಾಜಕಾರಣಕ್ಕೆ ಯಶ್ ಎಂಟ್ರಿ ಕೊಟ್ಟಿಲ್ಲ ಅಂದ್ರೂ ಕೂಡ ಬೇರೆ ಬೇರೆ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಪರವಾಗಿ ಕ್ಯಾಂಪೇನ್ ಎಲ್ಲ ಮಾಡಿದ್ದಾರೆ. ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಷ್ ಪರವಾಗಿ ಯಶ್ ಸಾಕಷ್ಟು ಪ್ರಚಾರ ಮಾಡಿದ್ದರು. ಅದೂ ಅಲ್ಲದೇ ಈ ಬಾರಿ ಸುದೀಪ್, ಶಿವಣ್ಣ, ದರ್ಶನ್ ಸೇರಿದಂತೆ ಬಹುತೇಕ ನಟರು ಎಲೆಕ್ಷನ್ ಕ್ಯಾಂಪೇನ್ ಅಲ್ಲಿ ಕಾಣಿಸಿಕೊಂಡಿದ್ದರು. ಆದರೆ ಯಶ್ ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಯಾಕೆ ಅನ್ನೋದಕ್ಕೆ ಅವರೇ ಕಾರಣ ಕೊಟ್ಟಿದ್ದಾರೆ.

ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಯಶ್‌ ವೋಟ್ ಹಾಕಿ ಹೊರಬಂದ ನಂತರ ಮಾಧ್ಯಮಗಳ ಮುಂದೆ ಮಾತಾಡಿದ್ದಾರೆ. ಯಾಕೆ ಈ ಸಲ ಯಾರಿಗೂ ಪ್ರಚಾರ ಮಾಡಿಲ್ಲ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಶ್ “ಈ ಸಲ ನನಗೆ ಅಷ್ಟೇನೂ ಇಂಟ್ರೆಸ್ಟ್‌ ಇರಲಿಲ್ಲ. ಆ ಕಾರಣಕ್ಕೆ ಪ್ರಚಾರ ಮಾಡಿಲ್ಲ” ಅಂತ ಹೇಳಿದ್ದಾರೆ.

ಹಾಗೆ ಮುಂದುವರೆದು”ಕಳೆದ ಬಾರಿ ಚುನಾವಣಾ ಪ್ರಚಾರಕ್ಕೆ ಹೋದಾಗ ಕೆಲವು ಉದ್ದೇಶಗಳಿದ್ದವು. ಯಶೋಮಾರ್ಗ ಇತ್ತು. ಆದರೆ ಈ ಬಾರಿ ಇದು ನನ್ನ ವೈಯಕ್ತಿಕ ಆಯ್ಕೆ. ಚುನಾವಣಾ ಪ್ರಚಾರ ಮಾಡಬೇಕು ಅನ್ನಿಸಲಿಲ್ಲ. ಈ ಸಲ ನನಗೆ ಅಷ್ಟೇನೂ ಇಂಟ್ರೆಸ್ಟ್‌ ಇರಲಿಲ್ಲ’ ಅಂತ ಹೇಳಿದ್ದಾರೆ.

ವೋಟ್ ಮಾಡುವ ಯುವಕರಿಗೆ ಏನ್ ಹೇಳೋಕೆ ಬಯಸುತ್ತೀರಾ ಅಂತ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿರುವ ಯಶ್, ’18 ವರ್ಷ ತುಂಬಿದ ಯುವ ಮತದಾರರಿಗೆ ಮತದಾನ ಎಂಬುದು ನಮ್ಮ ಹಕ್ಕು, ಅದರ ಜವಾಬ್ದಾರಿ ಏನು ಅನ್ನೋದನ್ನ ಸರಿಯಾಗಿ ತಿಳಿಸಬೇಕು. ಅದರ ಬಗ್ಗೆ ಅರಿವು ಮೂಡಿಸುವುದಕ್ಕೆ ಒಂದು ಸರಿಯಾದ ಶಿಕ್ಷಣ ಬೇಕಿದೆ’ ಎಂದರು.

“ಎಲೆಕ್ಷನ್ ಟೈಮ್‌ನಲ್ಲಿ ಯಾರಿಗೆ ವೋಟ್ ಮಾಡಿದ್ರೇನು, ಹಾಗೇ ಹೀಗೆ ಅಂತ ತುಂಬ ಜನರು ಮಾತಾಡ್ತಾರೆ. ಆದರೆ ಮತದಾನ ಮಾಡೋದು ಎಷ್ಟು ಮಹತ್ವದ್ದು, ಅದರ value ಏನು ಅನ್ನೋದನ್ನ ತಿಳಿದುಕೊಂಡು ಅದನ್ನು ಅರ್ಥ ಮಾಡಿಕೊಂಡು ಯಂಗ್‌ಸ್ಟರ್ಸ್‌ ವೋಟ್ ಹಾಕೋಕೆ ಮುಂದೆ ಬಂದ್ರೆ ಒಳ್ಳೆಯದು ಅಂತ ಹೇಳಿದ್ದರು.

ಹಾಗೆ ಈ ಬಾರಿ ಗೆಲುವು ಕಾಣುವ ಪಕ್ಷದಿಂದ ನೀವು ಏನ್ ಬದಲಾವಣೆ ಬಯಸುತ್ತೀರಾ ಅಂತ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಯಶ್, ‘ಯಾವುದೇ ರಾಜಕೀಯ ಪಕ್ಷವಾಗಲಿ, ರಾಜಕಾರಣಿಯಾಗಲಿ ಬೇಸಿಕ್‌ ಕೆಲಸಗಳನ್ನು ಶಿಸ್ತಿನಿಂದ ಮಾಡಿದರೆ, ಸಾಕು ಜನರೇ ಅದನ್ನು ಮುಂದುವರಿಸಿಕೊಂಡು ಹೋಗ್ತಾರೆ ಅನ್ನೋದನ್ನು ನಾನು ನಂಬಿದ್ದೇನೆ. ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಕೆಲಸಗಳು ನಡೀಬೇಕು. ಇದನ್ನೆಲ್ಲ ನಾವೇ ಗೊಂದಲ ಮಾಡಿಕೊಂಡಿದ್ದೇವಾ ಎಂದೆನಿಸುತ್ತದೆ. ಪಬ್ಲಿಕ್‌ ಕೆಲಸಗಳನ್ನು ಸರಳವಾಗಿ ಮುಗಿಸುವ ಪ್ರಯತ್ನ ಸರ್ಕಾರದಿಂದ ಆಗಬೇಕು” ಅಂತ ಯಶ್ ಹೇಳಿದ್ದಾರೆ.

ಇನ್ನು ‘ಯಶ್‌ 19 ಯಾವಾಗ’ ಅಂತ ಪ್ರಶ್ನೆ ಕೇಳಿದಾಗ ಅದಕ್ಕೆ, ‘ನಂಗ್ ಆಗಲೇ 37 ಆಯ್ತು..’ ಅಂತ ತಮಾಷೆ ಮಾಡಿದರು. ನಂತರ, ‘ಆ ಬಗ್ಗೆ ಮಾತನಾಡಲು ಇದು ಸೂಕ್ತ ವೇದಿಕೆಯಲ್ಲ..’ ಎಂದು ಹೇಳಿ ಯಶ್ ಮತಗಟ್ಟೆಯಿಂದ ಹೊರಟರು.

-masthmagaa.com

Contact Us for Advertisement

Leave a Reply