ಬೆಂಗಳೂರಲ್ಲಿ 6 ಸಾವಿರ ಜನ ಇರುವ ಅಪಾರ್ಟ್​​ಮೆಂಟ್ ಜಲಾವೃತ!

masthmagaa.com:

ಬೆಂಗಳೂರು: ರಾಜ್ಯದಲ್ಲಿ ಮಳೆ ಆರ್ಭಟ ಸ್ವಲ್ಪ ಕಮ್ಮಿಯಾಯ್ತು ಅನ್ನುವಾಗಲೇ ಭಾನುವಾರ ರಾತ್ರಿ ಬೆಂಗಳೂರಿನ ಕೆಲವೊಂದುಕಡೆ ಭಾರಿ ಮಳೆಯಾಗಿದೆ. ಯಲಹಂಕದ ಜಕ್ಕೂರು -2ರಲ್ಲಿ ಅತಿಹೆಚ್ಚು 153 ಮಿಲಿಮೀಟರ್ ಮಳೆಯಾಗಿದೆ. ನಿನ್ನೆ ಸುರಿದ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿ ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರಮುಖವಾಗಿ ಯಲಹಂಕ, ವಿದ್ಯಾರಣ್ಯಪುರ, ಕೋಗಿಲು ಕ್ರಾಸ್​, ಅಲ್ಲಾಳಸಂದ್ರ ಸುತ್ತಮುತ್ತ, ಸಿಂಗಾಪುರ ಕೆರೆ ಸುತ್ತಮುತ್ತ, ನಾಗಾವರ ಮುಂತಾದ ಕಡೆ ಹೆಚ್ಚು ಸಮಸ್ಯೆಯಾಗಿದೆ.

ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್ ಬೇಸ್​ಮೆಂಟ್​ಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಬೇಸ್​ಮೆಂಟ್​​ನಲ್ಲಿ ನಿಲ್ಲಿಸಿದ್ದ ಅವರ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿದೆ. ಎಷ್ಟರಮಟ್ಟಿಗೆ ಅಂದ್ರೆ ಅಲ್ಲಿನ ನಿವಾಸಿಗಳನ್ನ ರಬ್ಬರ್​​ ಬೋಟ್​ ಬಳಸಿ ರಕ್ಷಣೆ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಈ ಅಪಾರ್ಟ್​ಮೆಂಟ್​​ನಲ್ಲಿ ಸುಮಾರು 600 ಮನೆಯಲ್ಲಿ ಆರು ಸಾವಿರ ಜನ ವಾಸವಿದ್ದಾರೆ. ಸದ್ಯ ಇಲ್ಲಿನ ಪರಿಸ್ಥಿತಿಗೆ ನಿವಾಸಿಗಳು ಬಿಬಿಎಂಪಿಗೆ ಹಿಡಿಶಾಪ ಹಾಕ್ತಿದ್ದಾರೆ.

ಈ ಬಗ್ಗೆ ಮಾತನಾಡಿರೋ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಯಲಹಂಕ ಕೆರೆ ಪಕ್ಕದ ತಗ್ಗು ಪ್ರದೇಶದಲ್ಲಿ ಕೇಂದ್ರೀಯ ವಿಹಾರ ನಿರ್ಮಾಣವಾಗಿದೆ. ಹೀಗಾಗಿ ನಿನ್ನೆ ಎರಡ್ಮೂರು ಗಂಟೆ ಸುರಿದ ಧಾರಾಕಾರ ಮಳೆಯಿಂದ ಕೆರೆ ನೀರು ನುಗ್ಗಿದೆ. ಇಂಥಾ ಸಂದರ್ಭದಲ್ಲಿ 8 ಅಡಿ ಸ್ಟಾರ್ಮ್​​ವಾಟರ್​ ಡ್ರೈನ್​ ಸಮರ್ಪಕವಾಗಲ್ಲ. ಹೀಗಾಗಿ 30ರಿಂದ 40 ಅಡಿ ಅಗಲದ ಡ್ರೈನ್ ವ್ಯವಸ್ಥೆ ಮಾಡೋ ಕೆಲಸ ನಡೀತಿದೆ. ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನ ಪೂರೈಸಲು ವಿವಿಧ ತಂಡಗಳನ್ನ, ಬೋಟ್​​ಗಳನ್ನ, ಎಸ್​ಡಿಆರ್​ಎಫ್​ ತಂಡವನ್ನ ನಿಯೋಜಿಸಿದ್ದೀವಿ ಎಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಯಲಹಂಕ ಶಾಸಕ ಎಸ್​.ಆರ್​. ವಿಶ್ವನಾಥ್, ರಾಜಕಾಲುವೆಯನ್ನ ಒತ್ತುವರಿ ಮಾಡಿ 25 ವರ್ಷದ ಹಿಂದೆ ಈ ಕೇಂದ್ರೀಯ ವಿಹಾರ್ ಅಪಾರ್ಟ್​ಮೆಂಟ್​ ಕಟ್ಟಿದ್ದಾರೆ. ಹೀಗಾಗಿ ರಾಜಕಾಲುವೆಯನ್ನ ಒತ್ತುವರಿಯನ್ನು ತೆರವು ಮಾಡ್ತೀವಿ ಎಂದಿದ್ದಾರೆ.

-masthmagaa.com

Contact Us for Advertisement

Leave a Reply