ಲೋಕಸಭೆ ಚುನಾವಣೆಗೂ ಮುನ್ನ ಆಪರೇಷನ್‌ ಹಸ್ತ?

masthmagaa.com:

ರಾಜ್ಯ ರಾಜಕೀಯಕ್ಕೆ ಮಹತ್ವದ ತಿರುವು ನೀಡಿದ ಮಿತ್ರ ಮಂಡಳಿ, ಮುಂದಿನ ದಾಳ ಉರುಳಿಸೋಕೆ ಸಜ್ಜಾಗ್ತಿದೆ ಅಂತ ತಿಳಿದು ಬಂದಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಬಿಜೆಪಿಗೆ ಹಾರಿದ್ದ ಪಕ್ಷಾಂತರಿಗಳು, ದೋಸ್ತಿ ಸರ್ಕಾರವನ್ನ ಉರುಳಿಸಿದ್ದಷ್ಟೇ ಅಲ್ಲ, ಬಿಜೆಪಿ ಸರ್ಕಾರ ರಚನೆಗೂ ಕಾರಣವಾಗಿ ಮಂತ್ರಿಗಳಾಗಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೇ ತಡ, ಇವರೆಲ್ಲರೂ ತಮ್ಮ ತವರು ಪಕ್ಷಕ್ಕೆ ವಾಪಸ್ ಆಗುವ ಸಿದ್ದತೆಯಲ್ಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗ್ತಿದೆ. ಕಾಂಗ್ರೆಸ್‌ನಿಂದ ಬಿಜೆಪಿ ಹೋಗಿದ್ದ 17 ಶಾಸಕರ ಪೈಕಿ ಕೆಲವರು 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡವರು ಸೈಲೆಂಟ್‌ ಆಗಿದ್ದಾರೆ. ಆದರೆ, ಚುನಾವಣೆಯಲ್ಲಿ ಗೆದ್ದಿರೋರು ಕ್ಷೇತ್ರದ ಅಭಿವೃದ್ದಿ ದೃಷ್ಟಿಯಿಂದ ಬಿಜೆಪಿ ತೊರೆಯಲು ನಾವು ಸಜ್ಜಾಗಿದ್ದೇವೆ ಅನ್ನೋ ಸಂದೇಶವನ್ನ ಈ ಶಾಸಕರು ಹರಿಬಿಡ್ತಿದ್ದಾರೆ. ಈ ಪೈಕಿ ಬೆಂಗಳೂರಿನ ಒಬ್ಬ ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಆ ಶಾಸಕರು ಯಾರು ಅನ್ನೋದು ಇನ್ನಷ್ಟೇ ಬಹಿರಂಗ ಆಗಬೇಕಿದೆ. ಇವರು ರಾಜೀನಾಮೆ ನೀಡಿದ ನಂತರ ಉಳಿದ ನಾಲ್ಕೈದು ಶಾಸಕರು ಹಂತ ಹಂತವಾಗಿ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿಸಲು ಕಾರಣರಾಗಿದ್ದ ಶಾಸಕರ ಪೈಕಿ ಐದಾರು ಮಂದಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಬರುವ ಉತ್ಸಾಹದಲ್ಲಿ ಇದ್ದಾರೆ. ಲೋಕಸಭಾ ಚುನಾವಣೆ ಹೊತ್ತಿಗೇ ರಾಜೀನಾಮೆ ಕೊಡುವ ಸಾಧ್ಯತೆಗಳಿವೆ. ಲೋಕಸಭಾ ಚುನಾವಣೆ ಜೊತೆಯಲ್ಲೇ ಈ ಶಾಸಕರು ರಾಜೀನಾಮೆ ನೀಡುವ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯುವ ಸಂಭವ ಇದೆ ಎನ್ನಲಾಗಿದೆ. ಆದ್ರೆ, ಈ ಮಿತ್ರ ಮಂಡಳಿಯ ಎಲ್ಲ ಸದಸ್ಯರೂ ತಮ್ಮ ತವರು ಪಕ್ಷಕ್ಕೆ ವಾಪಸ್ ಬರೋಕೆ ಸಾಧ್ಯವಿಲ್ಲ. ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಈ ನಾಯಕರು ಆಡಿದ ಮಾತುಗಳು, ಎಸಗಿದ ಕೃತ್ಯಗಳನ್ನ ಪಕ್ಷದ ನಾಯಕರು ಮರೆತಿಲ್ಲ. ಅದರಲ್ಲೂ ಬೆಂಗಳೂರಿನ ಒಬ್ಬ ಬಿಜೆಪಿ ಶಾಸಕರ ಕಾಂಗ್ರೆಸ್ ಸೇರ್ಪಡೆಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಡಿ. ಕೆ. ಸುರೇಶ್ ವಿರೋಧ ಮಾಡ್ತಿದ್ಧಾರೆ ಅನ್ನೋ ಮಾಹಿತಿ ಇದೆ. ಅಷ್ಟೆ ಅಲ್ದೆ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಬರುವ ಶಾಸಕರಿಗೆ ತಮ್ಮ ಪಕ್ಷದಲ್ಲಿ ಫಸ್ಟ್‌ ಬೇಂಚ್ ಸಿಗಲ್ಲ ಅಂತಾ ಹೇಳಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪಕ್ಷಾಂತರಿಗಳಿಗೆ ಯಾವ ಸ್ಥಾನ ಮಾನ ಸಿಗಬಹುದು ಅನ್ನೋ ಸೂಚನೆಯನ್ನೂ ಈಗಾಗಲೇ ಕೊಟ್ಟಿದ್ಧಾರೆ. ಒಟ್ಟಿನಲ್ಲಿ ಐದರಿಂದ ಆರು ಶಾಸಕರಿಗೆ ಕಾಂಗ್ರೆಸ್ ಪಕ್ಷ ಗಾಳ ಹಾಕ್ತಿದೆ ಅನ್ನೋ ಮಾಹಿತಿ ಸಿಗ್ತಿದೆ. ಈ ಪೈಕಿ ಕೆಲ ಮೂಲ ಬಿಜೆಪಿಗರು ಇದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಮೂವರು ಹಾಗೂ ಉತ್ತರ ಕನ್ನಡದ ಓರ್ವ ಶಾಸಕರಿಗೆ ಪಕ್ಷಾಂತರ ಮಾಡುವ ಆಸಕ್ತಿ ಇದೆ ಅನ್ನೋ ಮಾಹಿತಿ ಇದೆ. ಆದ್ರೆ, ಈ ವಿಚಾರ ಇನ್ನೂ ಮಾತುಕತೆ ಹಂತದಲ್ಲೇ ಇದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಆಗಬಹುದು. ಇತ್ತ ಈ ಬಗ್ಗೆ ಮಾತಾಡಿರುವ ಸಂಸದ ಡಿ.ಕೆ ಸುರೇಶ್‌, ಪಕ್ಷಕ್ಕೆ ವಾಪಸ್ಸಾಗುವ ಇಚ್ಛೆ ವ್ಯಕ್ತಪಡಿಸಿರುವ ನಾಯಕರ ಬಗ್ಗೆ ಮಾಹಿತಿ ಇಲ್ಲ, ಅದರೆ ವಾಪಸ್ಸು ಬರುವವರಿಗೆ ಸ್ವಾಗತವಂತೂ ಇದ್ದೇ ಇದೆ. ಜೊತೆಗೆ ಈ ವಿಷಯದಲ್ಲಿ ಹೈಕಮಾಂಡ್ ಅಂತಿಮ ನಿರ್ಣಯ ತೆಗೆದುಕೊಳ್ಳುತ್ತದೆ ಅಂತ ಸುರೇಶ್ ಹೇಳಿದ್ದಾರೆ. ಇನ್ನೊಂದ್‌ ಕಡೆ ನನಗೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇಲ್ಲ. ಬಿಜೆಪಿಯಲ್ಲೇ ಇರುತ್ತೇನೆ ರಾಜಕೀಯ ಬೇಡ ಎನಿಸಿದರೇ ನಿವೃತ್ತಿಯಾಗುತ್ತೇನೆ. ನಾನು ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಲ್ಲ ಅಂತ ಶಾಸಕ ಮುನಿರತ್ನ ಹೇಳಿದ್ದಾರೆ. ಇದೇ ವೇಳೆ 17 ಶಾಸಕರಲ್ಲಿ ಯಾರು ಕಾಂಗ್ರೆಸ್‌ಗೆ ಹೋಗುತ್ತಾರೋ ಗೊತ್ತಿಲ್ಲ, ಆದ್ರೆ ನಾನಂತೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply