ಅಫ್ಘಾನಿಸ್ಥಾನದ ಯೋಧ ಸತ್ತಿದ್ದಕ್ಕೆ ಕೇರಳದ ಕುಟುಂಬಕ್ಕೆ ನೋವು..! ಕರಳು ಹಿಂಡುವ ಕಥೆ ನೋಡಿ

ಕೇರಳ: ದೂರದ ಅಫ್ಘಾನಿಸ್ತಾನದಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿ ಯೋಧನೊಬ್ಬ ವೀರಮರಣವನ್ನಪ್ಪಿದ್ದಾನೆ. ಆದ್ರೆ ಅದಕ್ಕೆ ಕೇರಳದ ಕುಟುಂಬವೊಂದು ತುಂಬ ದುಃಖ ವ್ಯಕ್ತಪಡಿಸಿದೆ. ಅದಕ್ಕೆ ಕಾರಣ ಕೇಳಿದ್ರೆ ನಿಮ್ಮ ಹೃದಯದಲ್ಲೂ ಅಯ್ಯೋ ಪಾಪ ಅಂತ ಮರುಕ ಹುಟ್ಟುತ್ತೆ. ಅಫ್ಘಾನಿಸ್ತಾನ ಸೇನಯ 35 ವರ್ಷದ ಅಬ್ದುಲ್ ರಹೀಮ್ ಎಂಬುವವರು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹಲವಾರು ಬಾಂಬ್​​ಗಳನ್ನು ನಿಷ್ಕ್ರಿಯಗೊಳಿಸಿ, ಅಬ್ದುಲ್ ರಹೀಮ್ ನೂರಾರು ಜನರ ಜೀವಗಳನ್ನು ಉಳಿಸಿದ್ದರು.  ಆದ್ರೆ 2012ರಲ್ಲಿ  ಬಾಂಬ್ ಬ್ಲಾಸ್ಟ್​ನಲ್ಲಿ ತನ್ನ ಕೈಗಳನ್ನು ಕಳೆದುಕೊಂಡಿದ್ದರು. 3 ವರ್ಷಗಳ ಕಾಲ ಕೈಗಳೇ ಇಲ್ಲದೇ ಅಬ್ದುಲ್ ರಹೀಮ್ ತುಂಬಾ ಕಷ್ಟ ಪಟ್ಟರು.

ನಂತರ 2015ರಲ್ಲಿ ಕೇರಳದ ಎರ್ನಾಕುಲಂನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಜಿ.ಜಿ.ಜೋಸೆಫ್ ಎಂಬುವವರು ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಜೋಸೆಫ್ ಕುಟುಂಬ ಅಂಗಾಂಗ ದಾನಕ್ಕೆ ಮುಂದಾಗಿತ್ತು. ಈ ವಿಚಾರ ತಿಳಿದ ಅಬ್ದುಲ್ ರಹೀಮ್ ಕುಟುಂಬ ಜೋಸೆಫ್ ಕುಟುಂಬದವರನ್ನು ಭೇಟಿಯಾಗಿ ಕೈಗಳನ್ನು ದಾನ ಮಾಡುವಂತೆ ಮನವಿ ಮಾಡಿದ್ದರು. ನಂತರ ಜೋಸೆಫ್ ಕುಟುಂಬದ ಒಪ್ಪಿಗೆಯೊಂದಿಗೆ ಅಮೃತ ಮೆಡಿಕಲ್ ಇನ್​ಸ್ಟಿಟ್ಯೂಟ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಅಬ್ದುಲ್​​​​​​​ಗೆ ಜೋಸೆಫ್ ಕೈಗಳನ್ನು ಕಸಿ ಮಾಡಿತ್ತು. ನಂತರ ಅಬ್ದುಲ್ ರಹೀಂ ಪುನಃ ಸೇನೆ ಸೇರಿ ತಮ್ಮ ಬಾಂಬ್ ನಿಷ್ಕ್ರಿಯಗೊಳಿಸೋ ಸೇವೆಯನ್ನು ಮುಂದುವರಿಸಿದ್ದರು. ಆದ್ರೆ ಫೆಬ್ರವರಿ 19ರಂದು ಬಾಂಬ್ ಸ್ಫೋಟದಲ್ಲಿ ಅಬ್ದುಲ್ ಸಾವನ್ನಪ್ಪಿದ್ದಾರೆ.

ಜೋಸೆಫ್ ಕೈಗಳನ್ನು ಪಡೆದಿದ್ದ ಅಬ್ದುಲ್ ಕೇರಳದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ಪ್ರತಿವರ್ಷ ಕೇರಳಕ್ಕೆ ಬಂದು ಜೋಸೆಫ್ ಕುಟುಂಬಸ್ಥರನ್ನು ಭೇಟಿಯಾಗುತ್ತಿದ್ದರು. ಅಬ್ದುಲ್ ಅವರಲ್ಲಿ ಜೋಸೆಫ್ ಕೈಗಳನ್ನು ನೋಡಿ ಜೋಸೆಫ್ ಕುಟುಂಬ ತುಂಬಾ ಸಂತಸಪಡುತ್ತಿತ್ತು. ಆದ್ರೀಗ ಅಬ್ದುಲ್ ಕೂಡ ಬಾರದ ಲೋಕಕ್ಕೆ ತೆರಳಿರೋದು ಜೋಸೆಫ್ ಕುಟುಂಬಸ್ಥರ ನೋವಿಗೂ ಕಾರಣವಾಗಿದೆ.

Contact Us for Advertisement

Leave a Reply