ಮೊಲದ ವೇಷದಲ್ಲಿ ‘ತೋಳ’ಬಾನ್​! ಬರಾದರ್ ಯಾರು ನಿಮಗೆ ಗೊತ್ತಾ?

masthmagaa:

ಅಫ್ಘಾನಿಸ್ತಾನವನ್ನು ಕಂಟ್ರೋಲ್​ಗೆ ತಗೊಂಡಿರೋ ತಾಲಿಬಾನಿಗಳು ಈಗ ಸ್ವಲ್ಪ ಸಾಫ್ಟ್ ಆಗಿರೋ ರೀತಿ ತೋರಿಸಿಕೊಳ್ತಿದ್ದಾರೆ. ಇವರು ಅಧಿಕಾರಕ್ಕೆ ಬರ್ತಿದ್ದಂತೆ ವಿಶ್ವದೆಲ್ಲೆಡೆ 1996ರಿಂದ 2001ರವರೆಗಿನ ತಾಲಿಬಾನಿಗಳ ಭಯಾನಕ ಆಡಳಿತದ ಬಗ್ಗೆ ಚರ್ಚೆ ನಡೀತಾ ಇದೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನ್ ವಕ್ತಾರ ಸುಹೇಲ್ ಶಹೀನ್​​, ಈ ಸಲ ಮಹಿಳೆಯರಿಗೆ ಬುರ್ಖಾ ಕಂಪಲ್ಸರಿ ಮಾಡೋದಿಲ್ಲ. ಹಿಜಬ್ ಹಾಕಿದ್ರೆ ಸಾಕು.. ಬೇರೆ ಬೇರೆ ರೀತಿಯ ಹಿಜಬ್​ಗಳಿವೆ ಅಂತ ಹೇಳಿದ್ದಾರೆ. ಆದ್ರೆ ಯಾವ ರೀತಿಯ ಹಿಜಬ್ ಹಾಕ್ಬೇಕು ಅಂತ ಸ್ಪಷ್ಟಪಡಿಸಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದಾಗ ಬುರ್ಕಾ, ಅದು ಕೂಡ ಯಾವ ರೀತಿ ಅಂತೀರಿ.. ತಲೆಯಿಂದ ಕಾಲುವರೆಗೆ ಫುಲ್​ ಕವರ್ ಆಗ್ಬೇಕು.. ಕಣ್ಣು, ಮುಖ ಕೂಡ ಕಾಣಂಗಿಲ್ಲ.. ಅಂಥಾ ಬುರ್ಕಾ ಹಾಕಬೇಕಿತ್ತು. ಅಷ್ಟೇ ಅಲ್ಲ.. ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಅವಕಾಶ ಇರಲಿಲ್ಲ.. ಆದ್ರೆ ಈ ಸಲ ಶಿಕ್ಷಣಕ್ಕೂ ನಾವೇನು ಅಡ್ಡಿಪಡಿಸಲ್ಲ.. ಮಹಿಳೆಯರು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಎಷ್ಟು ಬೇಕಾದ್ರೂ ಓದ್ಬೋದು.. ಈಗ ತಾಲಿಬಾನಿಗಳು ಕಂಟ್ರೋಲ್​​ಗೆ ತೆಗೆದುಕೊಂಡಿರೋ ಪ್ರದೇಶದಲ್ಲಿ ಇನ್ನೂ ಕೂಡ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ ಅಂತ ಸುಹೇಲ್ ಶಹೀನ್ ಹೇಳಿದ್ದಾರೆ.

ಇತ್ತ ಅಫ್ಘಾನಿಸ್ತಾನ ವಶಕ್ಕೆ ಪಡೆದ ಬಳಿಕ ತಾಲಿಬಾನಿಗಳು ಮೊದಲ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಕೆಲವೊಂದು ಮಹತ್ವದ ವಿಚಾರಗಳ ಬಗ್ಗೆ ಮಾತಾಡಿದ್ದಾರೆ.. ಏನೆಲ್ಲಾ ಹೇಳಿದ್ರು ಅಂತ ಒನ್​ಬೈನ್ ಒನ್ ನೋಡ್ಕೊಂಡು ಮುಂದೆ ಹೋಗೋಣ..

ಮಾಧ್ಯಮಗಳು ಕಾರ್ಯ ನಿರ್ವಹಿಸಬಹುದು ಅಂದಿರೋ ತಾಲಿಬಾನ್, 3 ಸಲಹೆಗಳನ್ನ ನೀಡಿದೆ. ಮೊದಲನೆಯದಾಗಿ ಇಸ್ಲಾಮಿಕ್ ಮೌಲ್ಯಗಳಿಗೆ ವಿರುದ್ಧವಾಗಿರಬಾರದು, 2ನೆಯದಾಗಿ ಭೇದಭಾವ ಮಾಡಬಾರದು, ಮೂರನೆಯದಾಗಿ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಏನನ್ನೂ ಪ್ರಸಾರ ಮಾಡ್ಬಾರ್ದು..

ಇಷ್ಟು ದಿನಗಳ ಯುದ್ಧದ ವೇಳೆ ಜನ ಮತ್ತು ಕುಟುಂಬಗಳಿಗೆ ದೊಡ್ಡ ಮಟ್ಟದ ಹಾನಿಯಾಗಿದೆ. ಇದು ಉದ್ದೇಶಪೂರ್ವಕವಲ್ಲ. ಅನಿಯಂತ್ರಿತ ಪರಿಸ್ಥಿತಿಯಲ್ಲಿ ನಡೆದು ಹೋಗಿದೆ ಅಂತ ಹೇಳಿದ್ದಾರೆ. ಇಲ್ಲಿಗೆ ಅಫ್ಘಾನಿಸ್ತಾನ ಯುದ್ಧ ಅಂತ್ಯವಾಗಿದೆ. ನಾವು ಎಲ್ಲರನ್ನೂ ಕ್ಷಮಿಸುತ್ತೇವೆ. ನಮ್ಮನ್ನು ವಿರೋಧಿಸಿದ್ದವರನ್ನೂ ಕ್ಷಮಿಸಿ ಎಲ್ಲರನ್ನೂ ಒಟ್ಟುಗೂಡಿಸಿ ಸರ್ಕಾರ ರಚಿಸುತ್ತೇವೆ ಅಂತ ಭರವಸೆ ನೀಡಿದ್ದಾರೆ.

ಇಸ್ಲಾಂನಲ್ಲಿ ಮಹಿಳೆಯರಿಗೆ ಏನೆಲ್ಲಾ ಹಕ್ಕುಗಳನ್ನು ನೀಡಲಾಗಿದ್ಯೋ ಅವೆಲ್ಲವನ್ನು ನೀಡಲಾಗುತ್ತೆ. ಆರೋಗ್ಯ ಮತ್ತು ಅವರ ಅಗತ್ಯತೆ ಇರೋ ಇತರೆ ವಲಯಗಳಲ್ಲಿ ಅವರು ಕೆಲಸ ಮಾಡ್ಬೋದು. ಯಾವುದೇ ರೀತಿ ತಾರತಮ್ಯ ಇರೋದಿಲ್ಲ.

1990ರ ತಾಲಿಬಾನಿಗಳು ಮತ್ತು ಈಗಿನ ತಾಲಿಬಾನಿಗಳ ನಡುವೆ ಏನ್ ವ್ಯತ್ಯಾಸ ಅಂತ ಕೇಳಿದಾಗ, ನಮ್ಮ ಸಿದ್ಧಾಂತ ಮತ್ತು ನಂಬಿಕೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಯಾಕಂದ್ರೆ ನಾವು ಈಗಲೂ ಮುಸ್ಲಿಮರೇ.. ಆದ್ರೆ ಅನುಭವಗಳಲ್ಲಿ ಬದಲಾವಣೆಯಾಗಿದೆ. ಈಗ ಹೆಚ್ಚು ಅನುಭವಿಗಳು ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರೋರು ಇದ್ದಾರೆ ಅಂತ ತಾಲಿಬಾನಿಗಳು ಹೇಳಿದ್ದಾರೆ.

ಅಫ್ಘಾನಿಸ್ತಾನದಿಂದ ಜಗತ್ತಿನ ಯಾವುದೇ ದೇಶಕ್ಕೆ ಏನೂ ತೊಂದ್ರೆಯಾಗಲ್ಲ. ರಾಯಭಾರಿ ಕಚೇರಿಗಳಿಗೆ ನಾವೇ ಭದ್ರತೆ ಕೊಡ್ತೀವಿ ಅಂತೆಲ್ಲಾ ಭರವಸೆ ನೀಡಿದ್ದಾರೆ.

ಆದ್ರೆ ಇದ್ರ ಬೆನ್ನಲ್ಲೇ ಅಫ್ಘಾನಿಸ್ತಾನ ಸರ್ಕಾರಿ ಮಾಧ್ಯಮಗಳಲ್ಲಿ ಮಹಿಳಾ ಆ್ಯಂಕರ್​ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ. ನಿನ್ನೆಯಷ್ಟೇ ತಾಲಿಬಾನಿ ನಾಯಕ ಅಲ್ಲಿನ ಸ್ಥಳೀಯ ಮಾಧ್ಯಮವೊಂದ್ರಲ್ಲಿ ಮಹಿಳಾ ಆ್ಯಂಕರ್​​ಗೆ ಇಂಟರ್​ವ್ಯೂ ನೀಡಿದ್ರು. ಇದ್ನ ನೋಡಿದ ಜನ ಓ ಇನ್ನಾದ್ರೂ ತಾಲಿಬಾನಿಗಳು ಬದಲಾಗ್ಬೋದು ಅಂತ ಅಂದ್ಕೊಂಡಿದ್ರು. ಆದ್ರೆ ಅದ್ರ ಮರುದಿನವೇ ಈ ಆದೇಶ ಹೊರಡಿಸಲಾಗಿದೆ. ಮಹಿಳಾ ಆ್ಯಂಕರ್​​ಗಳನ್ನು ತೆಗೆದುಹಾಕಿ, ಅವರ ಜಾಗದಲ್ಲಿ ತಾಲಿಬಾನಿ ಆ್ಯಂಕರ್​ಗಳನ್ನು ನಿಯೋಜಿಸಲಾಗಿದೆ. ಇನ್ಮುಂದೆ ಅವರೇ ನ್ಯೂಸ್ ಓದ್ತಾರೆ.

20 ವರ್ಷದ ಹಿಂದೆ ತಾಲಿಬಾನ್ ಅಧಿಕಾರದಲ್ಲಿದ್ದಾಗ ಅದರ ಬಹುತೇಕ ನಾಯಕರು ರಹಸ್ಯವಾಗಿ ಬದುಕುತ್ತಿದ್ದರು. ಆದ್ರೆ ಈ ಸಲ ಹಾಗೆ ಮಾಡಲ್ಲ, ನಿಧಾನವಾಗಿ ನಮ್ಮೆಲ್ಲಾ ನಾಯಕರ ಮುಖಗಳನ್ನ ಜಗತ್ತು ನೋಡುತ್ತೆ. ಅದರಲ್ಲಿ ಯಾವುದೇ ಸೀಕ್ರೆಸಿ ಇರಲ್ಲ ಅಂತ ಹಿರಿಯ ತಾಲಿಬಾನ್ ಅಧಿಕಾರಿಯೊಬ್ರು ಹೇಳಿದ್ದಾರೆ. ಅಲ್ಲದೆ ಅಪ್ಘನಿಸ್ತಾನವನ್ನ ತಮ್ಮ ಕಂಟ್ರೋಲ್​ಗೆ ತೆಗೆದುಕೊಂಡಿದ್ದನ್ನ ತಾಲಿಬಾನ್ ಸದಸ್ಯರು ಸಂಭ್ರಮಿಸಬಾರದು ಅಂತಾನೂ ಕರೆ ಕೊಟ್ಟಿದ್ದಾರೆ. ಜೊತೆಗೆ ಜನ ತಮ್ಮ ಬಳಿ ಇರೋ ಶಸ್ತ್ರಾಸ್ತ್ರಗಳನ್ನ ತಾಲಿಬಾನಿಗಳಿಗೆ ಹಸ್ತಾಂತರಿಸುವಂತೆಯೂ ಸೂಚಿಸಿದ್ದಾರೆ.

ತಾಲಿಬಾನ್​ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರಾದ ಹಾಗೂ ಈಗ ಅಫ್ಘನಿಸ್ತಾನದ ಮಧ್ಯಂತರ ಸರ್ಕಾರದ ಅಧ್ಯಕ್ಷ ಎನ್ನಲಾಗ್ತಿರೋ ಮುಲ್ಲಾ ಅಬ್ದುಲ್ ಘನಿ ಬರಾದರ್ ಮಂಗಳವಾರ ಅಫ್ಘನಿಸ್ತಾನಕ್ಕೆ ಬಂದಿದ್ದಾರೆ ಅಂತ ತಾಲಿಬಾನ್​ ತಿಳಿಸಿದೆ. ಕತಾರ್​ನ ದೋಹಾದಿಂದ ಅಫ್ಘನಿಸ್ತಾನದ ಎರಡನೇ ದೊಡ್ಡ ನಗರವಾದ ಕಂದಹಾರ್​ಗೆ ಬಂದಿದ್ದಾರೆ ಮುಲ್ಲಾ ಬರಾದರ್​. ತಾಲಿಬಾನ್​ ಹುಟ್ಟಿದ್ದು ಕಂದಹಾರ್​​ನಲ್ಲಿ. ಅಲ್ಲದೆ 1996ರಿಂದ 2001ರವರೆಗೆ ತಾಲಿಬಾನ್ ಅಧಿಕಾರದಲ್ಲಿದ್ದಾಗ ಕಂದಹಾರೇ ಅವರ ರಾಜಧಾನಿಯಾಗಿತ್ತು. ಈಸಲ ಏನ್​ ಮಾಡ್ತಾರೆ ನೋಡ್ಬೇಕು. ಇನ್ನು ಮುಲ್ಲಾ ಬರಾದರ್​, ಅಫ್ಘನಿಸ್ತಾನಕ್ಕೆ ಕಾಲಿಟ್ಟಿರೋದು 11 ವರ್ಷಗಳ ಬಳಿಕ ಇದೇ ಮೊದಲು. ಕಾರಣ, 2010ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಬರಾದರ್ ಅವರನ್ನ ಪಾಕ್​ನ ಐಎಸ್​ಐ ಮತ್ತು ಅಮೆರಿಕದ ಸಿಐಎ ಅರೆಸ್ಟ್ ಮಾಡಿತ್ತು. ಅಲ್ಲಿಂದ 2018ವರೆಗೆ ಪಾಕಿಸ್ತಾನದ ಜೈಲಿನಲ್ಲಿಡಲಾಗಿತ್ತು. 2018ರಲ್ಲಿ ತಾಲಿಬಾನಿಗಳ ಜೊತೆ ಶಾಂತಿ ಮಾತುಕತೆಗೋಸ್ಕರ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮನವಿ ಮೇರೆಗೆ ಪಾಕ್​ ಸರ್ಕಾರ ಮುಲ್ಲಾ ಬರಾದರ್​ರನ್ನ ರಿಲೀಸ್ ಮಾಡಿತ್ತು. 2018ರಿಂದಲೂ ಕತಾರ್​ನ ದೋಹದಲ್ಲಿ ಶಾಂತಿ ಮಾತುಕತೆ ನಡೆಸ್ತಾ ಇದ್ರು. 2020ರಲ್ಲಿ ಅಮೆರಿಕ ಜೊತೆ ಒಪ್ಪಂದಕ್ಕೂ ಸಹಿ ಹಾಕಿದ್ರು. ಇದೀಗ ಮೊದಲ ಸಲ ಅಫ್ಘನಿಸ್ತಾನಕ್ಕೆ ವಾಪಸ್ ಬಂದಿದ್ದಾರೆ. ಸೋ ಶೀಘ್ರದಲ್ಲಿ ಅಫ್ಘನಿಸ್ತಾನದಲ್ಲಿ ತಾಲಿಬಾನ್​ ಸರ್ಕಾರ ರಚನೆಯಾಗೋ ಲಕ್ಷಣ ಕಾಣ್ತಿದೆ. ಅಂದ್ಹಾಗೆ ತಾಲಿಬಾನ್ ಹುಟ್ಟುಹಾಕಿದ ಮುಲ್ಲಾ ಮೊಹಮ್ಮದ್​ ಓಮರ್​ ಇವರಿಗೆ ಬರಾದರ್ ಅಂತ ಕರೆದ್ರು. ಪಶ್ತು ಭಾಷೆಯಲ್ಲಿ ಬರಾದರ್​ ಅಂದ್ರೆ ಬ್ರದರ್ ಅಥವಾ ಸಹೋದರ ಅಂತರ್ಥ. ಈ ಬರಾದರ್​ ತಾಲಿಬಾನ್​ನ ಪೊಲಿಟಿಕಲ್​ ಆಫೀಸ್​​ ಹೆಡ್​ ಕೂಡ ಆಗಿದ್ಧಾರೆ.

ತಾಲಿಬಾನಿಗಳು ಕಾಬೂಲಿಗೆ ಬರ್ತಿದ್ದಂತೆ ಅಶ್ರಫ್ ಘನಿ ದೇಶವನ್ನೇ ಬಿಟ್ಟು ಓಡಿಹೋಗಿದ್ದಾರೆ. ತಾಲಿಬಾನಿಗಳು ಮಧ್ಯಂತರ ಸರ್ಕಾರ ರಚನೆ ಮಾಡಿಯಾಗಿದೆ. ಆದ್ರೆ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಮಾತ್ರ ಕಾನೂನು ಪ್ರಕಾರ ಇನ್ನೂ ನಾನೇ ಉಸ್ತುವಾರಿ ಅಧ್ಯಕ್ಷ ಅಂತ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಅವರು, ಅಫ್ಘಾನಿಸ್ತಾನ ಸಂವಿಧಾನದ ಪ್ರಕಾರ ಅಧ್ಯಕ್ಷರಾಗಿರೋರು ಓಡಿಹೋದ್ರೆ, ಸಾವನ್ನಪ್ಪಿದ್ರೆ, ನಾಪತ್ತೆಯಾದ್ರೆ, ರಾಜೀನಾಮೆ ನೀಡಿದ್ರೆ ಉಪಾಧ್ಯಕ್ಷರಾಗಿರೋರು ಉಸ್ತುವಾರಿ ಅಧ್ಯಕ್ಷರಾಗ್ತಾರೆ. ಅದ್ರ ಪ್ರಕಾರ ನಾನು ಇನ್ನೂ ಕೂಡ ಉಸ್ತುವಾರಿ ಅಧ್ಯಕ್ಷ. ನಾನಿನ್ನೂ ದೇಶದಲ್ಲೇ ಇದೀನಿ. ದೇಶದ ಭದ್ರತೆಗಾಗಿ ವಿಶ್ವದ ನಾಯಕರ ಬೆಂಬಲ ಪಡೆಯೋಕೆ ಯತ್ನಿಸ್ತಿದ್ದೇನೆ ಅಂತ ಹೇಳಿದ್ದಾರೆ. ಆದ್ರೆ ಇವರು ಕೂಡ ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ ಟ್ವೀಟ್ ಮಾಡಿರೋ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ ಇದ್ರ ಬಗ್ಗೆ ವಾದ ಮಾಡಿ ಪ್ರಯೋಜನ ಇಲ್ಲ.. ನಾನು ಯಾವುದೇ ಕಾರಣಕ್ಕೂ ತಾಲಿಬಾನ್ ಉಗ್ರರಿಗೆ ತಲೆಬಾಗೋದಿಲ್ಲ. ಅಫ್ಘನ್ ಜನ ಇನ್ನೂ ಕೂಡ ಸ್ಪಿರಿಟ್ ಕಳೆದುಕೊಂಡಿಲ್ಲ ಅಂತ ಹೇಳಿದ್ದಾರೆ.

ಅಮೆರಿಕ ಬೆಂಬಲಿತ ಅಫ್ಘನಿಸ್ತಾನ ಸರ್ಕಾರ ಪತನವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಅವರ ಅಪ್ರೂವಲ್​ ರೇಟಿಂಗ್ ಕುಸಿದಿದೆ. ಇದೇ ಮೊದಲ ಸಲ ಅದು 50 ಪರ್ಸೆಂಟ್​​ಗಿಂತ ಕೆಳಗೆ ಕುಸಿದಿದೆ. ಅಪ್ರೂವಲ್​ ರೇಟಿಂಗ್ ಅಂದ್ರೆ ಅಮೆರಿಕ ಅಧ್ಯಕ್ಷರ ಕುರ್ಚಿಯಲ್ಲಿ ಕೂತಿರೋ ಬೈಡೆನ್ ಅವರ ಪರ್ಫಾಮೆನ್ಸ್ ಹೇಗಿದೆ ಅನ್ನೋದನ್ನ ಅಳೆಯೋ ಸಾಧನ. ಇದಕ್ಕಾಗಿ ರಾಯ್ಟಿರ್ಸ್ ಸುದ್ದಿಸಂಸ್ಥೆ ಮತ್ತು ಇಪ್ಸೋಸಿಸ್​ ಆಗಾಗ ನ್ಯಾಷನಲ್ ಒಪಿನಿಯನ್​ ಪೋಲ್​​​ ನಡೆಸಿ ಜನಾಭ್ರಿಪ್ರಾಯ ಸಂಗ್ರಹಿಸುತ್ತೆ. ಕಳೆದ ಶುಕ್ರವಾರ, ಅಂದ್ರೆ ಅಫ್ಘನಿಸ್ತಾನ ಸರ್ಕಾರ ಪತನವಾಗೋಕೂ ಮೊದಲು ನಡೆಸಿದ ಸರ್ವೆಯಲ್ಲಿ ಬೈಡೆನ್ ಅವರ ಅಪ್ರೂವಲ್ ರೇಟಿಂಗ್ 53 ಪರ್ಸೆಂಟ್​ ಇತ್ತು. ಇದೀಗ ಸೋಮವಾರ ಅಂದ್ರೆ ತಾಲಿಬಾನಿಗಳ ನಿಯಂತ್ರಣಕ್ಕೆ ಅಫ್ಘನಿಸ್ತಾನ ಹೋದ ನಂತ್ರೆ ನಡೆಸಿದ ಸರ್ವೆಯಲ್ಲಿ ಅದು 7 ಪರ್ಸೆಂಟ್​ ಕುಸಿದು 46 ಪರ್ಸೆಂಟ್​​ಗೆ ಬಂದಿದೆ. ಅಫ್ಘನಿಸ್ತಾನದ ಈ ಪರಿಸ್ಥಿತಿಗೆ ಅಮೆರಿಕವೇ ಕಾರಣ, ಬೈಡೆನ್ನೇ ಕಾರಣ ಅಂತ ಟೀಕೆಗಳು ಕೇಳಿ ಬರ್ತಿರುವಾಗಲೇ ಅವರ ಅಪ್ರೂವಲ್​ ರೇಟಿಂಗ್ ದಾಖಲೆ ಮಟ್ಟದಲ್ಲಿ ಕುಸಿದಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಟೇಕೋವರ್​ ಬೆನ್ನಲ್ಲೇ ಅಮೆರಿಕಕ್ಕೆ ಈ ಬಗ್ಗೆ ಗೊತ್ತಿರಲಿಲ್ವಾ ಅನ್ನೋ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಆದ್ರೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಕಳೆದ ಬೇಸಿಗೆಯಲ್ಲೇ ತಾಲಿಬಾನಿಗಳು ಅಫ್ಘಾನಿಸ್ತಾವನ್ನು ತುಂಬಾ ವೇಗವಾಗಿ ಟೇಕೋವರ್ ಮಾಡ್ತಾರೆ ಅನ್ನೋ ಎಚ್ಚರಿಕೆ ನೀಡಿದ್ವು ಅಂತ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದ್ರೆ ಮೊನ್ನೆ ಮೊನ್ನೆವರೆಗೂ ಇದೇ ಬೈಡೆನ್ ಮತ್ತು ಅಮೆರಿಕ ರಕ್ಷಣಾ ಇಲಾಖೆ ಸದ್ಯಕ್ಕೆ ಕಾಬೂಲ್ ತಾಲಿಬಾನಿಗಳ ವಶಕ್ಕೆ ಬರಲ್ಲ. ಅದಕ್ಕೆ ಇನ್ನೂ ಮೂರು ತಿಂಗಳು ಬೇಕು ಅಂತೆಲ್ಲಾ ಹೇಳ್ಕೊಂಡು ಬಂದಿದ್ರು.

ಅಮೆರಿಕ ಅಧ್ಯಕ್ಷ ಬೈಡೆನ್ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​​​ಗೆ ಕರೆ ಮಾಡಿ ಮಾತನಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಟೇಕೋವರ್ ಮಾಡಿದ ಬಳಿಕ ವಿದೇಶಿ ನಾಯಕರಿಗೆ ಜೋ ಬೈಡೆನ್ ಮಾಡಿದ ಮೊದಲ ಕರೆ ಇದಾಗಿದೆ.. ಅಫ್ಘಾನಿಸ್ತಾನದ ವಿಚಾರವಾಗಿ ಮುಂದಿನ ವಾರ ಜಿ7 ಶೃಂಗಸಭೆ ನಡೆಸೋಕೆ ಉಭಯನಾಯಕರು ನಿರ್ಧರಿಸಿದ್ದಾರೆ ಅಂತ ವೈಟ್ ಹೌಸ್ ಮಾಹಿತಿ ನೀಡಿದೆ.

ತಾಲಿಬಾನಿಗಳು ಅಪಾರ ಪ್ರಮಾಣದಲ್ಲಿ ನಮ್ಮ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ ಅಂತ ಅಮೆರಿಕದ ವೈಟ್​​ಹೌಸ್ ಒಪ್ಪಿಕೊಂಡಿದೆ. ರಕ್ಷಣ ಸಾಮಗ್ರಿಗಳು ಏನಾದ್ವು ಅನ್ನೋ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದ್ರೆ ಅದ್ರಲ್ಲಿ ಒಂದಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳು ಖಂಡಿತವಾಗಿಯೂ ತಾಲಿಬಾನಿಗಳ ಕೈಸೇರಿದೆ ಅಂತ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲ್ಲಿವನ್ ಹೇಳಿದ್ದಾರೆ. ಇತ್ತೀಚೆಗೆ ಶಸ್ತ್ರಗಾರಗಳನ್ನು ತಾಲಿಬಾನಿಗಳು ವಶಕ್ಕೆ ಪಡೆದಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು.

ವಿಶ್ವಸಂಸ್ಥೆಯ ಮಾನವ ಹಕ್ಕು ಪರಿಷತ್​ ಅಫ್ಘಾನಿಸ್ತಾನ ವಿಚಾರವಾಗಿ ಆಗಸ್ಟ್​ 24ಕ್ಕೆ ಸಭೆ ಕರೆದಿದೆ. ಈ ಸಭೆಗಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ ಅಧಿಕೃತವಾಗಿ ಬೇಡಿಕೆ ಸಲ್ಲಿಸಿದ್ವು. ಅದಕ್ಕೆ 89 ದೇಶಗಳು ಬೆಂಬಲ ಕೂಡ ನೀಡಿದ್ವು. ಅದ್ರಂತೆ ಜಿನೇವಾದಲ್ಲಿ ಈ ಸಭೆ ನಡೆಯಲಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಭಯೋತ್ಪಾದನೆ ಬೆಳೆಯಲು, ಉಗ್ರರ ತಾಣವಾಗಲು ಬಿಡಬಾರದು ಅಂತ ನ್ಯಾಟೋ ಹೇಳಿದೆ. ಒಂದ್ವೇಳೆ ಅಂತಹ ಕೃತ್ಯಗಳಲ್ಲಿ ಭಾಗಿಯಾದ್ರೆ, ದೂರದಿಂದಲೇ ಭಯೋತ್ಪಾದಕರ ಗುಂಪನ್ನು ಹೊಡೆಯೋ ತಾಕತ್ತು ನ್ಯಾಟೋ ಪಡೆಗಿದೆ ಅಂತ ಕೂಡ ವಾರ್ನಿಂಗ್ ಕೊಟ್ಟಿದೆ.

ಇನ್ನು ತಾಲಿಬಾನಿಗಳಿಗೆ ಸಂಬಂಧಿಸಿದ ಎಲ್ಲಾ ಅಕೌಂಟ್​​ಗಳನ್ನು ತೆಗೆದು ಹಾಕ್ತೀವಿ ಅಂತ ಯೂಟ್ಯೂಬ್ ಕೂಡ ಘೋಷಿಸಿದೆ. ನಿನ್ನೆಯಷ್ಟೇ ಫೇಸ್​ಬುಕ್ ಮತ್ತು ಟ್ವಿಟ್ಟರ್​​ ಕೂಡ ತಾಲಿಬಾನಿಗಳಿಗೆ ಸಂಬಂಧಿಸಿದ ಕಂಟೆಂಟ್​​ಗಳನ್ನು ನಮ್ಮ ವೇದಿಕೆಯಿಂದ ತೆಗೆದು ಹಾಕ್ತೀವಿ ಅಂತ ಘೋಷಿಸಿಕೊಂಡಿದ್ವು.

ತಾಲಿಬಾನಿಗಳಿಗೆ ಹೆದರಿರೋ ಸಾವಿರಾರು ಅಫ್ಘನ್ನರು ಪಾಕಿಸ್ತಾನಕ್ಕೆ ಹೋಗ್ತಿದ್ದಾರೆ. ಇದರಲ್ಲಿ ರೋಗಿಗಳು, ಜೈಲುಗಳಿಂದ ಬಿಡುಗಡೆಯಾದವರು ಇದ್ದಾರೆ. ಪಾಕ್​ಗೆ ಹೋಗಲು ಪ್ರಮುಖ ಮಾರ್ಗ ಅಂದ್ರೆ ಅಫ್ಘನಿಸ್ತಾನ ಮತ್ತು ಪಾಕ್​ ಗಡಿಯಲ್ಲಿರೋ ಸ್ಪಿನ್​ ಬೋಲ್ಡಾಕ್​ ಮತ್ತು ಚಾಮನ್​ ಬಾರ್ಡರ್ ಕ್ರಾಸಿಂಗ್​. ಹಾಗಂತ ಪಾಕ್​ ಬಂದವರನ್ನೆಲ್ಲಾ ಸುಮ್ನೆ ಒಳಗೆ ಬಿಡ್ಕೊಳ್ತಿಲ್ಲ. ಅಫ್ಘನ್​ ಪ್ರಜೆಗಳು ಅನ್ನೋದಕ್ಕೆ ಸಂಬಂಧಪಟ್ಟ ದಾಖಲೆ ಇದ್ದೋರಿಗೆ ಮಾತ್ರ ಪಾಕ್​ಗೆ ಬರಲು ಅವಕಾಶ ಕೊಡ್ತಿದೆ.

ಅಫ್ಘನಿಸ್ತಾನದಿಂದ ಅಮೆರಿಕ ನಿನ್ನೆ ಒಂದೇ ದಿನ ಸುಮಾರು 1,100 ಅಮೆರಿಕನ್ ಪ್ರಜೆಗಳು ಮತ್ತು ಅವರ ಸಂಬಂಧಿಕರನ್ನ 13 ಸೇನಾ ವಿಮಾನದಲ್ಲಿ ವಾಪಸ್ ಕರೆಸಿಕೊಂಡಿದೆ ಅಂತ ಹೇಳಿದೆ. ಈ ಮೂಲಕ ಅಮೆರಿಕ ಇದುವರೆಗೆ 3,200 ಜನರನ್ನ ಸ್ಥಳಾಂತರ ಮಾಡಿದಂತಾಗಿದೆ. ಇನ್ನೂ 11 ಸಾವಿರ ಅಮೆರಿಕನ್ಸ್ ಅಫ್ಘನಿಸ್ತಾನದಲ್ಲಿದ್ದಾರೆ. ಇವರೆಲ್ಲರನ್ನ ಸುರಕ್ಷಿತವಾಗಿ ಕರ್ಕೊಂಡ್​ ಹೋಗೋಕೆ ಬಿಡ್ತೀವಿ ಅಂತ ತಾಲಿಬಾನ್ ಭರವಸೆ ಕೊಟ್ಟಿದೆ ಅಂತಾನೂ ಅಮೆರಿಕ ಹೇಳಿದೆ. ಅತ್ತ ಕಾಬೂಲ್​ ಏರ್​​ಪೋರ್ಟ್​ನಿಂದ ತಮ್ಮ ತಮ್ಮ ದೇಶದ ನಾಗರಿಕರನ್ನ ಹೊತ್ತ ವಿಮಾನಗಳೂ ಯುಕೆ ಮತ್ತು ಜರ್ಮನಿಯಲ್ಲಿ ಲ್ಯಾಂಡ್ ಆಗಿದೆ. ಆಸ್ಟ್ರೇಲಿಯಾ ತನ್ನ ಮೊದಲ ವಿಮಾನದಲ್ಲಿ 26 ಜನರನ್ನ ಸ್ಥಳಾಂತರಿಸಿದೆ. ಇನ್ನು ಅಫ್ಘನಿಸ್ತಾನದಿಂದ 20,000 ಜನರನ್ನ ಶಿಫ್ಟ್ ಮಾಡಲು ತಾವು ಸಿದ್ಧತೆ ನಡೆಸ್ತಿದ್ದೀವಿ ಅಂತ ಯುನೈಟೆಡ್​ ಕಿಂಗ್ಡಮ್​ ಹೇಳಿದೆ.

ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ 118 ಮಂದಿ ಮತ್ತು 9 ಮಂದಿ ಭಾರತೀಯರನ್ನು ನೇಪಾಳಕ್ಕೆ ಕರೆದುಕೊಂಡು ಬರಲಾಗಿದೆ. ಈ 127 ಮಂದಿ ಕಾಬೂಲ್​​ನಿಂದ ಕತಾರ್​ ಏರ್​​​ ವಿಮಾನದಲ್ಲಿ ಕಾಟ್ಮುಂಡುವಿಗೆ ಬಂದಿಳಿದಿದ್ದಾರೆ.

-masthmagaa.com

Contact Us for Advertisement

Leave a Reply