ಹತ್ರಾಸ್​ ಬಳಿಕ ಉತ್ತರಪ್ರದೇಶದಲ್ಲಿ ಮತ್ತಷ್ಟು ರೇಪ್ ಪ್ರಕರಣ ಬೆಳಕಿಗೆ..!

masthmagaa.com:

ಉತ್ತರಪ್ರದೇಶದ ಹತ್ರಾಸ್​ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಾಸುವ ಮುನ್ನವೇ, ಅದೇ ಹತ್ರಾಸ್​ನಲ್ಲಿ 4 ವರ್ಷದ ಬಾಲಕಿ ಮೇಲೆ ಆಕೆಯ ಸಂಬಂಧಿ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇನ್ನು ಚಿತ್ರಕೂಟ್​​ ಎಂಬಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಎಸ್​ಸಿ/ಎಸ್​ಟಿ ಕಾಯ್ದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ಪ್ರತಾಪ್​ಗಢದಲ್ಲಿ ಅಪ್ರಾಪ್ತ ಬಾಲಕಿಗೆ ಗ್ರಾಮದ ಮೂವರು ನಿರಂತರವಾಗಿ ಕಿರುಕುಳ ನೀಡಿದ್ದರಿಂದ ಆಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಐಪಿಸಿ ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಓರ್ವ ಆರೋಪಿಯನ್ನ ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಬಲೆ ಬೀಸಲಾಗಿದೆ.

ಅತ್ಯಾಚಾರಿಗಳಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಅನ್ನೋ ಕೂಗು ಕೇಳಿ ಬರುತ್ತಿದ್ದರೂ ಇಂತಹ ಘಟನೆಗಳು ಮತ್ತೆ ಮರುಕಳಿಸುತ್ತಿವೆ. ನಿರ್ಭಯಾ ಆಯ್ತು, ಹೈದರಾಬಾದ್ ಆಯ್ತು, ಹತ್ರಾಸ್ ಆಯ್ತು.. ಆದ್ರೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಕೊಡುವ ಕಾನೂನು ಜಾರಿಗೆ ಬಂದಿಲ್ಲ. ಮತ್ತೊಂದುಕಡೆ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ.

-masthmagaa.com

Contact Us for Advertisement

Leave a Reply