ಟೆಕ್​ ಲೋಕಕ್ಕೆ ಈಗ ಭಾರತೀಯರೇ ಬಾಸ್​!

masthmagaa.com:

ಟ್ವಿಟ್ಟರ್ ಸಿಇಒ ಹುದ್ದೆಯಿಂದ ಜಾಕ್ ಡೋರ್ಸಿ ಕೆಳಗಿಳಿದಿದ್ದಾರೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಭಾರತ ಮೂಲದ ಪರಾಗ್ ಅಗರ್​ವಾಲ್​ ನೇಮಕವಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಜಾಕ್ ಡೋರ್ಸಿ, ಈ ಬಗ್ಗೆ ಯಾರಿಗೆಲ್ಲಾ ಗೊತ್ತಿದೆ ಅಂತ ನನಗೆ ಗೊತ್ತಿಲ್ಲ. ನಾನು ಟ್ವಿಟ್ಟರ್​​ಗೆ ರಿಸೈನ್​ ಮಾಡಿದ್ದೀನಿ ಅಂತ ಹೇಳಿದ್ದಾರೆ. ಜೊತೆಗೆ ಒಂದು ಪತ್ರವನ್ನು ಶೇರ್ ಮಾಡಿದ್ದು, ನಾನು ಕಂಪನಿಯ ಸಹ ಸಂಸ್ಥಾಪಕರಿಂದ ಹಿಡಿದು, ಸಿಇಒವರೆಗೆ ಜವಾಬ್ದಾರಿಗಳನ್ನು ನಿಭಾಯಿಸಿದ್ದೀನಿ. ಈಗ ಪರಾಗ್ ಅಗರ್​​ವಾಲ್ ಟ್ವಿಟ್ಟರ್​​​ನ ಹೊಸ ಸಿಇಒ ಆಗಿದ್ದಾರೆ ಅಂತ ಹೇಳಿದ್ದಾರೆ. ಈ ಜಾಕ್​ಡೋರ್ಸಿ ಬಗ್ಗೆ ನೋಡೋದಾದ್ರೆ, 2006ರಲ್ಲಿ ಟ್ವಿಟ್ಟರ್​​ ಸ್ಥಾಪಿಸಿದ್ರು. 2008ರವರೆಗೆ ಇವರೇ ಸಿಇಒ ಆಗಿದ್ರು. ಆದ್ರೆ ನಂತರ 2015ರಲ್ಲಿ ಮತ್ತೆ ಸಿಇಒ ಆಗಿ ನೇಮಕವಾಗಿದ್ರು. ಆದ್ರೀಗ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಗೆ ಕಾರಣ ಏನು ಅನ್ನೋ ಬಗ್ಗೆ ಹಲವು ಸುದ್ದಿಗಳು ಹರಿದಾಡ್ತಿವೆ. ಆದ್ರೆ ಪ್ರಮುಖ ಕಾರಣ ಅವರ ಮತ್ತೊಂದು ಸಂಸ್ಥೆ ಸ್ಕ್ವಾರ್​ ಅಂತ ಹೇಳಲಾಗ್ತಿದೆ. ಇವರು ಸ್ಕ್ವಾರ್ ಅನ್ನೋ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಿದ್ದು ಅದ್ರ ಸಿಇಒ ಕೂಡ ಆಗಿದ್ದಾರೆ. ಆದ್ರೆ ಇತ್ತೀಚೆಗೆ ಸ್ಕ್ವಾರ್ ಕಂಪನಿಯ ಹೂಡಿಕೆದಾರರು ಜಾಕ್ ಡೋರ್ಸಿ ಒಟ್ಟೊಟ್ಟಿಗೆ ಎರೆಡೆರಡು ಹುದ್ದೆಯನ್ನು ಪರಿಣಾಮಕಾರಿ ನಿರ್ವಹಿಸಲು ಸಾಧ್ಯವಾಗುತ್ತಾ ಅಂತ ಪ್ರಶ್ನೆ ಎತ್ತಿದ್ರು. ಇದೇ ಕಾರಣಕ್ಕೆ ತಮ್ಮ ಫುಲ್ ಟೈಮನ್ನು ಸ್ಕ್ವಾರ್ ಕಡೆಗೆ ನೀಡಲು ಜಾಕ್ ಡೋರ್ಸಿ ಈ ಹೆಜ್ಜೆ ಇಟ್ಟಿದ್ದಾರೆ ಅಂತ ಗೊತ್ತಾಗಿದೆ. ಇನ್ನು ಈಗ ಟ್ವಿಟ್ಟರ್​​ಗೆ ಹೊಸ ಬಾಸ್ ಆಗಿ ಆಯ್ಕೆಯಾಗಿರೋ ಪರಾಗ್ ಅಗರ್​​​​​​​​ವಾಲ್​​​ ಭಾರತದಲ್ಲೇ ಜನಿಸಿದ್ರು. ಬಾಲಿವುಡ್ ಗಾಯಕಿ ಶ್ರೇಯಾ ಘೋಷಾರ್​ರ ಬಾಲ್ಯದ ಸ್ನೇಹಿತರಾಗಿದ್ದಾರೆ. ಇವರು ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಶಿಕ್ಷಣ ಪಡೆದು, ನಂತರ ಸ್ಟಾನ್​ಫೋರ್ಡ್​ ಯೂನಿವರ್ಸಿಟಿಯಲ್ಲಿ ಇದೇ ವಿಚಾರವಾಗಿ ಪಿಹೆಚ್​​ಡಿ ಮಾಡಿದ್ರು. ಯಾಹೂ, ಮೈಕ್ರೋಸಾಫ್ಟ್​ನಲ್ಲಿ ಕೆಲಸ ಮಾಡಿದ ಇವರು 2011ರಲ್ಲಿ ಟ್ವಿಟ್ಟರ್ ಸೇರಿದ್ರು. 2018ರಲ್ಲಿ ಸಿಟಿಒ ಅಂದ್ರೆ ಚೀಫ್ ಟೆಕ್ನಾಲಜಿ ಆಫೀಸರ್ ಆಗಿಯೂ ಕೆಲಸ ಮಾಡ್ತಿದ್ಧಾರೆ. ಈಗ ಟ್ವಿಟ್ಟರ್ ಬೋರ್ಡ್​​ನ ಎಲ್ಲಾ ಡೈರೆಕ್ಟರ್​ಗಳು ಸಹಮತದಿಂದ ಪರಾಗ್ ಅಗರ್​ವಾಲ್​​ರನ್ನು ಸಿಇಒ ಆಗಿ ನೇಮಿಸಿದ್ದಾರೆ. ಟ್ವಿಟ್ಟರ್​ನಲ್ಲೇ ಇದ್ರೂ ಜಾಸ್ತಿ ಟ್ವೀಟ್ ಮಾಡದ ಪರಾಗ್​​​, ಕೆಲಸದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಜಾಕ್​ ಡೋರ್ಸಿಯವರ ರೀಸೆಂಟ್ ಪತ್ರದಲ್ಲೂ ಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಪರಾಗ್​, ನಾನು ಭವಿಷ್ಯದ ಕುರಿತು ಉತ್ಸುಕನಾಗಿದ್ದೀನಿ. ಜಾಕ್ ಡೋರ್ಸಿ ಮತ್ತು ತಂಡಕ್ಕೆ, ನನ್ನ ಮೇಲೆ ನಂಬಿಕೆ ಇಟ್ಟಿರೋರಿಗೆ ಧನ್ಯವಾದ ಅಂತ ಹೇಳಿದ್ದಾರೆ. ಇನ್ನು ವಿಶ್ವದ ಪ್ರಮುಖ 500 ಟೆಕ್​​ ಸಂಸ್ಥೆಗಳ ಸಿಇಒಗಳ ಪೈಕಿ ಯಂಗೆಸ್ಟ್​ ಸಿಇಒ ಅನ್ನೋ ಹೆಸರಿಗೂ 37 ವರ್ಷದ ಪರಾಗ್ ಪಾತ್ರವಾಗಿದ್ದಾರೆ.

ಈ ಮೂಲಕ ವಿಶ್ವದ ದೊಡ್ಡ ದೊಡ್ಡ ಟೆಕ್ ಕಂಪನಿಗಳಲ್ಲಿ ಭಾರತ ಮೂಲದವರೇ ಸಿಒಒ ಆದಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸ್ಟ್ರೈಪ್ ಅನ್ನೋ ಹಣಕಾಸು ಕಂಪನಿಯ ಸಿಇಒ ಪ್ಯಾಟ್ರಿಕ್ ಕೊಲಿಸನ್​​, ಗೂಗಲ್, ಮೈಕ್ರೋಸಾಫ್ಟ್, ಅಡೋಬ್, ಐಬಿಎಂ ಮತ್ತು ಈಗ ಟ್ವಿಟರ್​​ನ್ನು ಭಾರತದಲ್ಲಿ ಬೆಳೆದ ಸಿಇಒಗಳು ನಡೆಸ್ತಿದ್ದಾರೆ. ಟೆಕ್ನಾಲಜಿ ಲೋಕದಲ್ಲಿ ಭಾರತೀಯರ ಯಶಸ್ಸು ತುಂಬಾ ಅದ್ಭುತವಾಗಿದೆ ಅಂತ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್​​, ಭಾರತದ ಟ್ಯಾಲೆಂಟ್​​ಗಳಿಂದ ಅಮೆರಿಕಕ್ಕೆ ತುಂಬಾ ಲಾಭವಾಗ್ತಿದೆ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply