ಭಾರತ-ಚೀನಾ ಡಿಶುಂ ಡಿಶುಂ! ಚೀನಾಗೆ ಹೋಗಲ್ಲ ಎಂದ ಕೇಂದ್ರ ಸಚಿವ!

masthmagaa.com:

ಖಲಿಸ್ತಾನ ವಿಚಾರವಾಗಿ ಒಂದು ಕಡೆ ಕೆನಡಾ ಕಿರಿಕಿರಿ ಮಾಡ್ತಿದ್ರೆ, ಇನ್ನೊಂದ್‌ ಕಡೆ ಅರಣಾಚಲದ ವಿಚಾರವಾಗಿ ಚೀನಾ ಬಾಲ ಬಿಚ್ಚಿದೆ. ಇದೀಗ ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅರುಣಾಚಲ ಪ್ರದೇಶದ ಮೂವರು ವೂಶೂ ಕ್ರೀಡಾಪಟುಗಳಿಗೆ ಚೀನಾ ಪ್ರವೇಶ ನಿರಾಕರಿಸಿದೆ. 10 ಆಟಗಾರರನ್ನೊಳಗೊಂಡ ತಂಡದಲ್ಲಿ ಮೂವರು ಮಹಿಳಾ ಆಟಗಾರರಿಗೆ ಪ್ರವೇಶ ನಿರಾಕರಿಸಿದ್ದು, ಉಳಿದವರು ಚೀನಾಗೆ ತೆರಳಿದ್ದಾರೆ. ಇನ್ನು ಚೀನಾ ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಮಾಹಿತಿ ಮತ್ತು ಪ್ರಸಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ತಮ್ಮ ನಿಗದಿತ ಚೀನಾ ಪ್ರವಾಸವನ್ನ ರದ್ದುಗೊಳಿಸಿದ್ದಾರೆ. ಈ ಮೂಲಕ ರಾಜತಾಂತ್ರಿಕವಾಗಿ ಚೀನಾದ ನಡೆಗೆ ವಿರೋಧ ವ್ಯಕ್ತಪಡಿಸಲಾಗಿದೆ ಅಂತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಜೊತೆಗೆ ಚೀನಾ ನಮ್ಮ ಕ್ರೀಡಾಪಟುಗಳಿಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದೆ. ಚೀನಾದ ಈ ನಡೆಯು ಏಷ್ಯನ್ ಗೇಮ್ಸ್‌ನ ಉತ್ಸಾಹ ಹಾಗೂ ನಿಯಮವನ್ನೂ ಉಲ್ಲಂಘಿಸುತ್ತದೆ ಅಂತ ಭಾರತ ಅಸಮಾಧಾನ ಹೊರಹಾಕಿದೆ. ಅಲ್ದೆ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾದ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಅಂತ ಭಾರತ ಸರ್ಕಾರ ಪರಿಗಣಿಸ್ತದೆ. ವಾಸಸ್ಥಳ, ಜನಾಂಗೀಯತೆಯ ಆಧಾರದ ಮೇಲೆ ನಾಗರಿಕರನ್ನು ಭೇದ-ಭಾವದಿಂದ ನೋಡುವುದನ್ನ ದೃಢವಾಗಿ ತಿರಸ್ಕರಿಸುತ್ತದೆ. ನಮ್ಮ ಹಿತಾಸಕ್ತಿಯನ್ನ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವ ಹಕ್ಕನ್ನು ಭಾರತ ಹೊಂದಿದೆ ಅಂತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂದ್ಹಾಗೆ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಅನ್ನೋ ಮೂರು ಆಟಗಾರ್ತಿಯರು ಚೀನಾಗೆ ಹೋಗಬೇಕಿತ್ತು. ಆದ್ರೆ ಬುಧವಾರ ಏಷ್ಯನ್ ಗೇಮ್ಸ್‌ಗೆ ತೆರಳಬೇಕಿದ್ದಾಗ ಅರುಣಾಚಲ ಪ್ರದೇಶದ ಮೂವರು ಆಟಗಾರರು ತಮ್ಮ ಪ್ರಯಾಣದ ದಾಖಲೆಗಳನ್ನ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮೂವರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಅಂತ ತಿಳಿದುಬಂದಿದೆ. 10 ಆಟಗಾರರನ್ನೊಳಗೊಂಡ ತಂಡದಲ್ಲಿ ಉಳಿದ ಯಾವುದೇ ಆಟಗಾರರು ಮತ್ತು ಸಿಬ್ಬಂದಿಗೆ ಈ ಸಮಸ್ಯೆ ಎದುರಾಗಿಲ್ಲ. ಆದ್ರೆ ಇವರು ಡೌನ್‌ಲೋಡ್‌ ಮಾಡಿಲ್ಲ ಅಂತೇಳಿ ಚೀನಾ ಸರ್ಕಾರ ಕಾರಣ ಕೊಟ್ಟು ಅವರನ್ನ ಹೊರಗುಳಿಯುವಂತೆ ಮಾಡಿದೆ.

-masthmagaa.com

Contact Us for Advertisement

Leave a Reply